ಆಲಮಟ್ಟಿ ಎಂ.ಎಚ್.ಎಂ.ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ | ಪ್ರತಿಭಾ ಪುರಸ್ಕಾರ
ಆಲಮಟ್ಟಿ: ಇಂದಿನ ಯುವಜನತೆ ಒಂದಿಷ್ಟು ಒಳ್ಳೆಯ ಮೌಲ್ಯಾಧಾರಿತ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನ ಹೆಜ್ಜೆ ಪಥದಲ್ಲಿ ಸಾಗಬೇಕು. ಆದರ್ಶಗಳಿಲ್ಲದಿದ್ದರೆ ಬದುಕಿಗೆ ಅರ್ಥವೇ ಇಲ್ಲ ಎಂದು ಶಿಕ್ಷಕ, ಸಾಹಿತಿ, ವಾಗ್ಮಿ ಅಶೋಕ ಹಂಚಲಿ ಹೇಳಿದರು.
ಸ್ಥಳೀಯ ಎಸ್.ವ್ಹಿ. ವ್ಹಿ. ಸಂಸ್ಥೆಯ ಎಂ.ಎಚ್.ಎಂ.ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಸಕ್ತ ೨೦೨೩-೨೪ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶುಭಕೋರುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೆಂದರೆ ಪುಟಿಯುವ ಶಕ್ತಿ ಹೊಂದಿರುವಂಥ ಅದ್ಬುತ ಚೆಂಡುಗಳು ಇದ್ದಹಾಗೆ. ಹೇಗೆ ಪುಟಿಯಸುತ್ತೆವೆಯೋ ಹಾಗೆ ಪುಟಿದೇಳುತ್ತವೆ. ಇಂದು ಆ ಚೆಂಡುಗಳನ್ನು ನೈತಿಕತೆಯ ಆಧಾರದ ಮೇಲೆ ಸುಂದರವಾಗಿ ಪುಟಿಸಿ ಅರಳಿಸಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳು ಕೂಡಾ ಸರಿಯಾಗಿ ವಿದ್ಯಾಭ್ಯಾಸದ ವಿದ್ಯಾರ್ಜನೆ ಗೈದು ಒಂದಿಷ್ಟು ಸಾಧನೆಯ ದಾರಿಯಲ್ಲಿ ಸಾಗಬೇಕು. ಈ ನಡುವೆ ಜನ್ಮದಾತರ ಋಣಭಾರ ತೀರಿಸುವ ಛಲ ಹೊಂದಬೇಕು. ಜೊತೆಗೆ ಜ್ಞಾನ ದೀಕ್ಷೆ ನೀಡಿರುವ ಗುರುಗಳ ಋಣವೂ ನಿಸ್ವಾರ್ಥದಿಂದ ತೀರಿಸುವ ಮನೋಇಚ್ಚೆ ಇರಿಸಿಕೊಳ್ಳಬೇಕು. ಉತ್ತಮ ಪ್ರಗತಿ, ಸಾಧನೆಗೆ ಸಮಾಜವೇ ಎದ್ದುನಿಂತು ಪ್ರೋತ್ಸಾಹಿಸುತ್ತದೆ. ಅಂಥದೊಂದು ಉತ್ಕಟ ಬದುಕನ್ನು ಯುವಜನತೆ ಕಟ್ಟಿಕೊಳ್ಳಬೇಕು ಎಂದರು.
ಕಾದ ಹಂಚಿನ ಮೇಲೆ ಬಿದ್ದ ನೀರ ಹನಿಗೆ ಉಳಿಗಾಲ ಇಲ್ಲ.ಅದು ಅಲ್ಪಸಮಯ ನಕ್ಷತ್ರದ ಹಾಗೆ ಹೊಳೆದು ಅವಿಯಾಗಿ ಮಾಯವಾದರೆ, ಕಮಲದ ಎಲೆಗಳ ಮೇಲೆ ಸುರಿದ ಮಳೆಹನಿಗಳ ನೀರು ಬಹುಹೊತ್ತು ಮಿನಗದು. ಈ ರೀತಿಯ ಮಕ್ಕಳಿಗೆ ತಮ್ಮ ಭವಿಷ್ಯತ್ತಿನ ದಿನಮಾನಗಳು ಬಲು ಕಠಿಣದಾಯಕವಾಗಿ ಪರಿಣಮಿಸುತ್ತವೆ. ಸ್ವಾತಿ ಮಳೆ ಹನಿಗೆ ಕಾಯುವ ಕಪ್ಪೆಯ ಚಿಪ್ಪಿನ ಹಾಗೆ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಗುರುಗಳು ಬೋಧಿಸಿ ಕರುಣಿಸಿದ ಜ್ಞಾನದ ಪವಿತ್ರ ಹನಿಗಳನ್ನು ಅಮೃತದ ಹಾಗೆ ಸ್ವೀಕರಿಸಿ ಶಾಶ್ವತ ಮುತ್ತುರತ್ನಗಳಾಗಿ ಹೊಳಯಬೇಕು ಎಂದು ಯುವಜನಾಂಗಕ್ಕೆ ಅವರು ಕರೆ ನೀಡಿದರು.
ಓದು, ಬರಹದ ಜ್ಞಾನಮಟ್ಟ ಹೆಚ್ಚಿಸಿಕೊಂಡವರೇ ನಿಜಕ್ಕೂ ರಿಯಲ್ ಲೈಫ್ ನ ಹೀರೋಗಳು. ಬಣ್ಣಬಣ್ಣದ ಉಡುಗೆ, ತೋಡುಗೆ ಸ್ಟೈಲ್ ದೊಂದಿಗೆ ಮೋಟಾರು ಬೈಕ್ ಮೇಲೆ ಧಿಮಾಕಿನ ಹೊಮ್ಮಬಿಮ್ಮು ಬೀರುತ್ತಾ ಕಲಿಕಾ ಸಮಯದಲ್ಲಿ ಹೀರೋ ಹಾಗೆ ರೀಲ್ ಬಿಟ್ಟು ಪೋಸ್ ನೀಡುವರಿಗೆ ಖಂಡಿತಾ ಭವಿಷ್ಯ ಇಲ್ಲ, ಬೆಲೆಯೂ ಇಲ್ಲ. ಇಂಥವರು ಕೇವಲ ನಾಲ್ಕು ದಿನ ಮೆರೆದು ಖುಷಿ ಪಡುತ್ತಾರೆ ಅಷ್ಟೇ. ಮಕ್ಕಳು ನಾಗರಿಕ ಸಮಾಜದಲ್ಲಿ ಅನಾಗರಿಕರಾಗಿ ಬೆಳೆಯಬಾರದು. ಕ್ಷಣಿಕಯುತ ವ್ಯಾಮೋಹ ತೊರೆದು ಮೌಲ್ಯಯುತ ಶಿಕ್ಷಣ ಪಡೆಯುವ ಮೂಲಕ ಸರ್ವೋತ್ತಮ ಜೀವನ ಪಯಣದ ಮೈಲುಗಲ್ಲು ದಾಟುತ್ತಾ ಸಾರ್ಥಕತೆ ಜೀವನ ಪಡೆಯಬೇಕು ಎಂದರು.
ಪವಿತ್ರ ತಾಯಿ ನೆಲ ಪ್ರೀತಿಸಿ ಅಭಿಮಾನ ಪಡಿ..! ಜನ್ಮಕೊಟ್ಟ ತಂದೆ,ತಾಯಿ ಹಾಗೂ ನಮ್ಮ ಭಾರತ ದೇಶ ಸ್ವರ್ಗಕ್ಕಿಂತ ಮಿಗಿಲಾಗಿದೆ.ಈ ಪರಮ ಪವಿತ್ರ ದೇಶದ ನೆಲವನ್ನು ಪ್ರೀತಿಸುವಂಥ ಭಾವನೆ ಪ್ರತಿಯೊಬ್ಬರ ರಕ್ತದ ಕಣದಲ್ಲಿ, ಮನದಲ್ಲಿ ಹರಿದಾಡಬೇಕು. ನೆಲ,ಜಲ,ದೇಶದ ಬಗ್ಗೆ ಅಭಿಮಾನ ಪಡುವಂಥ ಶಿಕ್ಷಣ ಇಂದಿನ ಅಗತ್ಯ ಎಂದು ಸಾಹಿತಿ ಅಶೋಕ ಹಂಚಲಿ ಅಭಿಪ್ರಾಯಪಟ್ಟರು.
ಶರಣ ಮಂಜಪ್ಪ ಹರ್ಡೇಕರ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ನಾಡಿನ ಶ್ರೇಷ್ಠ ವ್ಯಕ್ತಿಗಳ ಹೆಸರಿನ ಮೇಲೆ ಇಲ್ಲಿ ಹುಟ್ಟಿಕೊಂಡಿರುವ ಈ ಪವಿತ್ರ ಶಾಲೆಗಳಲ್ಲಿ ಕಲಿಯುವರೆ ಪುಣ್ಯವಂತರು. ತಮಗೆ ಜ್ಞಾನವನ್ನು ಕೊಟ್ಟು ಅಕ್ಷರವನ್ನು ಎದೆಯೊಳಗೆ ಬಿತ್ತಿದ ಶಾಲೆಯಿದು. ಹೂವಾಗಿ ಅರಳಿಸಿ ನನ್ನ ಬದುಕನ್ನು ಹಸನಗೊಳಿಸಿದೆ ಎಂದು ಅಭಿಮಾನದಿಂದ ಹೇಳಿಕೊಂಡರು.
ಮುಂದೊಂದು ದಿನ ನೀವುಗಳು ಕೂಡಾ ಈ ನಾಡನ್ನು ಇನ್ನಷ್ಟು ಬೆಳಗಿಸುವ ನಕ್ಷತ್ರಗಳಾಗಿ ಮಿನುಗಿ. ತಮ್ಮ ಏಳಿಗೆಯ ಸರ್ವಸ್ವರಾಗಿರುವ ತಂದೆ, ತಾಯಿ,ಗುರುಗಳನ್ನು ಸಂತೃಪ್ತಗೊಳ್ಳುವಂಥ ಒಳ್ಳೆಯ ಕೆಲಸ ಮಾಡಿ. ಸಾಧನಾ ಶಿಖರಕ್ಕೆರಿ ನಾಡಿಗೆ ಕೀರ್ತಿ ತರುವಂತರಾಗಬೇಕೆಂದು ಮಕ್ಕಳಿಗೆ ಅಶೋಕ ಹಂಚಲಿ ಕರೆಯಿತ್ತರಲ್ಲದೇ ತಮ್ಮ ಭಾಷಣದ ಮಧ್ಯೆ ಅಗಾಗ ಜನಪದ ಸೊಗಡಿನ ರಸಸತ್ವವುಳ್ಳ ಗೀತರಾಗಳನ್ನು ಇಂಪಾದ ಧ್ವನಿಕಂಠದ ಮೂಲಕ ಹೇಳಿ ರಂಜಿಸಿದರು.
ವಿಜಯಪುರ ವಿಭಾಗದ ಹೆದ್ದಾರಿ ಇಂಜನೀಯರ್ ಕೊಡುಗೆ ದಾನಿ ದಸ್ತಗೀರಸಾಬ್ ಮೇಲಿನಮನಿ ಮಾತನಾಡಿದರು.
ಕಾರ್ಯಕ್ರಮ ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ವಾಲಿಕಾರ, ಸದಸ್ಯ ಮುಬಾರಕ ಬಾಗಲಕೋಟ, ಪತ್ರಕರ್ತ ನೀಲೇಶ ಗಾಂಧಿ ಪಾಲ್ಗೊಂಡಿದ್ದರು.
ಪ್ರತಿಭಾವಂತೆ ವಿದ್ಯಾರ್ಥಿನಿ ಅಶ್ವಿನಿ ಮುತ್ತಲದಿನ್ನಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಾಂತಾ ಪೂಜಾರಿ, ಬಸವರಾಜ ತಳವಾರ, ರೂಪಾ ಮುತ್ತಗಿ ಅನಿಸಿಕೆ ಹಂಚಿಕೊಂಡರು.
ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಯು.ಎ.ಹಿರೇಮಠ, ಜಿ.ಎಂ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಕೆ.ಜಗದೇವಿ, ಸರಸ್ವತಿ ಈರಗಾರ, ವಿದ್ಯಾರ್ಥಿ ಪ್ರತಿನಿಧಿ ಸಚಿನ ಲಮಾಣಿ, ಮಹಿಳಾ ಪ್ರಧಾನಿ ಸೃಷ್ಠಿ ಬಡಿಗೇರ ಇತರರಿದ್ದರು.
ಅಶ್ವಿನ ಮಾದರ ಸ್ವಾಗತಿಸಿದರು. ಮಹೇಶ ಶಾರಪದೆ ಪುಷ್ಪಾರ್ಚನೆ, ಸೌಜನ್ಯ ವಡ್ಡರ ಸಂಗಡಿಗರು ಸ್ವಾಗತಗೀತೆ ನಡೆಸಿಕೊಟ್ಟರು. ಭವಾನಿ ಕನಸೆ ವಂದಿಸಿದರು.

