ಆಲಮಟ್ಟಿ: ಇಲ್ಲಿಯ ಕೃಷ್ಣೆಯ ತಟದ ಚಂದ್ರಗಿರಿ ಚಂದ್ರಮ್ಮಾ ದೇವಿ ಜಾತ್ರೆ ಮಾ.14 ರಿಂದ ಮೂರು ದಿನಗಳ ಕಾಲ ಜರುಗಲಿದೆ.
ಈ ಭಾಗದ ಅಸಂಖ್ಯಾತ ಭಕ್ತರ ಆರಾಧ್ಯ ದೇವಿ, ಚಂದ್ರಮ್ಮಳ ಪ್ರಭಾವ, ಶಕ್ತಿ ಅಪಾರ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.
ಜಾತ್ರೆಯಂಗವಾಗಿ ಮಾ.14 ರ ಬೆಳಿಗ್ಗೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಬೆಳಿಗ್ಗೆಯಿಂದಲೇ ಕೃಷ್ಣೆಯ ದಡದಿಂದ ದೇವಸ್ಥಾನದವರೆಗೆ ಸಹಸ್ರಾರು ಭಕ್ತರು ದೀಡ ನಮಸ್ಕಾರ ಹಾಕುತ್ತಾರೆ. ದೂರದಿಂದ ಬರುವ ಭಕ್ತರು ಒಂದೆರೆಡು ದಿನ ಮುಂಚಿತವೇ ಆಗಮಿಸಿ, ಇಲ್ಲಿಯೇ ವಸತಿಯಿದ್ದು, ನೇವೇದ್ಯೆ ಅರ್ಪಿಸಿ ಹೋಗುವ ಸಂಪ್ರದಾಯ ಹೆಚ್ಚು. ಹೀಗಾಗಿ ಈಗ ಆಲಮಟ್ಟಿಯ ಕೃಷ್ಣೆಯ ತಟದ ಸುತ್ತಲೂ ಜನ ತಂಡೋಪತಂಡವಾಗಿ ಠಿಕಾಣಿ ಹೂಡಿದ್ದಾರೆ. ಮೂರು ದಿನದ ಜಾತ್ರೆಯಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ನೂರಾರು ಸಂಖ್ಯೆಯ ಜೋಗಮ್ಮಗಳು ಇದ್ದು, ಜೋಗತಿ ಪದ ಹಾಡುತ್ತಾರೆ. ಅವಳಿ ಜಿಲ್ಲೆಯಲ್ಲಿ ನಾನಾ ಕಡೆ ಚಂದ್ರಮ್ಮ ದೇವಸ್ಥಾನಗಳಿದ್ದು, ಅವುಗಳಿಗೆಲ್ಲಾ ಆಲಮಟ್ಟಿ ಮೂಲಸ್ಥಾನ. ಪ್ರತಿ ಮಂಗಳವಾರ, ಗುರುವಾರ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಚಂದ್ರಮ್ಮಾ ದೇವಿಯ ಪವಾಡಗಳು ಬಬಲಾದಿ ಶಿವಶರಣ ಕಾರಣಿಕದಲ್ಲಿ ಉಲ್ಲೇಖವಾಗಿವೆ.
ಮೂರು ದಿನಗಳ ಕಾಲ ನಡೆಯುವ ಜಗನ್ಮಾತೆಯ ಜಾತ್ರೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತನು, ಮನ, ಧನವನ್ನು ಅಪರ್ಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಧರ್ಮರ ಮಠದ ಧರ್ಮಾಧಿಕಾರಿ ಸೋಮರಾವ ದೇಸಾಯಿ ಹಾಗೂ ಚಂದ್ರಮ್ಮದೇವಿ ಸೇವಾಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಕೃಷ್ಣೆಯ ಹಿನ್ನೀರಿನಲ್ಲಿ ಮೊಸಳೆಗಳಿರುವದರಿಂದ ಯಾರೂ ನೀರಿಗೆ ಇಳಿಯಬಾರದೆಂದು ಭಕ್ತರಲ್ಲಿ ವಿನಂತಿಸಿದ್ದಾರೆ.
ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯ ಭಕ್ತ ವೃಂದದವರು ನದಿ ದಂಡೆಗಳಲ್ಲಿ ಮಲೀನವಾಗದಂತೆ ನೋಡಿಕೊಳ್ಳಬೇಕು. ಆ ದಿಸೆಯಲ್ಲಿ ಜಾಗರೂಕತೆ ವಹಿಸಬೇಕು ಎಂಬುದು ಪ್ರಜ್ಞಾವಂತರ ಕೋರಿಕೆಯಾಗಿದೆ. ಜಾತ್ರೆ ಮುಗಿದ ಬಳಿಕ ಎಲ್ಲೆಂದರಲ್ಲಿ ನದಿದಂಡೆಯಲ್ಲಿ ಅಶುಚಿತ್ವ ವ್ಯಾಪಕವಾಗಿ ಗೋಚರಿಸುತ್ತದೆ. ಚಂದ್ರಮ್ಮದೇವಿ ಆರಾಧಿಸುವ ಮನಗಳು ಶುಚಿತ್ವ ಕಾಪಾಡಲಿ ಎಂಬುದೇ ಪರಿಸರವಾದಿಗಳ ಆಶಯವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

