ವಿಜಯಪುರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರೈತರಿಗೆ ಕರೆ
ವಿಜಯಪುರ: ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಿದರೆ ಆದಾಯ ದ್ವಿಗುಣವಾಗುವಾದರೊಂದಿಗೆ ರೈತರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೈತರಿಗಾಗಿ ಮೀಸಲಿಟ್ಟಿದೆ ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ವಿಜಯಪುರ ಹೊರವಲಯ ಹಿಟ್ಟಿನಹಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ೮೫ ಲಕ್ಷ ರೂಪಾಯಿ ಅನುದಾನದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೈತರ ವಸತಿ ನಿಲಯ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಅವರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ದೇವಸ್ಥಾನವಿದ್ದಂತೆ. ಇಲ್ಲಿ ಅನೇಕ ಮಾಹಿತಿಗಳು ದೊರೆಯುತ್ತವೆ. ಸರ್ಕಾರ ರೈತರಿಗೆ ನೀಡುವ ಸಹಾಯಧನ, ಬೆಳೆಗಳ ಬಗ್ಗೆ ಮಾಹಿತಿ, ರೋಗ ನಿರ್ವಹಣೆಗಳ ಕುರಿತು ಅನುಸರಿಸಬೇಕಾದ ವೈಜ್ಞಾನಿಕ ನಿರ್ವಹಣೆ, ಆಹಾರ ಸಂಸ್ಕರಣೆಯ ಮಾಹಿತಿ, ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ, ಅನೇಕ ತರಬೇತಿಗಳನ್ನು ನೀಡಲಾಗುತ್ತದೆ. ಇದನ್ನು ರೈತರು ಪಡೆದುಕೊಂಡು ಆದಾಯ ದ್ವಿಗುಣವಾಗುವತ್ತ ಹೆಜ್ಜೆ ಹಾಕಬೇಕು ಎಂದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಆಡಳಿತದ ಸಮನ್ವಯದಿಂದ ರೈತರ ಬದುಕು ಹಸನು ಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಟೆಕ್ನಾಲಜಿಯ ಮೂಲಕ ಕೃಷಿಗೆ ಉತ್ತೇಜನ ನೀಡಿ ಸುಸ್ಥಿರ ಕೃಷಿ ಮಾಡುವಂತೆ ಪ್ರೋತ್ಸಾಹ ನೀಡಲಾಗಿದೆ ಎಂದು ತಿಳಿಸಿದರು.
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.
ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಎಸ್ಸಿಪಿ, ಎಸ್ಟಿಪಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪೆಟ್ರೋಲ್ ಚಾಲಿತ ಸಿಂಪರಣೆ ಯಂತ್ರಗಳನ್ನು ವಿತರಿಸಲಾಯಿತು. ಅಣಬೆಯ ಮೌಲ್ಯವರ್ಧನೆ ಉತ್ಪನ್ನಗಳ ಹಾಗು ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆ ಮೇಲೆ ಐಸಿಎಆರ್ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಸೋಧನ ಸಂಸ್ಥೆ ಬೆಂಗಳೂರಿನ ನಿರ್ದೇಶಕರಾದ ಡಾ. ವಿ. ವೆಂಕಟ ಸುಬ್ರಮಣಿಯನ್, ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಜಯಕುಮಾರ ಹೆಚ್, ಶ್ರೀನಿವಾಸ್ ಕೋಟ್ಯಾನ್, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಸ್. ಅಂಗಡಿ, ವಿದ್ಯಾಧಿಕಾರಿ ಡಾ. ಭಿಮಪ್ಪ. ಎ, ಸಹ ವಿಸ್ತರಣಾ ನಿರ್ದೇಶಕರಾದ ಡಾ. ಆರ್. ಬಿ. ಬೆಳ್ಳಿ ಉಪಸ್ತಿತರಿದ್ದರು.

