ಬಬಲೇಶ್ವರ ತಾಲೂಕಾ ಆಡಳಿತ ನೂತನ ಕಟ್ಟಡ ಉದ್ಘಾಟನೆ | ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ
ವಿಜಯಪುರ: ಬಬಲೇಶ್ವರ ಪಟ್ಟಣದ ಅಡವಿಸಂಗಾಪುರ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ರೂ.೧೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ನೂತನ ಕಟ್ಟಡ, ಕಟ್ಟಡವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಿದರು.
ಶನಿವಾರ ಬಬಲೇಶ್ವರದಲ್ಲಿ ಹಮ್ಮಿಕೊಂಡ ನೂತನ ತಾಲೂಕಾಡಳಿತ ಕಟ್ಟಡ ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಈ ಕಟ್ಟಡದ ನೆಲಮಹಡಿಯಲ್ಲಿ ತಹಸೀಲ್ದಾರ ಕಚೇರಿ, ಕೋರ್ಟ್ ಹಾಲ್, ತಹಸೀಲ್ದಾರ ಗ್ರೇಡ್-೧ ಮತ್ತು ಗ್ರೇಡ್-೨, ಸಬ್ ರಜಿಸ್ಟಾರ್ ಕಚೇರಿ, ಸಬ್ ಟ್ರೆಜರಿ ಕಚೇರಿ, ಸ್ಟ್ರಾಂಗ್ ರೂಂ, ರಜಿಸ್ಟಾರ್ ಕಚೇರಿಗಳನ್ನು ಹೊಂದಿವೆ. ಮೊದಲನೇ ಮಹಡಿಯಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕ ಕಚೇರಿ, ಭೂ ದಾಖಲೆ ಕೊಠಡಿ, ವಿಡಿಯೋ ಸಂವಾದ ಸಭಾಂಗಣ, ಕೆಸ್ವಾನ್, ಎರಡನೇ ಮಹಡಿಯಲ್ಲಿ ಸ್ಟೇರ್‌ಕೇಸ್ ಮುಖ್ಯ ಕೋಣೆ ಮತ್ತು ಲಿಫ್ಟ್ ಅಳವಡಿಸಿದ್ದು, ಒಂದೇ ಸ್ಥಳದಲ್ಲಿ ವಿವಿಧ ಸರ್ಕಾರಿ ಕಚೇರಿಗಳ ಸ್ಥಾಪನೆಯಿಂದ ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದ್ದು, ಕಚೇರಿಗಳ ಅಲೆದಾಟ ತಪ್ಪುವುದಲ್ಲದೇ ಸಮಯದ ಉಳಿತಾಯ ಸಹ ಆಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರಕಾರದ ಐದು ಗ್ಯಾರಂಟಿ ಯೋಜನೆಯಡಿ ಬಬಲೇಶ್ವರ-ತಿಕೋಟಾ ತಾಲೂಕುಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ೬೧,೩೩೩ ಸಾವಿರ, ಗೃಹ ಜ್ಯೋತಿ ಯೋಜನೆಯಡಿ ೪೨,೨೧೩ ಸಾವಿರ, ಅನ್ನಭಾಗ್ಯ ಯೋಜನೆಯ ಸುಮಾರು ೫೯,೨೩೨ ಸಾವಿರ ಶಕ್ತಿ ಯೋಜನೆಯಡಿ ೫೭,೩೦,೬೦೦ ಟಿಕೆಟ್‌ಗಳಾಗಿದ್ದು, ಯುವನಿಧಿ ಯೋಜನೆಯಡಿ ೭೭೩ ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಚುನಾವಣೆಗೆ ಪೂರ್ವ ಘೊಷಿಸಿದಂತೆ ಎಲ್ಲ ಗ್ಯಾರಂಟಿಗಳನ್ನು ನೀಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಯಡಿ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ಬರಗಾಲ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ೭೧೧ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. ಆದರೆ ಕಳೆದ ಸಲಕ್ಕಿಂತ ಭೀಕರ ಬರಗಾಲ ಜಿಲ್ಲೆಯಲ್ಲಿವಿದ್ದರೂ ಸಹ ನೀರಾವರಿ ಯೋಜನೆಗಳಿಂದb ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ೩೬೦೦ ಕೋಟಿ ರೂ. ತಿಕೋಟಾ ತಾಲೂಕಿನ ನೀರಾವರಿಗೆ ವೆಚ್ಚ ಮಾಡಲಾಗಿದೆ. ಜಿಲ್ಲೆಯಾದ್ಯಂತ ಕೇವಲ ೩೮ ಟ್ಯಾಂಕರ್‌ಗಳ ಮೂಲಕ ಮಾತ್ರ ನೀರು ಪೂರೈಸಲಾಗುತ್ತಿದೆ. ತಿಡಗುಂದಿ, ಚಡಚಣ, ಹೊರ್ತಿ, ಇಂಗಳೇಶ್ವರ, ಗುಂದವಾಣ, ಇಂಚಗೇರಿ, ಜಿಗಜೇವಣಗಿ ಸೇರಿದಂತೆ ೧೬ ಕೆರೆ ತುಂಬಿಸಿ ಜಿಲ್ಲೆಯ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ವಿವಿಧ ಕೈಗಾರಿಕೆಗಳ ಸ್ಥಾಪನೆ, ಆಹಾರ ಸಂಸ್ಕೃರಣ ಘಟಕಗಳ ಸ್ಥಾಪನೆ ಸೇರಿದಂತೆ ವಿವಿಧ ಘಟಕಗಳ ನಿರ್ಮಾಣ ಮಾಡಿ, ಜಿಲ್ಲೆಯ ಜನರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಬೆಳೆಯಲಾದ ವಿವಿಧ ಬೆಳೆಗಳಿಗೆ ಯೋಗ್ಯ ಬೆಲೆ ಉತ್ತಮ ಮಾರುಕಟ್ಟೆ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ. ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲು ಸಾಲ-ಸೌಲಭ್ಯಕ್ಕಾಗಿ ಮೈಕ್ರೋ ಬ್ಯಾಂಕ್ ವ್ಯವಸ್ಥೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿಎಸ್‌ಐಅರ್ ಅನುದಾನದಡಿ ಶೇ.೯೦ ರಷ್ಟು ಅನುದಾನವನ್ನು ಶಿಕ್ಷಣ ಗುಣಮಟ್ಟ ಸುಧಾರಣೆ, ಶಾಲಾ ಕಟ್ಟಡಗಳ ದುರಸ್ತಿ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ ಆರಂಭಕ್ಕೆ ಬಳಸಲಾಗುವುದು. ಅದರಂತೆ ಜಿಲ್ಲೆಯ ಮಮದಾಪುರ ಬಾಬಾನಗರದಲ್ಲಿ ಅರಣ್ಯ ಪ್ರದೇಶಾಭಿವೃದ್ದಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಈ ಭಾಗದ ನೀರಾವರಿ ಯೋಜನೆ, ವಿದ್ಯುತ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಬಬಲೇಶ್ವರ-ತಿಕೋಟಾ ತಾಲೂಕಿಗೆ ಅನುಮೋದನೆಯಾಗಿರುವ ೨೨೦ಕೆವ್ಹಿ ಸ್ಟೇಶನ್ ನಿರ್ಮಾಣಕ್ಕೆ ತಲಾ ೧೫೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೇ ಅನುಮೋದನೆಗೆ ಬಾಕಿ ಇರುವ ಹೆಬ್ಬಾಳಟ್ಟಿ, ಸಾರವಾಡ, ತಾಜಪುರ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಪಡೆದು ಪೂರ್ಣಗೊಳಿಸಲಾಗುವುದು. ಮಮದಾಪುರ ಶಿರಬೂರ, ಬಬಲೇಶ್ವರ, ಕಂಬಾಗಿ, ದೇವರಗೆಣ್ಣೂರ, ಬೆಳ್ಳುಬ್ಬಿ, ತಿಕೋಟಾ, ಹೊನವಾಡ, ಟಕ್ಕಳಕಿ, ತೊರವಿ, ಕನಮಡಿ, ನಿಡೋಣಿ ೧೧೦ ಕೆವ್ಹಿ ವಿದ್ಯುತ್ ಸ್ಟೇಶನ್ ನಿರ್ಮಾಣಕ್ಕಾಗಿ ಪ್ರತಿ ಸ್ಟೇಶನ್‌ಗೆ ೧೫ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಅದರಂತೆ ಗ್ರಾಮೀಣ ರಸ್ತೆ ಅಭಿವೃದ್ದಿಗಾಗಿ ೨೦ ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ೮ ಹೊಸ ತಾಲೂಕುಗಳ ರಚನೆಯಾಗಿದ್ದು, ಈ ಪೈಕಿ ತಿಕೋಟಾ-ಬಬಲೇಶ್ವರ ತಾಲೂಕಿನಲ್ಲಿ ಆಡಳಿತ ಸೌಧ ಕಟ್ಟಡ ನಿರ್ಮಾಣಗೊಂಡು ಕಾರ್ಯಾರಂಭ ಮಾಡಲಾಗಿದೆ. ಈ ಭಾಗದ ಜನರಿಗೆ ಸರ್ಕಾರದ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ. ಜಿಲ್ಲೆಯ ಅಭಿವೃದ್ದಿಗೆ ಸಾರ್ವಜನಿಕರು ಜಿಲ್ಲಾಡಳಿತ, ತಾಲೂಕಾಡಳಿತದೊಂದಿಗೆ ಕೈ ಜೋಡಿಸುವಂತೆ ಅವರು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ವಿಕಲಚೇತನರ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಿದರು.
ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೊನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಲೋಕೋಪಯೊಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಬಬಲೇಶ್ವರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ತಿಕೋಟಾ ತಹಶೀಲ್ದಾರ ಸುರೇಶ ಮುಂಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

