ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮನವಿ
ವಿಜಯಪುರ: ಭೀಕರ ಬರಗಾಲ ಹಾಗೂ ನೀರಿನ ಅಭಾವವಿರುವ ಕಾರಣ ಈ ಬಾರಿ ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ ಬಣ್ಣದಾಟ ಆಡುವುದನ್ನು ಬಿಟ್ಟು ಮನೆಗಷ್ಟೇ ಬಣ್ಣದಾಟ ಸೀಮಿತಗೊಳಿಸುವುದು ಒಳಿತು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೋಳಿ ಹಬ್ಬ ಎಂದರೆ ಅದರ ಸಂಭ್ರಮವೇ ಬೇರೆ, ಪ್ರತಿ ವರ್ಷ ಅನೇಕ ಸಂಘ-ಸಂಸ್ಥೆಗಳು ರಂಗ ಹೋಲಿಕ ಸೇರಿದಂತೆ ಹಲವಾರು ರೀತಿಯ ಸಾರ್ವಜನಿಕ ಬಣ್ಣದಾಟದ ಕಾರ್ಯಕ್ರಮ ಏರ್ಪಡಿಸುತ್ತಾರೆ, ಯುವಜನತೆ ಸಕ್ರೀಯವಾಗಿ ಈ ಹಬ್ಬದಾಟದಲ್ಲಿ ತೊಡಗುತ್ತಾರೆ, ಆದರೆ ಕಳೆದೆರಡು ವರ್ಷಗಳಿಂದ ವರುಣನ ಕೃಪೆಯಾಗಿಲ್ಲ, ರೈತರು ಸಹ ತೊಂದರೆಯಲ್ಲಿದ್ದಾರೆ, ಜಲಮೂಲಗಳು ಅಷ್ಟೇ ಏಕೆ ಅಂತರ್ಜಲ ಸಹ ಸೊರಗುವ ಹಂತಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಬಣ್ಣದಾಟದ ಆಚರಣೆಗೆ ಈ ಬಾರಿ ಬ್ರೇಕ್ ಹಾಕಿದರೆ ನೀರಿನ ಮಿತವ್ಯಯ ಸಾಧಿಸಬಹುದಾಗಿದೆ, ಸಂಘ-ಸಂಸ್ಥೆಗಳು ಸಹ ಈ ಬಾರಿ ಈ ಬೃಹತ್ ಬಣ್ಣದಾಟ ಆಯೋಜಿಸುವ ಬದಲು ನೀರಿನ ಅರವಟಿಗೆ, ಪಶು-ಪಕ್ಷಿಗಳಿಗಾಗಿ ನೀರಿನ ಅರವಟಿಗೆ ಸ್ಥಾಪಿಸುವುದು ಒಳಿತು, ಮುಂದೆ ವರುಣನ ಕೃಪೆಯಾದರೆ ಹಿಂದೆಂದಿಗಿಂತಲೂ ಸಂಭ್ರಮದಿಂದ ಸಾರ್ವಜನಿಕ ಬಣ್ಣದಾಟವನ್ನು ಸಂಭ್ರಮಿಸೋಣ, ಈ ವರ್ಷ ಸಾರ್ವಜನಿಕ ಬಣ್ಣದಾಟ ಬೇಡ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

