ಬಸವನಬಾಗೇವಾಡಿ: ಯಾರಲ್ಲಿ ಭಕ್ತಿ ಇರುವದೋ ಅವರಲ್ಲಿ ಶ್ರದ್ಧಾ-ಮನೋಭಾವ, ಸಾಮರಸ್ಯ, ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಭಕ್ತಿಯಲ್ಲಿ ಇಂತಹ ಶಕ್ತಿಯಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ತೆಲಗಿ ರಸ್ತೆಯಲ್ಲಿರುವ ೨೨೦ ಕೆವ್ಹಿ ಸ್ಟೇಶನ್ ಎದುರಿಗೆ ಇರುವ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವದಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಮಹಾತ್ಮೆ ಎಂಬ ಸುಂದರ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಭಗವಂತನಲ್ಲಿ ಅಚಲವಾದ ಭಕ್ತಿಯನ್ನು ಇಟ್ಟು ನಡೆದರೆ ನಮ್ಮ ಜೀವನದಲ್ಲಿ ನಿಷ್ಠೆ-ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಮೈಗೂಡಲು ಸಾಧ್ಯ. ಶ್ರೀಶೈಲದಲ್ಲಿ ಶಕ್ತಿ ಇದೆ ಎಂಬುವದಕ್ಕೆ ಈ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅಪಾರ ಸಂಖ್ಯೆ ಭಕ್ತರು ಮಹಾಶಿವರಾತ್ರಿಯಂದು ಆಗಮಿಸಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯುತ್ತಿರುವುದೇ ಸಾಕ್ಷಿ ಎಂದರೆ ತಪ್ಪಾಗಲಾರದು. ಪಟ್ಟಣದ ವಿಜಯಪುರ ರಸ್ತೆ, ಮುದ್ದೇಬಿಹಾಳ ರಸ್ತೆ, ನಿಡಗುಂದಿ ರಸ್ತೆಯಲ್ಲಿ ಸದಾ ಜನರ ಸಂಚಾರ ನಿತ್ಯ ಕಂಡುಬರುತ್ತದೆ. ಆದರೆ ತೆಲಗಿ ರಸ್ತೆಯಲ್ಲಿ ಮಹಾಶಿವರಾತ್ರಿ ದಿನದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ಜಾತ್ರೆಯಿಂದಾಗಿ ಅಪಾರ ಸಂಖ್ಯೆಯಲ್ಲಿ ಜನರ ಸಂಚಾರ ಕಂಡುಬರುತ್ತದೆ ಎಂದರೆ ಅತಿಶೋಕ್ತಿ ಎನಿಸದು ಎಂದರು.
ಈ ದೇವಸ್ಥಾನ ಯಾವುದೇ ಸರ್ಕಾರದ ಅನುದಾನ ಪಡೆಯದೇ ಸದ್ಭಕ್ತರಿಂದ ನಿರ್ಮಾಣವಾಗಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಈ ದೇವಸ್ಥಾನಕ್ಕೆ ಬರಲು ಸರಿಯಾದ ರಸ್ತೆ, ಬೀದಿ ದೀಪ, ದೇವಸ್ಥಾನದ ಪ್ರಾಂಗಣ ಉತ್ತಮವಾಗಿ ನಿರ್ಮಾಣವಾಗಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸರ್ಕಾರ ಈಚೆಗೆ ಬಸವೇಶ್ವರರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡುವ ಜೊತೆಗೆ ಬಸವಜನ್ಮ ಸ್ಥಳ ಬಸವನಬಾಗೇವಾಡಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿರುವುದಕ್ಕೆ ಈ ನಾಡಿನವರು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ವಿಪಿಕೆಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆ ಸದಸ್ಯ ನೀಲು ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಜಾತ್ರಾ ಕಮೀಟಿ ಅಧ್ಯಕ್ಷ ಶರಣು ಮನಗೂಳಿ, ಮುಖಂಡರಾದ ಶ್ರೀಶೈಲ ಕೂಡಗಿ, ಪರಶುರಾಮ ಅಡಗಿಮನಿ, ವಿಠ್ಠಲ ಮಾಲಗಾರ ಇದ್ದರು.
ಚಂದ್ರಶೇಖರ ಹದಿಮೂರ ಸ್ವಾಗತಿಸಿದರು. ವೆಂಕಟೇಶ ಪ್ರಾಸ್ತವಿಕವಾಗಿ ಮಾತನಾಡಿದರು. ಕೊಟ್ರೇಶಿ ಹೆಗಡ್ಯಾಳ ನಿರೂಪಿಸಿದರು. ಪಿ.ಎಸ್.ಬಾಗೇವಾಡಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

