ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ | ಬಿಎಸ್ ಯಡಿಯೂರಪ್ಪ ಸೂಚನೆ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರಿ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿರುವ ಬಿಜೆಪಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಈ ಕುರಿತು ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಚರ್ಚೆ ನಡೆದಿದೆ, ಆದರೆ ಅಂತಿಮವಾಗಿಲ್ಲ. ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ಗೆ ಎರಡು ಅಥವಾ ಮೂರು ಸ್ಥಾನಗಳನ್ನು ನೀಡಬಹುದು ಎಂದು ಸುಳಿವು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕತ್ವ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
“ಗುರುವಾರ ಅಮಿತ್ ಶಾ ಜಿ, ನಡ್ಡಾ ಜೀ ಮತ್ತು ನಾವೆಲ್ಲರೂ ಒಟ್ಟಾಗಿ ಎಲ್ಲಾ 28 ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿದ್ದೇವೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಇದೆಲ್ಲವನ್ನು ಪ್ರಧಾನಿಯೊಂದಿಗೆ ಚರ್ಚಿಸಲಾಗುವುದು. ಎರಡು-ಮೂರು ದಿನಗಳಲ್ಲಿ ನಮಗೆ ಸ್ಪಷ್ಟತೆ ಸಿಗಲಿದೆ. ಎಲ್ಲದರ ಬಗ್ಗೆ ಚರ್ಚೆ ನಡೆದಿದೆ, ಆದರೆ ಎಲ್ಲಿಂದ ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಬಗ್ಗೆ ಚರ್ಚೆ ನಡೆದಿದೆ” ಎಂದು ಯಡಿಯೂರಪ್ಪ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತುತ ಶಿಗ್ಗಾಂವಿಯಿಂದ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಕಣಕ್ಕಿಳಿಯಬಹುದು ಎಂಬ ಊಹಾಪೋಹಗಳು ರಾಜ್ಯ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದ್ದು, ಹಾಲಿ ಸಂಸದ ಶಿವಕುಮಾರ ಉದಾಸಿ ಅವರು ಅವಧಿ ಮುಗಿದ ಬಳಿಕ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಲಿದ್ದಾರೆ.

