ಕಲಬುರ್ಗಿ ಫೌಂಡೇಶನ್ ಕೊಡಮಾಡುವ 2024 ನೆ ಸಾಲಿನ ‘ಸಾಹಿತ್ಯ ಸಿರಿ & ವಚನ ಸಿರಿ’ ಪ್ರಶಸ್ತಿ ಪ್ರದಾನ
ವಿಜಯಪುರ: “ಸಾಹಿತ್ಯದ ಓದು ಮನುಷ್ಯ ಪ್ರಜ್ಞೆಯನ್ನು ಜಾಗ್ರತ ಗೊಳಿಸಿದರೆ ಕನ್ನಡ ನಾಡಿನ ಶಿವಶರಣರ ವಚನಗಳು ವೈಚಾರಿಕ ಪ್ರಜ್ಞೆಯನ್ನು ಬೆಳೆಸುವವು” ಎಂದು ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ ಎಸ್ ಮದಭಾವಿ ಹೇಳಿದರು.
ಕಲಬುರ್ಗಿ ಫೌಂಡೇಶನ್ ಕೊಡಮಾಡುವ 2024 ನೆಯ ಸಾಲಿನ ‘ ಸಾಹಿತ್ಯ ಸಿರಿ ‘ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಡಾ. ಎಂ ಎಂ ಕಲಬುರ್ಗಿ ಅವರು ಭಾರತದ ಶ್ರೇಷ್ಠ ಸಂಶೋಧಕರಲ್ಲಿ ಒಬ್ಬರು. ಅವರ ಸಂಶೋಧನಾ ಸಂಪುಟಗಳು ಓದುಗರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತಿ ಬೆಳೆಯುತ್ತವೆ. ಸಂಶೋಧಕ ತಪ್ಪಾಗಿ ಹೇಳಿರಬಹುದು, ಸುಳ್ಳು ಹೇಳಲಾರ’ ಎಂದು ಹೇಳಿದ ಕಲಬುರ್ಗಿ ಅವರ ಮಾತುಗಳೂ ಕೂಡಾ ಯುವ ಸಂಶೋಧಕರಿಗೆ ಮಾರ್ಗದರ್ಶನವಾಗಿವೆ. ವಿಜಯಪುರ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರವನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಕಲಬುರ್ಗಿ ಅವರ ಪಾತ್ರ ಹಿರಿದಾಗಿದೆ. ನಮ್ಮ ಸಂಶೋಧನಾ ಕೇಂದ್ರಕ್ಕೆ ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಟ್ಟು ಅದಕ್ಕೆ ಸಂಬಂಧಿಸಿದ ಆಕರಗಳನ್ನು ಒದಗಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡುತ್ತಿದ್ದರು. ಅವರ ಸಾಹಿತ್ಯದ ಸೇವೆಯನ್ನು ಕನ್ನಡಿಗರು ಹೆಮ್ಮೆಯಿಂದ ಸ್ಮರಿಸಿಕೊಳ್ಳಲೇಬೇಕು. ಕಲಬುರ್ಗಿ ಅವರ ಹೆಸರಿನ ಈ ಪ್ರಶಸ್ತಿ ನನ್ನ ಸಾಹಿತ್ಯದ ಪರಿಚಾರಿಕೆಗೆ ಇನ್ನಷ್ಟು ಪುಷ್ಠಿ ನೀಡಿದೆ ” ಎಂದರು
ಇದೆ ಸಂದರ್ಭದಲ್ಲಿ ‘ ವಚನ ಸಿರಿ’ ಪ್ರಶಸ್ತಿ ಯನ್ನು ಸ್ವೀಕರಿಸಿ ಮಾತನಾಡಿದ ಕಲಬುರ್ಗಿಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಅವರು, ಡಾ. ಎಂ ಎಂ ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾದದ್ದು ಈ ನಾಡಿನವರ ದುರ್ದೈವ, ಕಲಬುರ್ಗಿಯವರು ತಾವು ಸಂಶೋಧನೆಯಲ್ಲಿ ತಲ್ಲೀನರಾಗುವುದಲ್ಲದೆ ತಮ್ಮ ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದಲ್ಲಿ ದುಡಿಸಿ, ಕನ್ನಡ ಸಾಹಿತ್ಯದ ಕಸುವನ್ನು ಹೆಚ್ಚಿಸಿದರು ಎಂದರು.
ಸಂಶೋಧನಾ ಕ್ಷೇತ್ರದ ಅನರ್ಘ್ಯ ರತ್ನ ವಾಗಿದ್ದ ಡಾ. ಎಂ ಎಂ ಕಲಬುರ್ಗಿ ಅವರು ವಚನ ಸಾಹಿತ್ಯದ ಕುರಿತಾಗಿ ತೆಗೆದುಕೊಂಡ ನಿರ್ಣಯಗಳು ಸಾರ್ವಕಾಲಿಕವಾಗಿವೆ ಎಂದು ‘ವಚನ ಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿದ ಇನ್ನೊರ್ವ ಅಧುನಿಕ ವಚನಕಾರ್ತಿಯಾದ ಬಾಗಲಕೋಟೆಯ ಶ್ರೀಮತಿ ಗೌರಮ್ಮ ನಾಶಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಂದಗಿಯ ಜಾನಪದ ವಿದ್ವಾಂಸ ಡಾ. ಎಂ ಎಂ ಪಡಶೆಟ್ಟಿ ಅವರು, ಕಲಬುರ್ಗಿ ಕುಟುಂಬದವರು ಹುಟ್ಟು ಹಾಕಿದ ಕಲಬುರ್ಗಿ ಫೌಂಡೇಶನ್ ಪ್ರತಿ ವರ್ಷವೂ ಸಾಹಿತ್ಯ ಸಿರಿ ಹಾಗೂ ವಚನ ಸಿರಿ ಪ್ರಶಸ್ತಿಯನ್ನು ನೀಡುವ ಮೂಲಕ ಡಾ. ಎಂ ಎಂ ಕಲಬುರ್ಗಿ ಅವರ ಚಿಂತನೆಗಳನ್ನು ಜೋಪಾನವಾಗಿ ಕಾಪಿಡುವ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಅವರು ಮಾತನಾಡಿ, ವಚನಗಳ ಓದು ನಮ್ಮೊಳಗೆ ಹೊಸ ಸಂಚಲನ ಸೃಷ್ಟಿಸಿವೆ. ನಿತ್ಯದ ಹಲವು ಬಿಕ್ಕಟ್ಟುಗಳಿಗೆ ಶರಣ ವಚನಗಳಲ್ಲಿ ಪರಿಹಾರವಿದೆ. ಅದನ್ನು ಹುಡುಕಬೇಕಷ್ಷೇ ಹಾಗೂ ವಚನಗಳನ್ನು ಪರಿಷ್ಕರಣೆ ಮಾಡುವ ಜರೂರು ಇದೆ ಎಂದರು.
ಸಾಹಿತಿ ಮನು ಪತ್ತಾರ ಕಲಕೇರಿ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನಾಡಿದರು.
ನ್ಯೂಜಿಲೆಂಡನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಉಪ್ಪಿನ, ಬಿ.ಸಿ.ಉಪ್ಪಿನ, ವಿ.ಸಿ.ನಾಗಠಾಣ, ಡಾ.ಆರ್ . ಕೆ.ಕುಲಕರ್ಣಿ, ಮಲ್ಲಿಕಾರ್ಜುನ ಯಂಡಿಗೇರಿ, ಡಾ.ವಿ.ಡಿ.ಐಹೊಳ್ಳಿ, ಡಾ. ಸೋಮಶೇಖರ್ ವಾಲಿ, ಬಿ.ಎಚ್ . ಹಿರೇಮಠ, ವಿ.ವಿ. ಹಿರೇಮಠ, ಡಾ. ಎಂ ಎಸ್ ಚಾಂದಕವಠೆ, ಎಸ್ ಬಿ ದೊಡಮನಿ, ಎ.ಬಿ. ಬೂದಿಹಾಳ, ಎಂ ಎಲ್ ಮದಭಾವಿ, ಅಕ್ಕಮಹಾದೇವಿ ಬಾರ್ಲಿ, ಶೈಲಜಾ ಇಜೇರಿ, ಉಷಾ ಹಿರೇಮಠ, ಶಾರದಾ ಕೊಪ್ಪ, ರಾಜಶೇಖರ್ ಉಮರಾಣಿ, ಶಿವಪ್ಪಣ್ಣ ಗವಸಾನಿ, ಗೀತಯೋಗಿ, ಅಕ್ಕನ ಅರಿವಿನ ಹಲವಾರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು
ಬಿ.ಆರ್.ಬನಸೋಡೆ ಪ್ರಾರ್ಥಿಸಿದರು
ಚಿದಂಬರ ಬಂಡಗಾರ ನಿರೂಪಿಸಿದರು. ಸುಭಾಸಚಂದ್ರ ಕನ್ನೂರ, ಈರಣ್ಣ ತೊಂಡಿಕಟ್ಟಿ ನಿರ್ವಹಿಸಿದರು. ಕಲಬುರ್ಗಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ ವಂದಿಸಿದರು.

