ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ | ಶೈಲಜಾ ಪಾಟೀಲ್ ಯತ್ನಾಳ ಅಭಿಮತ
ವಿಜಯಪುರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಎಸ್‌ಎಸ್ ವತಿಯಿಂದ ಜಾಗೃತಿ ಜಾಥಾ ನಡೆಯಿತು.
ಒಂದು ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಬಂಧಿಯಾಗಿದ್ದ ಮಹಿಳೆ ಇಂದು ಸ್ವಚ್ಛಂದವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ತನಗೆ ಸರಿ ಎನಿಸಿದ ರೀತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ಪುರುಷನಿಗೆ ಸರಿ ಸಮನಾಗಿ ನಿಂತು ತನ್ನ ಸ್ವಂತ ಬಲದ ಮೇಲೆ ಮುನ್ನುಗ್ಗುತ್ತಿದ್ದಾಳೆ. ಮಹಿಳೆಯ ಈ ಪ್ರಗತಿ ಲಿಂಗ ತಾರತಮ್ಯತೆಯನ್ನು ತೊಡೆದು ಹಾಕಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗಸೂಚಿಯಾಗಿದೆ ಎಂದು ಶ್ರೀ ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತದ ವಿಜಯಪುರ ನಿರ್ದೇಶಕಿ ಶೈಲಜಾ ರಾ ಪಾಟೀಲ ಯತ್ನಾಳ ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸ್ವಾಸ್ಥö್ಯ ಮಹಿಳಾ ಸಮಾಜ ನಿರ್ಮಾಣದೆಡೆಗೆ ನಮ್ಮ ನಡಿಗೆ ಎನ್ನುವ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು; ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಮೂಲೆಗುಂಪು ಮಾಡುತ್ತ ಬಂದಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಹಾಗೆ ಹೆಣ್ಣುಮಕ್ಕಳು ಸಹ ಬದಲಾವಣೆಯ ದಾರಿಯಲ್ಲಿ ಸಾಗುತ್ತ ಬಂದಿದ್ದಾರೆ. ಮನೆಯನ್ನು ನಿಭಾಯಿಸುವುದರ ಜೊತೆಗೆ ಪುರುಷನ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದನ್ನು ರಾಣಿ ಚನ್ನಮ್ಮನಂತ ವೀರ ವನಿತೆಯರು ತೋರಿಸಿಕೊಟ್ಟಿದ್ದಾರೆ. ಹಾಗೆ ಆಧುನಿಕ ಈ ಕಾಲದಲ್ಲಿ ಮಹಿಳೆಯರು ತಮ್ಮಲ್ಲಿನ ದಿಟ್ಟತನದಿಂದ ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಓಂ ಶಾಂತಿಯ ಸರೋಜಾ ಅಕ್ಕನವರು; ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಇಂದು ಮಹಿಳೆಯರು ಸಹ ಬದಲಾವಣೆಯ ಪರ್ವಕ್ಕೆ ಒಗ್ಗಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂದುಕೊಂಡಿದ್ದ ಕ್ಷೇತ್ರಗಳಲ್ಲಿ ಹೆಜ್ಜೆ ಹಾಕಿ ತಾವು ಸಹ ಪುರಷನಿಗೆ ಸರಿಸಮನಾಗಿ ಕಾರ್ಯ ನಿರ್ವಹಣೆ ಮಾಡಬಲ್ಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅದಕ್ಕೆ ಪ್ರಸ್ತುತ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರಿಂದ ಹಿಡಿದು ಹಲವಾರು ಮಹಿಳೆಯರನ್ನು ಉದಾಹರಣೆಯಾಗಿ ತೋರಿಸಬಹುದಾಗಿದೆ. ತಮ್ಮಲ್ಲಿ ಅಡಗಿರುವ ಸೂಪ್ತವಾದ ಶಕ್ತಿಯನ್ನು ಆಧ್ಯಾತ್ಮದ ಸಹಾಯದಿಂದ ಸದ್ಭಳಕೆ ಮಾಡಿಕೊಂಡು ಸಂಸ್ಕಾರವಂತ ಸಮಾಜವನ್ನು ಕಟ್ಟುವಲ್ಲಿ ಮಹಿಳೆ ಸದಾ ಚಿಂತನೆ ನಡೆಸಬೇಕು ಎಂದು ಹೇಳಿದರು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಅಟಲಬಿಹಾರಿ ವಾಜಪೇಯಿ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತದ ವರೆಗೂ ಜಾಥಾ ನಡೆಸಿದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಇತರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಂತರದಲ್ಲಿ ಮಹಿಳಾ ಜಾಗೃತಿಗಾಗಿ ಏಕಾಂಕ ನಾಟಕ ಹಾಗೂ ನೃತ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್, ಸಿದ್ಧೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ನ ಸದಸ್ಯೆ ಸೀಮಾ ಕೋರೆ ಸೇರಿದಂತೆ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂಧಿವರ್ಗದವರು ಭಾಗವಹಿಸಿದ್ದರು.

