ಚಿಮ್ಮಲಗಿ ಏತ ನೀರಾವರಿಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಸಂಗಮೇಶ ಸಗರ ಆಗ್ರಹ
ವಿಜಯಪುರ: ಜಿಲ್ಲೆಯಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಜಮೀನು ಕಳೆದುಕೊಂಡು ೪-೫ ವರ್ಷಗಳೆ ಕಳೆದರೂ ರೈತರಿಗೆ ಇಲ್ಲಿಯವರೆಗೆ ಪರಿಹಾರ ಬಂದಿರುವುದಿಲ್ಲ, ಕೋರ್ಟಿನ ಮುಖಾಂತರ ಹೋರಾಟ ಮಾಡಿ ಕೋರ್ಟಿನ ಆದೇಶದಂತೆ ಕೂಡಲೇ ಹೆಚ್ಚುವರಿ ಅವಾರ್ಡನ ಹಣ ಹಾಗೂ ಬಡ್ಡಿ ಹಾಕಿಕೊಡಬೇಕೆಂದು ಆದೇಶವಾಗಿದ್ದರೂ ಇಲ್ಲಿಯವರೆಗೆ ಯಾವುದೋ ಸಬೂಬು ಹೇಳಿ ರೈತರಿಗೆ ಅನ್ಯಾಯ, ಆರ್ಥಿಕ ಹೊಣೆ ಹಾಗೂ ಸಮಯ ಮಾಡುತ್ತಿರುವುದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆರೋಪಿಸಿದರು.
ಇನ್ನಾದರೂ ಕೆ.ಬಿ.ಜೆ.ಎನ್.ಎಲ್. ಉಪ ಮುಖ್ಯ ಅಭೀಯಂತರ ಸುರೇಶ ಹಯಾಳ ಅವರು ಕೂಡಲೇ ರೈತರ ಹಣ ಮಂಜೂರು ಮಾಡುವಂತೆ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಆಗ್ರಹಸಿದರು.
ರೈತರು ತಮ್ಮ ಬೆಲೆಬಾಳುವ ಒಳ್ಳೆಯ ಫಲವತ್ತಾದ ಭೂಮಿಯನ್ನು ಚಿಮ್ಮಲಗಿ ಏತನೀರಾವರಿ ಯೋಜನೆಯ ಕಾಲುವೆಗೆ ಬಿಟ್ಟುಕೊಟ್ಟು ೪-೫ ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಅವರಿಗೆ ಭೂ-ಪರಿಹಾರ ಬಂದಿರುವುದಿಲ್ಲ, ಇನ್ನು ಹೆಚ್ಚುವರಿ ಅವಾರ್ಡಗಾಗಿ ಸಾಲಸೊಲಮಾಡಿ ಕೋರ್ಟನ ಮುಖಾಂತರ ಹೋರಾಡಿ ಕೋರ್ಟ ಆದೇಶ ಮಾಡಿ ವರ್ಷಗಳೆ ಕಳೆದರೂ ಇಲ್ಲಿಯವರೆಗೆ ಒಂದು ನಯಾಪೈಸೆ ಹಣಕೂಡಾ ಬಂದಿರುವುದಿಲ್ಲ ಎಂಬುದು ರೈತರ ಅಳಲಾಗಿದೆ, ಕೂಡಲೇ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆ.ಬಿ.ಜೆ.ಎನ್.ಎಲ್ ಕಚೇರಿ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ನಿಡಗುಂದಿ ತಾಲೂಕಾ ಅಧ್ಯಕ್ಷ ಡಾ ಕೆ..ಎಂ. ಗುಡ್ನಾಳ, ಗೌರವಾಧ್ಯಕ್ಷ ಅಲ್ಲಾಭಕ್ಷ ಲಕ್ಷರಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮೋತಿಲಾಲ ಉಣ್ಣಿಭಾವಿ, ಮುಖಂಡರಾದ ಸಂತೋಷ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

