’ಹಲೋ ಸಖಿ’ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ’ಉದಯರಶ್ಮಿ’ ಪ್ರಕಾಶಕಿ ಶೈಲಾ ಮಣೂರ ಅಭಿಮತ
ವಿಜಯಪುರ: ಕುಟುಂಬದ ಜೊತೆಗೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಅವರ ತ್ಯಾಗವನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷ ಮಾ.೦೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು
ಶಿಕ್ಷಕಿ ಸುಮಂಗಲಾ ಕೋಳೂರ ಹೇಳಿದರು.
ಸೋಮವಾರ ಸಂಜೆ ನಗರದ ಖಾಸಗಿ ಹೊಟೇಲನಲ್ಲಿ ’ಹಲೋ ಸಖಿ’ ಸ್ನೇಹಿತೆಯರ ಬಳಗ ಏರ್ಪಡಿಸಿದ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸೌಂದರ್ಯ ತಜ್ಞೆ ರೇಖಾ ಜಿನಗೊಂಡ ಮಾತನಾಡಿ, ಮಹಿಳೆಯೇ ಇಲ್ಲದ ವಿಶ್ವವನ್ನು ಊಹಿಸಲು ಸಾಧ್ಯವೇ ಇಲ್ಲ. ಮಹಿಳೆ ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ. ಹೀಗೆ ಮಹಿಳೆ ಪ್ರತಿಯೊಬ್ಬರ ಬದುಕಿನಲ್ಲೂ ನಿರ್ವಹಿಸುವ ಪಾತ್ರಗಳು ಹಾಗೂ ನಿರ್ವಹಿಸುವ ಜವಾಬ್ದಾರಿಗಳೂ ಹಲವಾರು ಎಂದು ಹೇಳಿದರು.
’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶೈಲಾ ಮಣೂರ ಮಾತನಾಡಿ, ಇಂದು ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮಹಿಳೆಯರಿಂದು ಕೇವಲ ಕುಟುಂಬಕ್ಕೆ ಸೀಮಿತವಾಗದೆ, ರಾಜಕೀಯ, ಶಿಕ್ಷಣ, ವಿಜ್ಞಾನ ಹೀಗೆ ಹತ್ತು-ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಅಪಾರವಾಗಿದೆ. ಕಾರಣ ಪಾಲಕರು ಮಕ್ಕಳಲ್ಲಿ ಹೆಣ್ಣು-ಗಂಡು, ಜಾತಿ-ಮತವೆಂಬ ಭೇದಭಾವ ತಾರದಂತೆ ಬೆಳೆಸಬೇಕು ಎಂದು ಸಲಹೆ ನೀಡಿದರು.
’ಹಲೋ ಸಖಿ’ ಸದಸ್ಯರಾದ ಚೇತನಾ ಮಠ, ಸೋನಾ ಕುಲಕರ್ಣಿ, ಮೀನಾ ಕುಲಕರ್ಣಿ, ವೈಶಾಲಿ ಬಡಿಗೇರ, ಗಿರಿಜಾ ಸೊನ್ನದ, ಶಿಕ್ಷಕಿ ಶರ್ಷಾದ ಅತನೂರ ಸೇರಿದಂತೆ ಇತರರಿದ್ದರು.

