ನಿವರಗಿಯಲ್ಲಿ ಸಂಭ್ರಮದ ಕಳಸಾರೋಹಣ ಕಾರ್ಯಕ್ರಮ
ಚಡಚಣ: ಸಮೀಪದ ನಿವರಗಿಯ ಗ್ರಾಮ ದೇವ ಶ್ರೀ ಸಂಗಮೇಶ್ವರ ದೇವಾಸ್ಥಾನದ ನೂತನ ಗೋಪುರಕ್ಕೆ ಕಳಸಾರೋಹಣ ಶನಿವಾರದಂದು ಸಂಭ್ರಮದಿಂದ ಜರುಗಿತು. ಬೆಳಗ್ಗೆಯಿಂದ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನೂತನ ಕಳಸಾರೋಹಣವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ರಸ್ತೆಯುದ್ಧಕ್ಕೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭಗಳೊಂದಿಗೆ ಮಹಿಳೆಯರು ಹಾಡುಗಳನ್ನು ಹಾಡುತ್ತ ಕುಂಭ ಹೊತ್ತ ಮಹಿಳೆಯರ ದಂಡು ಹೀಗೆ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾರಜೋಳ, ಕಾತ್ರಾಳದ ಜ್ಞಾನಯೋಗಾಶ್ರಮದ ಅಮೃತಾನಂದ ಮಹಾಸ್ವಾಮಿಗಳು ಮಾತನಾಡುತ್ತ. ಗ್ರಾಮದಲ್ಲಿಯೂ ದೇವರ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ ಸಮೃದ್ಧಿ ನೆಲೆಸಲು ಸಾಧ್ಯವಾಗಿದೆ. ಭೌತಿಕ ಸಂಪತ್ತು ಶಾಸ್ವತವಲ್ಲ, ಹುಟ್ಟಿರುವ ಬದುಕು ಶಾಶ್ವತವಲ್ಲ, ಆದರೆ ಸಂಸ್ಕಾರ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಾವೇಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕಿದೆ. ನಿವರಗಿ ಗ್ರಾಮಸ್ಥರು ಇಂತಹ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ನೆಲೆನಿಂತು ಹೋದ ಪುಣ್ಯ ಸ್ಥಳ. ಇಂಥಹ ಸ್ಥಳದಲ್ಲಿ ಹೆಚ್ಚೇಚ್ಚು ಗಿಡಮರಗಳನ್ನು ನೆಟ್ಟು ಪ್ರಕೃತಿ ಪ್ರೇಮವನ್ನು ಮೆರೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಮಹಿಳೆಯರು, ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

