ಮಹಿಳಾ ವಿವಿಯ ಪಿ.ಎಚ್.ಡಿ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ
ವಿಜಯಪುರ: ಅಕ್ಕಮಹಾದೇವಿ ಮಹಿಲಾ ವಿವಿಯಲ್ಲಿ ಪಿಎಚ್.ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರೊ . ಮಲ್ಲಿಕಾರ್ಜುನ ಎನ್.ಎಲ್ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ನೌಕರಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ವೀಣಾ ಕುಂದನಗಾರ ಮಾತನಾಡಿ, ಕಳೆದೆರಡು ವಾರಗಳ ಹಿಂದೆ ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪಿಎಚ್.ಡಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ವಿಶ್ವವಿದ್ಯಾಲಯದ ಮ್ಯಾನೇಜ್ ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ . ಎಂಬುವವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿರುತ್ತದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿಯೇ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿದ್ದು ಸದರಿ ವಿದ್ಯಾನಿಲಯದಲ್ಲಿ ಕಡು ಬಡವ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲಕರವಾಗಿರಲಿ ಹಾಗೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಮನಗಂಡ ಸರ್ಕಾರಗಳು ಪ್ರತಿಷ್ಠಿತ ವಿಶ್ವವಿದ್ಯಾನಿಲಯವನ್ನು ಅತೀ ಹಿಂದುಳಿದ ಬರಗಾಲ ಪೀಡಿತ ವಿಜಯಪುರ ಜಿಲ್ಲೆಯಲ್ಲಿ ಸ್ಥಾಪನೆ ಮಾಡಿತು. ಈ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿನಿಯರು ಹಲವು ಸಂಕಟ ತಾಪತ್ರಯಗಳ ಮಧ್ಯ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಅದರಲ್ಲಿ ಸಾಕಷ್ಟು ವಿದ್ಯಾರ್ಥಿನಿಯರು ಚಿನ್ನದ ಪದಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಕೀರ್ತಿತಂದಂತಹ ಹೆಮ್ಮೆ ನಮ್ಮದು. ಅಂತಹದರಲ್ಲಿ ಇಂತಹ ನೀಚ ಕೃತ್ಯವೆಸಗುತ್ತಿರುವ ಮೃಗಕ್ಕೆ ಸಮಾನವಾಗಿರುವ ಮಾನವ ರಾಕ್ಷಸರು ಈ ವಿಶ್ವವಿದ್ಯಾನಿಲಯದಲ್ಲಿ ಸೇರಿಕೊಂಡಿರುವುದು ದುರಂತದ ಸಂಗತಿ. ಈಗಾಗಲೇ ವಿದ್ಯಾರ್ಥಿನಿಯರು ಮಾನ್ಯ ಕುಲಸಚಿವರು ಹಾಗೂ ಕುಲಪತಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಕೂಡಲೇ ಕ್ರಮ ಜರುಗಿಸಬೇಕಾಗಿತ್ತು . ಆದರೆ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಯಾವುದೇ ಆಸಕ್ತಿ ತೋರದೆ ಆಂತರಿಕ ತನಿಖಾ ವಿಭಾಗಕ್ಕೆ ಹಸ್ತಾಂತರಿಸಿ ಕೈ ತೊಳೆದುಕೊಂಡಿದ್ದಾರೆ. ಇದು ನೋವಿನ ಸಂಗತಿಯಾಗಿದೆ. ಲೈಂಗಿಕ ಕಿರುಕುಳದ ರೂವಾರಿ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ ಇವರ ಮೇಲೆ ಸೂಕ್ತ ತನಿಖೆ ಕೈಗೊಂಡು ಇವರಿಗೆ ಕಾನೂನು ರೀತಿಯಲ್ಲಿ ಕ್ರಮ ಗೊಳ್ಳಬೇಕು. ಹಾಗೂ ಇವರನ್ನು ನೌಕರಿಯಿಂದ ವಜಾಗೊಳಿಸಿ ನೊಂದ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾ ಮುಖಂಡರಾದ ಶಿವಗಂಗಾ ಕಟ್ಟಿಮನಿ, ಕಾರ್ಯಾಧ್ಯಕ್ಷರಾದ ಸಂಗಮೇಶಗೌಡ ದಾಶ್ಯಾಳ, ಜಿಲ್ಲಾ ಉಪಾಧ್ಯಕ್ಷರಾದ ಕವಿತಾ ಅಳ್ಳೊಳ್ಳಿ, ಕರ‍್ಯದರ್ಶಿ ಮಲ್ಲಮ್ಮ ಲಮಾಣಿ, ಸುವರ್ಣಾ ಹಳ್ಳಿ, ನಗರ ಅಧ್ಯಕ್ಷರಾದ ಅಶ್ವಿನಿ ಸಾವಂತ, ಬೇಬಿ ತಳವಾರ, ಸುಜಾತಾ ಕರಕಲ್, ಶಕುಂತಲಾ ಚವ್ಹಾಣ, ನೀಲಾಂಬಿಕಾ ಬಿರಾದಾರ, ಬಿಸ್ಮಿಲ್ಲಾ ಬಾಗವಾನ, ಸಾಗರ ಎನ್. ಜಾಧವ, ರಾಜು ಮೋಹಿತೆ, ಅಣ್ಣಪ್ಪ ಕೋಳಿ, ರಾಜಶ್ರೀ ತಳವಾರ, ಪಿಂಟು ಗೊಬ್ಬೂರ, ಇಸ್ಮಾಯಿಲ್ ಬರಗುಡಿ, ಮುಖದಸ್ ಇನಾಮದಾರ, ಅಮೀನ ಚಟ್ಟರಕಿ, ರಾವುತ ಆಸಂಗಿಹಾಳ ಇನ್ನಿತರರು ಉಪಸ್ಥಿತರಿದ್ದರು.

