ವ್ಯಂಗ್ಯೋತ್ಸವ’- ಶ್ರೀನಿವಾಸ ಜಾಲವಾದಿ, ಸುರಪುರ

‘ಏನು ಉಂಟು ನಿನ್ನಲ್ಲಿ ಮಾರಾಯ?’ ಕೇಳಿದ ರಬಡ್ಯಾ ಕಾಳ್ಯಾಗ
‘ಏನಲೇ ಯಪ್ಪಾ ಏನಾತು ನಿಂಗ?’ ಕಾಳ್ಯಾ ಆಶ್ಚಯದಿಂದ ಕೇಳಿದ
‘ಯಾಕ?’
‘ಅಲ್ಲಾ, ಉಡುಪಿ ಕುಂದಾಪುರ ಕಡೆ ಹೋಗಿದ್ದೇನ?’ ಕೇಳ್ದ ಕಾಳ್ಯಾ
‘ಯಾಕಲೇ ತಮ್ಮಾ ಏನಾಯಿತು?’ ಅಂದ ರಬಡ್ಯಾ
‘ ಮತ್ತs ಹಂಗ ಮಾತಾಡಕತ್ತಿದಿ’ ಅಂದ ಕಾಳ್ಯಾ
‘ಏ ಯಾಂವ ಎಲ್ಲಿ ಯಾಕ ಹೋಗವಲ್ನಕಲೇ, ನಿಂದೇನ ಹಚ್ಚಿದಿ, ಮದ್ಲೆ ಕುಡ್ಯಾಕ ನೀರಿಲ್ಲಂತ ಮಂದಿ ಗೊಳ್ಯಾಡಕುಂತಾರು’ ಅಂತ ಗುಡುಮ್ಯಾ ಬೈದ
‘ಅಲ್ಲಾ ಬೆಂಗಳೂರಾಗ ನೀರs ಇಲ್ಲಂತ ಮತ್ತ ಹ್ಯಾಂಗ?’ ಅಂದಳು ರಾಣಿ
‘ಅಲ್ಲಿ ಕುಡ್ಯಾಕು ನೀರಿಲ್ಲ, ತಕ್ಕೊಳಾಕು ನೀರಿಲ್ಲ’ ಅಂದ ಕಾಕಾ
‘ ಮತ್ತ ಮಂದಿ ಯಾನ ಮಾಡ್ತಾರು?’ ಕೇಳಿದ ಟುಮ್ಯಾ
‘ಯಾನು ಇಲ್ಲ ಜಾನೂ ಇಲ್ಲ, ಸಬ್ ಖಾಲಿ ಕಾಗಜ್ ಲೇಕರ ಹಾತ್ ಸಾಫ್ ಕರ್ತಾರೆ’ ಅಂತ ಬಾಶಾ ನಕ್ಕ
‘ಏ ಯಾವ ಸಾಪ ಅಲೇ, ಹಾವು ಏನು?’ ಅಂದ ಶೌರಿ
‘ಏ ಮತ್ತ ನೀರಿಲ್ಲ ಅಂತಾರು….ಮತ್ತ ತಮಿಳನಾಡಿಗಿ ನೀರ ಬಿಟ್ಟಾರಂತಲಾ’ ಎಂದ ಗುಂಡ್ಯಾ
‘ಅವು ಹಂಗೇ ಏಳಲೇ, ಇಲ್ಲಿ ಇಲ್ಲ ಅನ್ನೊದು ಅಲ್ಲಿ ರಾತ್ರೋರಾತ್ರಿ ನೀರ ಬಿಟ್ಟು ಸಾಜೂಕ ಆಗಾದು’ ಎಂದ ಕಾಕಾ
‘ಯಾವ ಗೋರ್ಮೆಂಟ್ ಇದ್ರೂನೂ ಇದೇ ಆಟನೇ, ತಮಿಳನಾಡಂದ್ರ ಸಾಕು ಅಂಜಿ ಸಾಯ್ತಾವು’ ಅಂದಳು ರಾಶಿ
‘ಎಲ್ಲಾ ಉತ್ತರಕುಮಾರನ ಪೌರುಷನ ನೋಡು’ ಅಂದ ಟುಮ್ಯಾ
‘ಇಂವಾ ಯಾಂವಲೇ ಅನಂತಕುಮಾರ ಹೆಗ್ಡೆನಗತೆ ಎಲ್ಲಾದಕ್ಕೂ ಅಡ್ಡಡ್ಡ ಬರ್ತಾನಲಲೇ?’ ಅಂದ ಗುಂಡ್ಯಾ
‘ಅಂವಾ ಅನಂತ ಐದ ವರ್ಷ ಕುಮಾರನಗತ್ಲೆ ಮಕ್ಕೊಂಡಿದ್ದ, ಈಗ ಎಚ್ಚರಾಗೇತಿ ಆ ಮೆಂಟಲ್ ಹಾಸ್ಪಿಟಲ್ದಾನೂ ಒದರ್ತಾವಲಾ ಹಂಗ ನಡಿಸ್ಯಾನು’ ಅಂದಳು ರಾಣಿ
‘ಏನರೇ ಮಾಡಿ ಎಂಪಿ ಟಿಕೇಟ್ ಗಿಟ್ಟಸಬೇಕಲಾ? ಅದ್ಕ ಸಿದ್ರಾಮುಲ್ಲಾಖಾನ ಅಂತ ಗಂಟ ಬಿದ್ದಾನು’ ಅಂದ ಶೌರಿ
‘ ಅದಕ್ಕs ಟಗರ ಎಗರಿ ಬಿದ್ದತಿ, ಏ ಅಂವಗ ಪಾರ್ಟಿಯಿಂದ ಹೊರಗ ಹಾಕ್ರಿ ಅಂತ ಸಿಟ್ಟೂರಿ ಮಗನಿಗಿ ಆರ್ಡರ್ ಮಾಡೇತಿ’ ಅಂದಳು ರಾಶಿ
‘ ಅದಕ್ಕ ಅಂವಾ ಏನಂದಾನು?’ ಎಂದ ಟುಮ್ಯಾ
‘ಏ ಅಂವಾ ಬ್ಯಾರೇ ಊರಂವ ಅದಾನು ನಾವು ಬ್ಯಾರೇ
ಊರವ್ರು ಅದಿವಿ, ಅಂವಗ ನಮ್ಗ ಸಂಬಂಧ ನಹೀ’ ಅಂತ ಮರಿ ಸಿಟ್ಟೂರಿ ಹೇಳೇತಿ
‘ ಮತ್ತs ಮೈಸೂರ ದಸರಾ ಸಿಂಹನ ಪಾಲಿಗಿ ಮಹಿಷಾಸುರನಗತ್ಲೆ ಆಗೇತಂತ?’ ಗುಂಡ್ಯಾ ಅಂದ
‘ಹಂ ಅಲ್ಲಿ ಸಾಕ್ಷಾತ್ ರಾಜರ್ನೆ ನಿಂದರಸವ್ರ ಅದಾರು’ ಅಂದ ರಬಡ್ಯಾ
‘ಇಲ್ಲಿ ಬೆಂಗಳೂರಾಗೂ ಹೃದಯತಜ್ಞರ್ನ ಕರ್ಕೊಂಡು ಬಂದಾರಲಾ?’ ಅಂದ ಕಾಕಾ
‘ಹಂ, ದೊಡ್ಡಗೌಡ್ರೆ ತಿರ್ಮಾನ ಮಾಡ್ಯಾರು…. ನಮೋ ಮಂಜುನಾಥಾ ಅಂತ’ ಅಂದಳು ರಾಣಿ
‘ಮತ್ತ ಮರಿ ಬಂಡೆ ಕತೆ?’ ಕೇಳಿದ ಶೌರಿ
‘ಬಂಡೆ ಹೃದಯ ಪರೀಕ್ಷೆ ನಡಿತೈತಿ ಈ ಸಲಾ ಭಜ೯ರಿ’ ಅಂತ ನಕ್ಕ ಗುಡುಮ್ಯಾ
‘ಮತ್ತ ವಿಶ್ವ ಮಹಿಳಾ ದಿನಾಚರಣೆ ಭಾರಿ ಆತಂತ?’ ಅಂದ ಕಾಳ್ಯಾ
‘ಯಾಕ ಆಗಬಾರದೇನಲೆ ಬಿಕನಾಸಿ ಹಳೆ ಬಿಕನಾಸಿ’ ಅಂತ ರಾಶಿ ಸ್ಟಾಟಿ ತಿವದ್ಳು
‘ಏ ನಾ ಎಲ್ಲಿ ಬ್ಯಾಡಂದಿನವಾ? ಮಾಡ್ರಿ ಬೇಕಾದಷ್ಟು ಭರ್ಜರಿ ಮಾಡ್ರಿ’ ಅಂದ ಕಾಳ್ಯಾ ಒಂದೇ ಏಟಿಗೆ ಮೆತ್ತಗಾಗಿ
‘ಹೆಣ್ಣಿನಿಂದಲೇ ಇಳೆ, ಹೆಣ್ಣಿನಿಂದಲೇ ಕಳೆ…..…ಹೆಣ್ಣೇ ಸರ್ವಕೂ ಮೂಲವಯ್ಯ’ ಎಂದ ಕಾಕಾ
‘ಹಂ ಮತ್ತs, ನಾರಿ ಜಗದ ರೂವಾರಿ ಅಲ್ಲಾ? ಈಗ ನೋಡು ನಮ್ಮ ರಾಷ್ಟ್ರಪತಿ ಅವರು ಹೆಣ್ಣು, ಅವರದು ಎಸ್ಟು ಗಾಂಭಿರ್ಯ, ಎಷ್ಟು ಸರಳತೆ ನೋಡಿರಿಲ್ಲ?’ ಕೇಳಿದಳು ರಾಶಿ
‘ತಾಯಿ ಹೆಂಡ್ತಿ ಮಗಳು ಸೊಸೆ ಮೊಮ್ಮಗಳು ಪ್ರೇಯಸಿ ಗೆಳತಿ ಗುರುಮಾತೆ……ದೇವಿ…. ಹೀಂಗ ಏನಪಾ ಎಲ್ಲಾ ಹೆಣ್ಣು, ಜಗತ್ತ ನಿಂತಿದ್ದ ಹೆಣ್ಣಿನ ಶಕ್ತಿಯಿಂದ’ ಅಂತ ಭಾಳ ಹೆಮ್ಮೆಯಿಂದ ಹೇಳಿದಳು ರಾಣಿ
‘ಹೌದು ಖರೇ ಐತಿ ಬಿಡು, ನಿನ್ನ ಮಾತು ನೂರಕ್ಕ ನೂರ ಕರೆಕ್ಟ ಐತಿ ತಗೋ’ ಅಂತ ಕಾಕಾ ಶಬ್ಭಾಶಗಿರಿ ಕೊಟ್ಟ
‘ಹಂ ಇದೇ ಖುಷಿಯಾಗ ಎಲ್ಲಾರ್ಗೂ ಫೇಡೆ ತಂದ ಹಂಚು’ ಎಂದ ಕಾಳ್ಯಾ
‘ಏ ಹಂಚೂಣ ತಗೋ, ನಿನ್ನಕಿಂತ ಹೆಚ್ಚಿಂದೇನೈತಿ …… ಆದ್ರs ಇಷ್ಟಲ್ಲಾ ಇದ್ರೂನು ಇನ್ನಾ ಹೆಣ್ಣಿನ ಮ್ಯಾಲಿನ ಶೋಷಣೆ ಅತ್ಯಾಚಾರ ದಬ್ಬಾಳಿಕೆ ನಿಂತಿಲ್ಲ ನೋಡು’ ಅಂದಳು ರಾಶಿ
‘ಕಿತ್ತೂರ ಚೆನ್ನಮ್ಮನಂತವರು ಸ್ಪೂರ್ತಿ ಆಗ್ಬೇಕು, ಕೈಯಾಗ ಹತಾರಿ ಬಂತಂದ್ರs ಎಲ್ಲಾ ತಂತಾನೇ ನಿಂದರ್ತಾವು’ಎಂದ ಶೌರಿ
‘ರಾಜ್ಯಸಭಾ ಎಲೆಕ್ಷನ್ದಾಗ ಅಡ್ಡ ಮತದಾನ ಮಾಡಿದವ್ರು ಆರಾಮಸೀರಿ ಅಡ್ಡಾಡಕತ್ತಾರಲಾ?’ ಅಂದ ರಬಡ್ಯಾ
‘ಸೋಮ ಸೇಕರ ಶಿವರಾತ್ರಿಯ ಸಿವ ರಾಮಾ ಅದಕ್ಕೆ ಆರಾಂ ‘ಕೈ’ಮಾಡ್ಕೊಂತ ಅಡ್ಯಾಡಕತ್ಯಾರು’ ಅಂದ ಟುಮ್ಯಾ
‘ಈ ಟುಮ್ಯಾಗೂ ಭಾರಿ ನಾಲೆಡ್ಜ ಐತಿ ಬಿಡು’ ಅಂದ ರಬಡ್ಯಾ
‘ಅಂವಾ ಅಂದ್ರs ಏನಂತ ತಿಳಿದಿ? ಮಂಡ್ಯದ ಗಂಡು ಅಂವಾ’ ಎಂದ ಗುಂಡ್ಯಾ
‘ಮಂಡ್ಯ ಅಂತಂದ ಕೂಡಲೇ ನೆಪ್ಪಾತು, ಗೌಡ್ತಿ ಟಿಕೇಟ್ ಏನಾತು?’ ಕೇಳ್ದ ಕಾಕಾ
‘ ಅಲ್ಲಿ ಕುಮ್ಮಿ ಕ್ಯಾಂಡಿಡೇಟ್ ಹಾಕಂಗ ಕಾಣ್ತೈತಿ’ ಅಂದ ಕಾಳ್ಯಾ
‘ಬೆಂಗಳೂರ ಉತ್ತರಕ ಒಂದ ಡೈನಮೇಟ್ ಇಟ್ಟಾನೂ, ಮತ್ತ ಇಲ್ಲಿ ಒಂದ ಸುರಂಗ ಒಗೆಕತ್ತಾನೇನು?’ ಕೇಳಿದ ಶೌರಿ
‘ನಮೋ ಶ್ಯಾಣ್ಯಾ ಕೂಡಿ ಕುಮ್ಮಿಗಿ ಸಪೋರ್ಟ ಕೊಟ್ಟಾರು’ ಅಂದಳು ರಾಣಿ
‘ಈಗ ನೋಡು ಒಂದ ಸಲ ಅಧಿಕಾರದ ರುಚಿ ಕಂಡವ್ರು, ಅಷ್ಟ ಸರಳಗೇ ಬಿಟ್ಟ ಕೊಡಂಗಿಲ್ಲ ನೋಡು’ ಅಂದ ಗುಂಡ್ಯಾ
‘ಹ್ಯಾಂಗ?’
‘ಈಗ ನೋಡು ಸಿಂಹ ಮೈಸೂರ ಹತ್ತ ವರ್ಸ ಆಳೇತಿ, ಮಾಜಿಮುಮಂ ಸದಾಗೌಡ ಬೆಂಗಳೂರ ಉತ್ತರ ಕಬ್ಜಾ ಮಾಡ್ಯಾರು, ಕಟೀಲ ಸದಾ ಕಾಲ ಎಂಪಿ ಮ್ಯಾಗ ರಾಜ್ಯಾಧ್ಯಕ್ಷ ಇದ್ರೂ, ಈಗ ಚೇಂಜ್ ಮಾಡ್ತೇವಿ ಅಂದ್ರs ಬ್ಯಾಡಂತಾರು’ ಗುಂಡ್ಯಾ ಹೇಳಿದ
‘ಬರೇ ಕಮಲ ಅಲ್ಲ ಕೈ ನೂ ಹಂಗೇನೇ, ಎಲ್ಲಾರೂ ಹಂಗೇನs, ಸಾಕಪಾ ನನಗಿನ್ನ ಅಂತ ಅನ್ನವ್ರು ಭಾಳಂದ್ರs ಭಾಳ ಕಡಿಮಿ’ ಅಂದ ಕಾಕಾ
‘ಸಿಎಎ ಅಸ್ತ್ರ ಒಗದೈತಿ ನಮೋ ಈಗ ಬಾಂಡ್ ಬಂದಾದ ಕಾಲಕ್ಕ?’ ಕೇಳ್ದ ಗುಡುಮ್ಯಾ
‘ಹೌಂದ ಮತ್ತ ಏನರೇ ಮಾಡ್ಬೇಕಲಾ? ಮತ್ತೆ ಲಾಟ್ರಿ ಹೊಡಿಲಿಕ್ಕಿ ಪ್ಲಾನ್ ಅವ ಇವು’ ಅಂದ ರಬಡ್ಯಾ
‘ಏನ ಬಿಸಲ ಹೆಚ್ಚಾಗಕತೈತಿ, ಇದರ ಮ್ಯಾಗ ಈ ರಾಜಕೀಯದೊರದು ಒಂದು ಕಚ್ಚಾಟ’ ಅಂದಳು ರಾಣಿ
‘ನಡಿರಿ ಎಲ್ಲಾರೂ ಹೋಗಿ ಪಾನಕಾ ಕುಡದು ನಾಮಿನೇಶನ್ ಮಾಡಿ ಬರಾಮು’ ಅಂದ ಟುಮ್ಯಾ
‘ಏನ್ ಹುಚ್ಚೈತೆಲೆ ಇದು, ಇನ್ನಾ ಚುನಾವಣಾ ಆಯಕ್ತರ್ನ ನೇಮಕ ಮಾಡಬೇಕು, ಅಲ್ಲಿಂದ ಅವ್ರು ಎಲೆಕ್ಷನ್ ಅನೌನ್ಸ್ ಮಾಡ್ಬೇಕು, ಅಲ್ಲಿಂದ ಶುರು ಅಲೇ ಅಖಾಡಾ’ ಎಂದ ಗುಡುಮ್ಯಾ
‘ನಡಿರಿ ಹಂಗಾರ ಅಲ್ಲಿ ತಂಕಾ ಗಿಚ್ಚ ಗಿಲಿಗಿಲಿ ನೋಡ್ಕೊಂಡ ಬರಾಮು’ ಅಂತ ಹೇಳಿ ಕಾಳ್ಯಾ ಎಲ್ಲಾರನೂ ಎಬ್ಬಸ್ಗೊಂಡ ಕರ್ಕೊಂಡ ಹೊಂಟ..
– ಶ್ರೀನಿವಾಸ ಜಾಲವಾದಿ, ಸುರಪುರ

