ಅಂಗಾಂಗ ದಾನದ ಕುರಿತು ಜನಜಾಗೃತಿ ಅಗತ್ಯ
ಡಾ. ಎಸ್. ಬಿ. ಪಾಟೀಲ ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮೂತ್ರ ಶಾಸ್ತ್ರದ ವಿಭಾಗದ ಮುಖ್ಯಸ್ಥರು, ವಿಜಯಪುರ

ಮೂತ್ರಪಿಂಡ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಭಾರತದಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಸಂಶೋಧನೆಗಳು ನಡೆಯುತ್ತಿವೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಜೀವನ ಶೈಲಿ ಸಂಬಂಧಿತ ಸಮಸ್ಯೆಗಳಿಂದ ಈ ಕಾಯಿಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಸಾವಿನ ಪ್ರಮುಖ ಕಾರಣಗಳಲ್ಲಿ 8ನೇ ಸ್ಥಾನ ಪಡೆದಿದೆ.ಭಾರತದಲ್ಲಿ ಪ್ರತಿವರ್ಷ ಮೂತ್ರಪಿಂಡ ಕಸಿ ಅಗತ್ಯವಿರುವ 2 ಲಕ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಆದರೆ 250 ಆಸ್ಪತ್ರೆಗಳಲ್ಲಿ ಕೇವಲ 7500 ರೋಗಿಗಳಿಗೆ ಮಾತ್ರ ಮೂತ್ರಪಿಂಡ ಕಸಿ ಸಾಧ್ಯವಾಗುತ್ತಿದೆ. ಅಗತ್ಯಕ್ಕಿಂತ ಕಡಿಮೆ ರೋಗಿಗಳಿಗೆ ಈ ಚಿಕಿತ್ಸೆ ಸಿಗುತ್ತಿರುವುದರಿಂದ ಉಳಿದವರಿಗೆ ಮೂತ್ರಪಿಂಡ ಕಸಿ ಅಥವಾ ನಿಯಮಿತ ಡಯಾಲಿಸಿಸ್ ಸೌಲಭ್ಯವೂ ಸಿಗದ ಕಾರಣ ಈ ರೋಗಿಗಳಲ್ಲಿ ಹೆಚ್ಚಿನವರು 2-3 ವರ್ಷಗಳಲ್ಲಿ ರೋಗಕ್ಕೆ ತುತ್ತಾಗುತ್ತಾರೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಾಗದೇ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಇದು ರೋಗಿಗಳು ಮತ್ತು ಅವರ ಕುಟುಂಬದ ಮೇಲೆ ಸಾಮಾಜಿಕ, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮವನ್ನು ಬೀರುತ್ತದೆ. ಮೂತ್ರಪಿಂಡದ ವೈಫಲ್ಯದ ರೋಗಿಗಳು ವಾರಕ್ಕೆ 2-3 ಬಾರಿ ಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ, ಕಟ್ಟುನಿಟ್ಟಾದ ಆಹಾರ ಪದ್ದತಿ ಮತ್ತು ನಿಯಮಿತ ಔಷಧಿ ಪಡೆದುಕೊಂಡು ಜೀವನವನ್ನು ನಡೆಸಬೇಕು. ಡಯಾಲಿಸಿಸ್ ಅವಲಂಬನೆ ತಪ್ಪಿಸುವ ಮೂತ್ರಪಿಂಡ ಕಸಿ ಏಕೈಕ ಆಯ್ಕೆಯಾಗಿದೆ.
ಕಳೆದ ಮೂರು ದಶಕಗಳಲ್ಲಿ, CKD ಚಿಕಿತ್ಸಾ ಪ್ರಯತ್ನಗಳು ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಕೇಂದ್ರೀಕೃತವಾಗಿವೆ. ಅಲ್ಲದೇ, ಈ ರೋಗವನ್ನು ತಡೆಗಟ್ಟಲು ಮತ್ತು ಮಧುಮೇಹ, ಹೃದಯ ರಕ್ತನಾಳದ ಕಾಯಿಲೆ ಹಾಗೂ ಮೂತ್ರಪಿಂಡದ ವೈಫಲ್ಯದಿಂದ ಉಂಟಾಗುವ ತೊಂದರೆಗಳನ್ನು ತಗ್ಗಿಸಲು ಸೂಕ್ತವಾದ ಔಷಧೀಯ ಸೇವನೆಗೆ ಒತ್ತು ನೀಡುವುದು ಈಗಿನ ಅಗತ್ಯವಾಗಿದೆ.
ಹೊಸ ಚಿಕಿತ್ಸಾ ವಿಧಾನಗಳ ಮೂಲಕ ಎಲ್ಲಾ ರೋಗಿಗಳಿಗೆ ವಿಶ್ವಾದ್ಯಂತ ಚಿಕಿತ್ಸೆ ನೀಡಲು ಸಾಧ್ಯವಿದೆಯಾದರೂ, ಈ ಕಾಯಿಲೆಗಳ ಬಗ್ಗೆ ಅರಿವಿನ ಕೊರತೆ, ದುಬಾರಿ ಎನಿಸುವ ಡಯಾಲಿಸಿಸ್ ವ್ಯವಸ್ಥೆ ಸೇರಿದಂತೆ ಕೆಲವು ಸಮಸ್ಯಗಳಿಂದಾಗಿ ಹೆಚ್ಚಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ತುಂಬಾ ವಿಷಾದನೀಯ. ಕೆಲವು ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿ ಡಯಾಲಿಸಿಸ್ ವ್ಯವಸ್ಥೆ ಸುಲಭವಾಗಿ ಸಿಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ಅರಿವು ಮತ್ತು ಚಿಕಿತ್ಸೆ ಕೊರತೆ, ಮೂಡನಂಬಿಕೆಗಳು, ಕೈಗೆಟುಕದ ಚಿಕಿತ್ಸೆಯಿಂದಾಗಿ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ರೋಗಿಗಳಿಗೆ ನಿಯಮಿತ ತಪಾಸಣೆಗೆ ಸೌಲಭ್ಯ ಹೆಚ್ಚಿಸುವುದು, ಆರಂಭದಲ್ಲಿಯೇ ರೋಗ ಪತ್ತೆ, ಸರಿಯಾದ ಔಷಧಿಯ ಸಲಹೆ, ಜೀವನಶೈಲಿ ಸುಧಾರಣೆ, ಜೀವನದ ಹೊಸ ಭರವಸೆಯನ್ನು ಮೂಡಿಸುವ ಕಾರ್ಯತಂತ್ರದ ಅಗತ್ಯವಿದೆ. ಸರಕಾರದ ಆರೋಗ್ಯ ನೀತಿಗಳು, ಆರೋಗ್ಯ ಸೇವೆಗಳ ತಲುಪಿಸುವಿಕೆ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು, ಡಯಾಲಿಸಿಸ್ ಘಟಕಗಳ ಹೆಚ್ಚಳ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳ ಸಹಭಾಗಿತ್ವದ ಅಗತ್ಯವಿದೆ.
ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಕಿಡ್ನಿದಾನದ ಕುರಿತು ಪ್ರೋತ್ಸಾಹ ನೀಡುವುದು, ಅಂಗಾಂಗ ಕಸಿ ಚಿಕಿತ್ಸಾ ವೆಚ್ಚ ತಗ್ಗಿಸುವುದು, ನಾನಾ ಕಾರಣಗಳಿಂದ ಸಾವಿಗೀಡಾಗುವ ಮತ್ತು ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಗಳ ಅಂಗಾಂಗ ದಾನದ ಕುರಿತು ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪ್ರತಿ ವರ್ಷ ಸುಮಾರು 1 ರಿಂದ 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದು, ಇಂಥ ವ್ಯಕ್ತಿಗಳಿಂದ ಪಡೆಯಬಹುದಾದ ಅಂಗಾಂಗಗಳ ಕುರಿತು ಅವರ ಸಂಬಂಧಿಗಳ ಮನವೊಲಿಸಿ ಅಂಗಾಂಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡುವ ಮೂಲಕ ಮರುಜೀವ ನೀಡಬಹುದಾಗಿದೆ.
ಈ ಬಾರಿ ವಿಶ್ವ ಕಿಡ್ನಿ ದಿನದ -2024 ಘೋಷವಾಕ್ಯ “ಎಲ್ಲರಿಗೂ ಕಿಡ್ನಿಯ ಆರೋಗ್ಯ: ಆರೈಕೆಗೆ ಸಮಾನವಾದ ಮತ್ತು ಚಿಕಿತ್ಸೆ ಒದಗಿಸುವುದು ಎಂಬುದಾಗಿದೆ”. ಈ ನಿಟ್ಟಿನಲ್ಲಿ ಇದನ್ನು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸಿ ಶ್ರೀ ಬಿ. ಎಂ. ಪಾಟೀಲ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಸಚಿವರಾದ ಎಂ. ಬಿ. ಪಾಟೀಲ, ಪ್ರಾಚಾರ್ಯ ಅರವಿಂದ ಪಾಟೀಲ ಮತ್ತು ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಮೂತ್ರಪಿಂಡ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲು ಹಾಗೂ ಕಡಿಮೆ ದರದಲ್ಲಿ ಮೂತ್ರಪಿಂಡ ಕಸಿ ಚಿಕತ್ಸೆ ನೀಡಲು ಬದ್ದವಾಗಿದೆ. ಈಗಾಗಲೇ ಈ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಡಯಾಲಿಸಿಸ್ ಘಟಕಗಳನ್ನು ಹೆಚ್ಚಿಸುವ ಮೂಲಕ ವಿಜಯಪುರ ಮತ್ತು ಸುತ್ತಮುತ್ತಲಿನ ರೋಗಿಗಳಿಗೆ ಅನಕೂಲವಾಗಿದೆ. ಈ ವಿವಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದು, ಸರಕಾರಿ ಆರೋಗ್ಯ ವಿಮೆ ಯೋಜನೆಗಳಡಿ.(ಆಯುಷ್ನಾನ್ ಭಾರತ್ ಮತ್ತು ಎ ಬಿ ಎ ಆರ್ ಕೆ) ಕಿಡ್ನಿ ಕಸಿ ಸೌಲಭ್ಯ ಲಭ್ಯವಿದೆ.
ಕಿಡ್ನಿ ಕಸಿ ಅಗತ್ಯವಿರುವ ರೋಗಿಗಳು Jeevasartakathe ವೆಬ್ಸೈಟ್ ಮೂಲಕ ಅಥವಾ ಆಸ್ಪತ್ರೆಗೆ ಬೇಟಿ ನೀಡುವ ಮೂಲಕ ಹೆಸರು ನೊಂದಾಯಿಸಬಹುದಾಗಿದೆ. ಈ ಮೂಲಕ ಕಿಡ್ನಿಗಳು ಲಭ್ಯವಿದ್ದಾಗ ಕಿಡ್ನಿ ಕಸಿ ಮಾಡಿಕೊಳ್ಳಬಹುದಾಗಿದೆ.

ಡಾ. ಎಸ್. ಬಿ. ಪಾಟೀಲ.

