ಕೃಷ್ಣೆಯ ದಡದಲ್ಲಿ ನಾಟಕ ರಂಗದ ಕಲರವ | ರಸದೌತಣ ಸವಿದ ಸಭಿಕರು
ಆಲಮಟ್ಟಿ: ಅಂಗೈಯಲ್ಲೇ ಎಲ್ಲ ಸ್ತರದ ಮನರಂಜನೆ ಲಭಿಸುತ್ತಿರುವ ಈ ಕಾಲಘಟ್ಟದಲ್ಲಿ ನಾಟಕ ರಂಗಕಲೆ ಪ್ರದರ್ಶನ ಇಂದು ಅಪರೂಪವಾಗುತ್ತಿದೆ ಅಲ್ಲದೇ ನೋಡುಗರು ಸಹ ವಿರಳವಾಗುತ್ತಿದ್ದಾರೆ. ಆದರೆ ಕೃಷ್ಣೆಯ ತಟದಲ್ಲಿ ನಾಟಕ ಪ್ರಿಯ ಸಭಿಕರ ಕೊರತೆ ಇಲ್ಲ ಎಂಬುದಕ್ಕೆ ಈ ಸುಕ್ಷಣವೇ ಸಾಕ್ಷಿ ಎಂದು ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘದ ಆಲಮಟ್ಟಿ ಯೋಜನಾ ಶಾಖೆಯ ಅಧ್ಯಕ್ಷ ಸದಾಶಿವ ದಳವಾಯಿ ಹೇಳಿದರು.
ಇಲ್ಲಿನ ಶ್ರೀ ಅಶ್ವಥ ನಾರಾಯಣ (ಅರಳಿಕಟ್ಟಿ- ನಾಗಪ್ಪನಕಟ್ಟಿ) ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಅಶ್ವಥ ನಾರಾಯಣ ನಾಟ್ಯ ಸಂಘ ಆಲಮಟ್ಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ ” ಅರ್ಥಾತ್ ಬೆಂಕಿಯಲ್ಲಿ ಅರಳಿದ ಹೂವು ಎಂಬ ಸಾಮಾಜಿಕ ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿಂದು ದೇಶಿಯ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಮೋಹಕ್ಕೆ ಮಾರು ಹೋಗುತ್ತಿದ್ದಾರೆ. ಜಾಗತೀಕರಣದ ಪ್ರಭಾವಳಿಂದ ನಾಟಕ ಸಾಹಿತ್ಯ ಮರೆಯಾಗುತ್ತಿದೆ. ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ, ಗಿರೀಶ ಕಾರ್ನಾಡ, ಮಾಸ್ಟರ್ ಹಿರಣ್ಣಯ್ಯ ಮೊದಲಾದ ಸುಪ್ರಸಿದ್ಧ ನಾಟಕಕಾರರು ಅಂದು ನಾಟಕ ರಂಗಕ್ಕೆ ಉತ್ತೇಜನ ನೀಡಿದ್ದಾರೆ. ನಾಟಕಗಳಲ್ಲಿ ಕಾವ್ಯದ ಪ್ರಕಾರಗಳಿವೆ, ಸಾಮಾಜಿಕ ಹೂರಣಗಳಿವೆ. ಹಾಸ್ಯ ಲಾಲನೆ, ಸಾಂಪ್ರಾಯಿಕ ಪಾಲನೆ ಸಂಗತಿಗಳಿವೆ, ನೇರ ಮಾತು,ನೇರ ದೃಶ್ಯದ ಪ್ರಭಾವಗಳಿವೆ. ಕಣ್ಣಾರೆ ನೈಜತೆ ಅಭಿನಯವನ್ನು ನೋಡುವ, ಕೇಳುವ ವಿಭಿನ್ನ ಉನ್ಮಾದಗಳಿವೆ. ನಾಟಕರಂಗದ ಪಾತ್ರಧಾರಿಗಳು ತಮ್ಮ ನಟನಾ ಕೌಶಲ್ಯದಿಂದ ರಂಗ ಸಜ್ಜಿಕೆಗೆ ಜೀವತುಂಬಿ ಸಭಿಕರನ್ನು ನವರಂಗಲೋಕಕ್ಕೆ ಕರೆದೊಯ್ಯುತ್ತಾರೆ. ನಾಟಕರಂಗ ಭೂಮಿ ಎಂದು ಮರೆಯಲಾಗದು ಎಂದರು.
ನಾಟಕದಲ್ಲಿ ಎಲ್ಲ ರೀತಿಯ ಅರ್ಥಪೂರ್ಣವಾದ ವಿಚಾರಾಂಶಗಳಿರುತ್ತವೆ. ಅದರಲ್ಲಿ ಮೂಡಿಬರುವ ಉತ್ತಮ, ಆದರ್ಶಮಯ ವಿಚಾರಧಾರೆಗಳನ್ನು ಕಲಾರಸಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅತಿಥಿ ವೈ.ಎಂ.ಪಾತ್ರೋಟ ಮಾತನಾಡಿ, ನೌಕರರಿಗೆ ಲಭಿಸಬೇಕಾದ ಮೂಲಭೂತ ಸೌಲಭ್ಯಗಳನ್ನು ಇಲ್ಲಿನ ಡ್ಯಾಂಸೈಟ್ ವಸಾಹತು ಶಾಹಿಯಲ್ಲಿ ದೊರಕಿಸಿಕೊಡಲು ನೌಕರರ ಸಂಘ ಸಾಕಷ್ಟು ಶ್ರಮಿಸಿದೆ. ಸಕಲ ಸೌಲಭ್ಯದೊಂದಿಗೆ ರಾಜ್ಯದ ಮಾದರಿ ನೌಕರರ ಕಾಲೋನಿಯಾಗಿ ಇದೀಗ ಆಲಮಟ್ಟಿ ಮಿಂಚಿ ಖ್ಯಾತಿ ಪಡೆಯುತ್ತಲ್ಲಿದೆ ಎಂದರು.
ಇನ್ನೋರ್ವ ಅತಿಥಿ ಪ್ರಥಮದರ್ಜೆ ಗುತ್ತಿಗೆದಾರ ಎಂ.ಆರ್.ಕಮತಗಿ ಮಾತನಾಡಿದರು.
ರೇವಣಸಿದ್ದ ಪೂಜಾರಿ, ರಾಮಣ್ಣ ಕೋರಿ ಇವರ ನೇತೃತ್ವದಲ್ಲಿ ನಾಟ್ಯ ಕಂಪನಿ ಸಾಗುತ್ತಿದ್ದು ಹುಲಗೆಪ್ಪ ತಳವಾರ, ಚನ್ನಪ್ಪ ತಳವಾರ ಮ್ಯಾನೇಜರ್ ಆಗಿ, ಗದಿಗೆಪ್ಪ ತಳವಾರ, ರಮೇಶ ತಳವಾರ, ಕಿರಣ ತಳವಾರ ಕಥಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಷಣ್ಮುಖ ಪೂಜಾರಿ, ಚಂದ್ರು ತಳವಾರ, ಶೌಕಿತ ಮುಲ್ಲಾ, ರಾಮು ಲಮಾಣಿ ಸ್ಟೇಜ್ ಡೈರೆಕ್ಟರ್ ಅಗಿದ್ದಾರೆ. ಲಿಂಗರಾಜ ಜಾಡರ ಸಂಗೀತ ನಿದೇ೯ಶನದಲ್ಲಿ ಐಹೊಳೆಯ ವೀಣಾ ಮ್ಯೂಸಿಕಲ್ ನೈಟ್ ತಂಡದವರು ಸಂಗೀತ ಸೇವೆ ಸಲ್ಲಿಸಿದ್ದಾರೆ.
ರೈತ ಮುಖಂಡ ರವಿ ಕೋತಿನ, ಪಿ.ಎಸ್.ಐ ಸೀತಾರಾಮ ರಾಠೋಡ, ಗುತ್ತಿಗೆದಾರ ಅಶೋಕ ಉಪ್ಪಾರ, ವಾಯ್.ಎಚ್.ನಾಗಣಿ, ಮುದಕಪ್ಪ ಕುಂಬಾರ, ಬಸವರಾಜ ಹೆರಕಲ್, ಹುಲಗೆಪ್ಪ ತಳವಾರ, ಡಾ,ಶಂಕರ ದಳವಾಯಿ, ಮಲ್ಲಿನಾಥ,ರಾಮಣ್ಣ ಕೋರಿ, ನಾಗರಾಜ ತಳವಾರ ಮೊದಲಾದವರಿದ್ದರು.
ಆಲಮಟ್ಟಿ ಡ್ಯಾಂ ಸೈಟ್, ರೈಲ್ವೆ ಸ್ಟೇಷನ್ ಸುತ್ತಮುತ್ತಲಿನ ಜನತೆ ನಾಟಕ ಕಣ್ತುಂಬಿಸಿಕೊಂಡು ಆನಂದಿಸಿದರು.
ನಿರೂಪಕ ಮಹೇಶ ಗಾಳಪ್ಪಗೋಳ ಸುಂದರವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ರಮೇಶ ತಳವಾರ ವಂದಿಸಿದರು.
ಶ್ರೀ ಅಶ್ವಥ್ ನಾರಾಯಣ ಗಜಾನನ ಯುವಕ ಮಂಡಳಿ, ವ್ಯಾಪಾರಸ್ಥರು, ಗುತ್ತಿಗೆದಾರರು, ಕೆಬಿಜೆಎನ್ ಎಲ್ ಯೋಜನಾ ಶಾಖೆಯ ನೌಕರರ ಸಂಘ, ಸ್ಪೋಟ್ಸ್, ಕ್ಲಬ್, ರಾಮಲಿಂಗೇಶ್ವರ ಅಟೋ ಚಾಲಕರ ಸಂಘ, ಗಜಾನನ ಯುವಕ ಮಿತ್ರ ಮಂಡಳಿದವರು ನಾಟಕ ಪ್ರದರ್ಶನಕ್ಕೆ ಸಹಾಯ ಸಹಕಾರ ನೀಡಿದರು.

