ಇಂದು ವಿಶ್ವ ಪೈ ದಿನ
ಸಂತೋಷ ಎಸ್ ಬಂಡೆಶಿಕ್ಷಕರು, ನಾಗಠಾಣ

ಇಂದು ವಿಶ್ವ ಪೈ ದಿನ .ಪೈ ಅನ್ನು ಜಗತ್ತಿನ ಅದ್ಭುತ ಅನ್ವೇಷಣೆ ಎಂದು ಕರೆಯುತ್ತಾರೆ. ಗ್ರೀಕ್ ಭಾಷೆಯ ಈ ಪದದಿಂದ ಗಣಿತದ ಕಠಿಣ ಸೂತ್ರಗಳನ್ನು ಸುಲಭವಾಗಿ ಬಿಡಿಸಬಹುದು. ಗಣಿತದ ಪೈ ನ ಜನಪ್ರಿಯತೆಯಿಂದಾಗಿ ಒಂದು ವಿಶೇಷ ದಿನವನ್ನು ನಿಗದಿಗೊಳಿಸಲಾಗಿದೆ. ಆ ದಿನವೇ ಮಾರ್ಚ್ 14. ಈ ದಿನವನ್ನು ವಿಶ್ವದೆಲ್ಲೆಡೆ ಪೈ ಡೇ ಎಂದು ಆಚರಿಸಲಾಗುತ್ತದೆ.
ಪೈ" ಎಂದು ಉಚ್ಚರಿಸುವ ಗಣಿತದ ಸ್ಥಿರಾಂಕ (π), ವೃತ್ತದ ಸುತ್ತಳತೆಯ ಅನುಪಾತವನ್ನು ಅದರ ವ್ಯಾಸಕ್ಕೆ ಪ್ರತಿನಿಧಿಸುತ್ತದೆ. ಇದು ವಿಶೇಷ ಸಂಖ್ಯೆ ಏಕೆಂದರೆ, ವೃತ್ತವು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಈ ಅನುಪಾತವು ಯಾವಾಗಲೂ ಒಂದೇ ಆಗಿರುತ್ತದೆ. ಇದು ಭೌತಶಾಸ್ತ್ರ, ಗಣಿತ, ಕಲೆ ಮತ್ತು ಎಂಜಿನಿಯರಿಂಗ್‌ನಂತಹ ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ ಸ್ಥಿರತೆಯನ್ನು ಮಾಡುತ್ತದೆ. ಇದರ ಅಂದಾಜು ಮೌಲ್ಯ 3.14159 ಎಂದು ಹೇಳಲಾಗುತ್ತಿದೆ. ಇದರ ದಶಮಾಂಶ ಸಂಖ್ಯೆ ಕೊನೆಗೊಳ್ಳುವುದೇ ಇಲ್ಲ. ವೃತ್ತ, ದೀರ್ಘ ವೃತ್ತ, ಗೋಳಗಳ ಮೌಲ್ಯ ಕಂಡು ಹಿಡಿಯಲು ಪೈ ಬೇಕೇ ಬೇಕು. ಈ ಪದವನ್ನು ಕಾಸ್ಮೊಲಾಜಿ, ಥರ್ಮೊಡೈನಾಮಿಕ್ಸ್, ಮೆಕ್ಯಾನಿಕ್ಸ್ ಮತ್ತು, ಎಲೆಕ್ಟ್ರೋಮ್ಯಾಗ್ನೇಟಿಕ್ ಕ್ಷೇತ್ರಗಳಲ್ಲಿ ಹೆಚ್ಚು ಬಳಸಲಾಗುತ್ತದೆ.
ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಎಲ್ಲೆಲ್ಲಿ ವೃತ್ತ ಬರುತ್ತದೆಯೊ ಅಲ್ಲೆಲ್ಲ ಪೈ ಪ್ರತ್ಯಕ್ಷ. ಕ್ರಿಸ್ತ ಪೂರ್ವದ ದಿನಗಳ ಬೆಬಿಲೊನಿಯಾ, ಈಜಿಪ್ತ್ ಗಣಿತಜ್ಞರಿಗೆ ಪೈ ಬೆಲೆ ಸರಿ ಸುಮಾರು 3.1 ಎಂದು ತಿಳಿದಿತ್ತು. ಒಂದು ವೃತ್ತಕ್ಕೆ ಅದರದ್ದೇ ಆದ ಒಂದು ನಿರ್ದಿಷ್ಟ ಪರಿಧಿ ಎಂಬುದಿದೆ. ವೃತ್ತದ ಗೆರೆಯ ಮೇಲೆ ಒಂದು ಬಿಂದುವಿನಿಂದ ಹೊರಟ ನೀವು ಮತ್ತೆ ಅದೇ ಬಿಂದುವಿಗೆ ತಲುಪುತ್ತೀರಿ . ಗೆರೆಯ ಮೇಲೆ ನೀವು ಕ್ರಮಿಸಿದ ದೂರವೇ ಆ ವೃತ್ತದ ಪರಿಧಿ. ವೃತ್ತದ ಪರಿಧಿಯನ್ನು ಅದರ ವ್ಯಾಸದಿಂದ ಭಾಗಿಸಿದರೆ ದೊರೆಯುವ ನಿಷ್ಪತ್ತಿ (ಭಾಗಲಬ್ಧ) ಒಂದು ಸಂಖ್ಯೆ ಮಾತ್ರವಲ್ಲ . ಅದೊಂದು ನಿಯತಾಂಕ. ಈ ನಿಯತಾಂಕವೇ ಪೈ. ಒಂದು ವೃತ್ತದ ವ್ಯಾಸ ಇನ್ನೊಂದು ವೃತ್ತದ ವ್ಯಾಸದ ದುಪ್ಪಟ್ಟು ಇದ್ದರೆ, ಅದರ ಪರಿಧಿಯು ದುಪ್ಪಟ್ಟಾಗುತ್ತದೆ. ಆದರೆ ಇವರೆಡರ ನಿಷ್ಪತ್ತಿ ಮಾತ್ರ ಒಂದೇ . ಅದುವೇ ಪೈ. ಪೈ ಸೂಚಿತವಾಗಿರುವುದು ಗ್ರೀಕ್ ವರ್ಣಮಾಲೆಯ ಅಕ್ಷರದಿಂದ.
ಬ್ರಿಟಿಷ್ ಗಣಿತಜ್ಞ ವಿಲಿಯಮ್ ಜೋನ್ಸ್ (1675-1749) ಪೈ ಅಕ್ಷರವನ್ನು ಅನುಪಾತವನ್ನು ಪ್ರತಿನಿಧಿಸಲು ಬಳಸಿದ ಮೊದಲ ಗಣಿತಜ್ಞ. ಇವರು ಇದನ್ನು 1706ರಲ್ಲಿ ಗಣಿತಶಾಸ್ತ್ರಕ್ಕೆ ಹೊಸ ಪರಿಚಯ ಎಂಬ ತಮ್ಮ ಪುಸ್ತಕದಲ್ಲಿ ಉಪಯೋಗಿಸಿದರು. ಆತನ ಸಮಕಾಲೀನ ಮತ್ತು ಶ್ರೇಷ್ಠ ಗಣಿತ ಶಾಸ್ತ್ರಜ್ಞ ಸ್ವಿಜರ್ಲೆಂಡ್‌ನ ಲಿಯಾನಾರ್ಡೊ ಆಯ್ಲರ್ (1700-1783) ಅದನ್ನೇ ಮತ್ತೆ ಮತ್ತೆ ತಮ್ಮ ಸಂಶೋಧನ ಲೇಖನಗಳಲ್ಲಿ ಬಳಸುತ್ತ ಪ್ರಚಾರಕ್ಕೆ ತಂದು ಅದಕ್ಕೊಂದು ಅಮರತ್ವ ನೀಡಿದರು. 1736ಕ್ಕೂ ಮುನ್ನ ವೃತ್ತದ ಸುತ್ತಳತೆ ಮತ್ತು ಅನುಪಾತವನ್ನು ಕಂಡು ಹಿಡಿಯಲು ಸಿ ಮತ್ತು ಪಿ ಎಂಬ ಅಕ್ಷರಗಳನ್ನು ಉಪಯೋಗಿಸಲಾಗುತಿತ್ತು.
ನಾವು ಸಾಮಾನ್ಯವಾಗಿ ಪೈ ಅಂದೊಡನೆ 22/7 ಎಂದು ಬರೆಯುತ್ತೇವೆ. ಇದು ಸುಪ್ರಸಿದ್ಧ. ಈ ಬಗೆಯನ್ನು ಸೂಚಿಸಿದವನು ಗ್ರೀಕ್‌ನ ಗಣಿತಜ್ಞ ಹಾಗೂ ಭೌತ ವಿಜ್ಞಾನಿ ಆರ್ಕಿಮಿಡಿಸ್. ವೃತ್ತ ಒಳ ಮತ್ತು ಹೊರಗೆ ಹಿಡಿಸುವಂತೆ ಬಹುಭುಜಾಕೃತಿಯನ್ನು ಎಳೆದದ್ದಾದರೆ, ಒಳಗಿನ ಬಹುಭುಜದ ಸುತ್ತಳತೆ ಮತ್ತು ಹೊರಗಿನ ಬಹುಭುಜದ ಸುತ್ತಳತೆಯ ನಡುವಣ ಬೆಲೆ ಪೈ ಆಗಿರುತ್ತದೆಂದು ಹೇಳಿದ್ದಲ್ಲದೆ ಪೈ ಬೆಲೆಯನ್ನು ಸರಿ ಸುಮಾರಾಗಿ 223/71 ಮತ್ತು22/7 ಇವೆರಡರ ನಡುವೆ ಇದೆ ಎಂದು ನಿರೂಪಿಸಿದ. 22/7 ಗರಿಷ್ಠ ಬೆಲೆ ನೀಡುತ್ತದೆ ಮತ್ತು ನೆನಪಿಡಲು ಸುಲಭ ಎಂದೇ ಇದು ಜನಪ್ರಿಯವಾಯಿತು.
– ಸಂತೋಷ ಎಸ್ ಬಂಡೆ
ಶಿಕ್ಷಕರು, ನಾಗಠಾಣ

