ಸಿಂದಗಿ: ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಮಾಧ್ಯಮದವರನ್ನು ಹೀಯಾಳಿಸಿರುವುದು ಖಂಡನೀಯ ಎಂದು ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಕಾನಿಪ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮ ರಂಗವು ತನ್ನದೇಯಾದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮ ಕ್ಷೇತ್ರವನ್ನು ಹೊಗಳುವುದು ಬೇಡವಾದಾಗ ತೆಗಳುವುದು ಕೆಲವು ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸುತ್ತದೆ. ಅನಂತಕುಮಾರ ಹೆಗಡೆ ಅವರು ಜವಾಬ್ದಾರಿಯುತ ಸಂಸದರಾಗಿದ್ದು, ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದನ್ನು ಬಿಜೆಪಿ ಪಕ್ಷ ಗಂಬೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಸಾರಾಸಗಟವಾಗಿ ಮಾಧ್ಯಮದವರು ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಇತರೆ ರಾಜಕಾರಣಿಗಳಿಗೆ ಒಂದು ಪಾಠವಾಗಲಿ. ಕೂಡಲೇ ಅವರು ಬೇಷರತ್ತಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಸಿಂದಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸುತ್ತದೆ ಎಂದರು.
ಈ ವೇಳೆ ಕಾನಿಪ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪೂರ, ಪ್ರಧಾನ ಕಾರ್ಯದರ್ಶಿ ಭೀಮು ಕೆಂಭಾವಿ, ಖಜಾಂಚಿ ವಿಜಯಕುಮಾರ ಪತ್ತಾರ, ಸದಸ್ಯರಾದ ರಮೇಶ ಪೂಜಾರ, ರವಿಚಂದ್ರ ಮಲ್ಲೇದ, ಸುದರ್ಶನ ಜಂಗಣ್ಣಿ, ಮಹಾಂತೇಶ ನೂಲಾನವರ, ಶಿವಾನಂದ ಆಲಮೇಲ, ಇಸ್ಮಾಯಿಲ್ ಶೇಖ್, ಗುಂಡು ಕುಲಕರ್ಣಿ, ಭೋಜರಾಜ ದೇಸಾಯಿ, ವಿಶ್ವಪ್ರಕಾಶ ಮಲಗೊಂಡ, ನವೀನ ಶೆಳ್ಳಗಿ, ನಾಗೇಶ ತಳವಾರ, ಸಲೀಂ ಮರ್ತೂರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

