ವಿಜಯಪುರಕ್ಕೆ ಬೃಹತ್ ಪವನ ವಿದ್ಯುತ್ ಘಟಕ | ಯುವಕರಿಗೆ ಉದ್ಯೋಗಾವಕಾಶ | ಕೈಗಾರಿಕಾ ಕ್ರಾಂತಿಗೆ ನಾಂದಿ
ವಿಜಯಪುರ: ದೇಶದ ಎರಡನೇ ದೊಡ್ಡ ಪವನ ವಿದ್ಯುತ್ ಘಟಕವನ್ನು ತವರು ಜಿಲ್ಲೆ ವಿಜಯಪುರಕ್ಕೆ ತರಲು ಶ್ರಮಿಸುವುದರ ಮೂಲಕ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೈಗಾರಿಕಾ ಕ್ರಾಂತಿಗೆ ಮುಂದಡಿ ಇಡುವುದರ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕು ಕಟ್ಟಿಕೊಡಲು ಮುಂದಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಡಾ. ಎಂ.ಬಿ ಪಾಟೀಲ್ ರವರ ಕಾರ್ಯ ಅಭಿನಂದನಾರ್ಹ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ್ ಬಬಲೇಶ್ವರ ತಿಳಿಸಿದ್ದಾರೆ.
ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಎಂ ಬಿ ಪಾಟೀಲರು ನೀರಾವರಿ ಸಚಿವರಾಗಿದ್ದಾಗಿನ (2013 ರಿಂದ 2018 ರ) ಅವಧಿಯು ಬಸವ ನಾಡಿನ ಜನತೆಯ ಪಾಲಿಗೆ ಅದೊಂದು ನೀರಾವರಿ ಕ್ಷೇತ್ರದ ಅಭಿವೃದ್ಧಿಯ ಸುವರ್ಣ ಯುಗವಾಗಿತ್ತು. ಎಂ ಬಿ ಪಾಟೀಲರ ಕರ್ತೃತ್ವ ಶಕ್ತಿ ಮತ್ತು ದೂರ ದೃಷ್ಟಿಯಿಂದಾಗಿ ಬರದ ನಾಡು ಬಂಗಾರದ ನಾಡಾಗಿ ಇಂದು ಕಡು ಬೇಸಿಗೆಯಲ್ಲಿ ಜನ ನೆಮ್ಮದಿಯ ನಿಟ್ಟುಸಿರುಬಿಡಲು ಕಾರಣವಾಗಿದೆ. ಅಂದಿನ ಹಸಿರು ಕ್ರಾಂತಿ ಮಾಡಿದ ಪಾಟೀಲರು ಮತ್ತೆ ತಮ್ಮ ಪ್ರಾಮಾಣಿಕ ಕಳಕಳಿ ಮತ್ತು ಪ್ರಯತ್ನದಿಂದ ಇದೀಗ ಕೈಗಾರಿಕಾ ಕ್ರಾಂತಿ ಮಾಡಲು ಮುಂದಾಗಿರುವುದು ಹಾಗೂ ಸೌರ ವಿದ್ಯುತ್ ಕ್ಷೇತ್ರದ ದೈತ್ಯ ಕಂಪನಿಗಳಾಗಿರುವ ಸುಜ್ಞಾನ ಮತ್ತು ರೇನಸಾನ್ಸ್ ಕಂಪನಿಗಳು 36,000 ಕೋಟಿ ಹೂಡಿಕೆ ಮಾಡಲು ಮುಂದಾಗಿರುವುದು ವಿಜಯಪುರ ಜಿಲ್ಲೆಯ ಜನತೆಗೆ ಸಂತೋಷವನ್ನುಂಟು ಮಾಡಿದೆ. ಕಾರಣ ಜಿಲ್ಲೆಯ ಯುವಕರು ಹಾಗೂ ಜನತೆಯ ಪರವಾಗಿ ಸಚಿವ ಡಾ. ಎಂಬಿ ಪಾಟೀಲ್ ರವರಿಗೆ ತುಂಬು ಹೃದಯದ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುವುದಾಗಿ ಸಂಗಮೇಶ್ ಬಬಲೇಶ್ವರ ತಿಳಿಸಿದ್ದಾರೆ.

