ಕರಿಭಂಟನಾಳ ಗುರುಗಂಗಾಧರೇಶ್ವರ ಜಾತ್ರಾಮಹೋತ್ಸವ | ರಾಷ್ಟ್ರೀಯ ಜನಜಾಗೃತಿ ಸಮಾವೇಶ | ಆರೋಗ್ಯಮೇಳ ಸಂವಾದ
ಬಸವನಬಾಗೇವಾಡಿ: ನಾಡಿನಲ್ಲಿ ನಡೆಯುವ ಜಾತ್ರೆಗಳು ಜನರಲ್ಲಿ ಭಕ್ತಿ-ವೈರಾಗ್ಯ-ಜ್ಞಾನದ ಜಾಗೃತಿ ಮೂಡಿಸುತ್ತವೆ. ಜನರು ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ನಡೆಯುವ ಕರಿಭಂಟನಾಳ ಗ್ರಾಮದ ಗುರುಗಂಗಾಧರೇಶ್ವರ ಜಾತ್ರಾಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀಮಠದ ಶ್ರೀಗಳು ಹಮ್ಮಿಕೊಳ್ಳುವ ಮೂಲಕ ವೈಶಿಷ್ಠವಾದ ಜಾತ್ರೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಸರ್ಪಭೂಷಣಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಿಭಂಟನಾಳ ಗ್ರಾಮದ ಆರಾಧ್ಯದೈವ ಗುರುಗಂಗಾಧರೇಶ್ವರರ ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜನಜಾಗೃತಿ ಸಮಾವೇಶ ಹಾಗೂ ಆರೋಗ್ಯಮೇಳ ಸಂವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ರಿಕಾಲ ಜ್ಞಾನ ಸ್ವರೂಪರಾಗಿರುವ ಮಹಾತ್ಮರ ಜಾತ್ರೆಗಳು ನಾಡಿನಲ್ಲಿ ನಡೆಯುತ್ತವೆ. ಜಾತ್ರೆಗಳು ಜನರಲ್ಲಿ ಚೇತನ ಶಕ್ತಿ ತರುತ್ತವೆ. ಆರೋಗ್ಯವಾದ ಶರೀರ ಇರಬೇಕಾದರೆ ನಮ್ಮಲ್ಲಿ ಅರಿವಿನ ಶಕ್ತಿ ಇರಬೇಕು. ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವ ದುರ್ಗುಣಗಳು ಮೈಗೂಡಲು ಸಾಧ್ಯವಿಲ್ಲ. ಇಂದ್ರಿಯ ನಿಗ್ರಹ ಬಹುಮುಖ್ಯವಾಗಿದೆ. ಭಗವಂತನಲ್ಲಿ ಭಕ್ತಿ ನಿಷ್ಠೆ ಇದ್ದರೆ ಬದುಕು ಸಾರ್ಥಕವಾಗುತ್ತದೆ. ನಾಡಿನಲ್ಲಿ ಸುಭೀಕ್ಷೆ, ಶಾಂತಿ ನೆಲೆಸಲು ಜಾತ್ರೆಗಳು ನಡೆಯುತ್ತವೆ ಎಂದರು.
ಗುರುಗಂಗಾಧರೇಶ್ವರ ಹಿರಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.
ವಿಜಯಪುರ ಸಂಗಮೇಶ ಆಸ್ಪತ್ರೆಯ ಡಾ.ಎಸ್.ಎಸ್.ಪಾಟೀಲ, ಬೀರಕಬ್ಬಿಯ ಮಲ್ಲಿಕಾರ್ಜುನ ಶಾಸ್ತ್ರೀಜಿ, ಶಂಕರಯ್ಯ ಶಾಸ್ತ್ರೀಜಿ, ವಿಶ್ವನಾಥ ಮಠ, ಪ್ರವಚನಕಾರ ಶಂಕರಯ್ಯ ಶಾಸೀಜಿ, ಡಾ.ಶೈಲೇಶ ಕನ್ನೂರ, ದೇವೇಂದ್ರ ಗೋನಾಳ, ಮಹಾಂತೇಶ ಸಂಗಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ, ಡಾ.ಮಹಾಂತೇಶ ಹಿರೇಮಠ, ಡಾ.ರಮಾಕಾಂತ ಬಳಲೂಕರ, ಡಾ.ರಾಹುಲ ಬಿರಾದಾರ, ಡಾ.ಬಾಬುಗೌಡ ಬಿರಾದಾರ, ಡಾ.ಪ್ರಿಯಾಂಕ ಬಿರಾದಾರ, ಡಾ.ಮಲ್ಲಿಕಾರ್ಜುನ ಇತರರು ಇದ್ದರು.
ಈರಯ್ಯ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಾಲ ಗಾಯಕಿ ಮಹನ್ಯ ಪಾಟೀಲ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಪಲ್ಲಕ್ಕಿ ಉತ್ಸವ, ಅಗ್ನಿ ಹಾಯುವುದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುಗಂಗಾಧರೇಶ್ವರರ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪುರವಂತರ ಸೇವೆ, ವಿವಿಧ ವಾದ್ಯಮೇಳದೊಂದಿಗೆ ಸಂಭ್ರಮದಿಂದ ಜರುಗಿತು.
ನಂತರ ಗುರುಗಂಗಾಧರೇಶ್ವರರ ದೇವಸ್ಥಾನ ಮುಂಭಾಗ ಅಗ್ನಿಪೂಜೆ ನೆರವೇರಿದ ನಂತರ ಪುರವಂತರ ಸಹಯೋಗದೊಂದಿಗೆ ಶ್ರೀಮಠದ ಶಿವಕುಮಾರ ಸ್ವಾಮೀಜಿಯವರು ಭಕ್ತರ ಜಯಘೋಷದ ಮಧ್ಯ ಅಗ್ನಿ ಹಾಯ್ದರು. ಸದ್ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬಿಎಲ್ಡಿಇ ಸಂಸ್ಥೆ ಹಾಗೂ ಸಂಗಮೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.

