ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ
ಮುದ್ದೇಬಿಹಾಳ: ಸ್ವಧರ್ಮದಲ್ಲಿ ನಿಷ್ಠೆ, ಪರ ಧರ್ಮದಲ್ಲಿ ಸಹಿಷ್ಣುತೆ ಕಾಪಾಡಿಕೊಂಡು ಬರುವದೇ ಎಲ್ಲ ಧರ್ಮಗಳ ಮೂಲ ಗುರಿಯಾಗಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಗವತ್ಪಾದಕರು ಹೇಳಿದರು.
ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಕೊನೆಯ ದಿನದ ಧರ್ಮ ಸಂದೇಶ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇವತ್ತಿನ ದಿನಮಾನಗಳಲ್ಲಿ ಕೆಲವು ಜಾತಿ ಜನಾಂಗಗಳನ್ನು ಪುಷ್ಠೀಕರಿಸುವಂತಹ ಕೆಲವು ಸಮುದಾಯಗಳನ್ನು ವ್ಯವಸ್ಥಿತವಾಗಿ ತುಳಿಯುವಂತಹ ಹುನ್ನಾರ ಕೆಲವು ಸಂದರ್ಭಗಳಲ್ಲಿ ನಡೆಯುತ್ತಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಇತಿಹಾಸ ಹೇಳುತ್ತೆ ನಿನ್ನೆ ಸುಖ ಇತ್ತು ಅಂತ, ವಿಜ್ಞಾನ ಹೇಳುತ್ತೆ ನಾಳೆ ಸುಖ ಇದೆ ಎಂದು. ಆದರೆ ಮನುಷ್ಯ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿದಲ್ಲಿ ಜೀವನದಲ್ಲಿ ಪ್ರತಿನಿತ್ಯ ಸುಖವನ್ನು ಕಾಣಬಹುದು ಎಂದು ಧರ್ಮ ಸ್ಪಷ್ಠವಾಗಿ ಹೇಳುತ್ತೆ. ಮಾನವನ ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಪ್ರತಿಯೊಬ್ಬರ ಪಾಲನೆ ಅಗತ್ಯವಿದೆ ಎಂದರು.
ಗುರು ಚನ್ನವೀರ ಶಿವಾಚಾರ್ಯರು ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರಗಳು ಬದುಕಿಗೆ ಹೊಸ ಮಾರ್ಗಗಳನ್ನು ತೋರಿಸುತ್ತವೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದರು.
ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.
ರಂಭಾಪುರಿ ಶಾಖಾ ಮಠ ಮಳಲಿಯ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯರು ಮಾತನಾಡಿದರು. ಗಡಿಗೌಡಗಾಂವದ ಶಾಂತಲಿಂಗ ಶಿವಾಚಾರ್ಯುರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಸುಗೂರಿನ ಚನ್ನರುದ್ರಮುನಿ ಶಿವಾಚಾರ್ಯರು ಸೇರಿದಂತೆ ಮತ್ತೀತರರು ಇದ್ದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಕುಕನೂರಿನ ಚನ್ನಮಲ್ಲ ದೇವರು ಕಾರ್ಯಕ್ರಮವನ್ನು ನಿರ್ವಹಿಸಿದರು.

