ವಿಜಯಪುರ: ವಿಜಯಪುರದಲ್ಲಿ ಶನಿವಾರ ಮಾ.9 ರಂದು 11 ಗಂಟೆಗೆ ಪಂಚಗಂಗಾ ಒಣದ್ರಾಕ್ಷಿ ಸಂಸ್ಕರಣಘಟಕವನ್ನು
ಯೋಗಾಶ್ರಮದ ಶ್ರೀ
ಬಸವಲಿಂಗಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉದ್ಯಮಿ ಅಣ್ಣಾರಾಯ ಬಿರಾದಾರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲೆಯ
ಸಚಿವರುಗಳಾದ ಎಂ ಬಿ ಪಾಟೀಲ್ ಮತ್ತು ಶಿವಾನಂದ ಪಾಟೀಲ್, ಸಂಸದ ರಮೇಶ್ ಜಿಗಜಿಣಿಗಿ ಅಲ್ಲದೆ ಶಾಸಕರುಗಳಾದ ಬಸವರಾಜಪಾಟೀಲ್ ಯತ್ನಾಳ್, ಯಶವಂತರಾಯಗೌಡ ಪಾಟೀಲ್, ಅಪ್ಪಾಜಿ ಪಾಟೀಲ್, ವಿಠಲ ಕಟಕದೊಂಡ, ರಾಜುಗೌಡಪಾಟೀಲ್, ಅಶೋಕ್ ಮನಗೂಳಿ, ಮಾಜಿ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸುನಿಲಗೌಡಪಾಟೀಲ್, ದೆಹಲಿಯ ರಾಷ್ಟ್ರೀಯ
ತೋಟಗಾರಿಕಾ ಬೋರ್ಡ್ ನಿರ್ದೇಶಕ ಭೀಮಸೇನ್ ಲೋಕರೆ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಪಶ್ಚಿಮ ಬಂಗಾಳದ ನಿವೃತ್ತ ಡಿಜಿಪಿ ಜಿಎಂಪಿ ರೆಡ್ಡಿ ಅವರುಗಳುಆಗಮಿಸಲಿದ್ದಾರೆ ಎಂದು ಹೇಳಿದರು.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮತ್ತು ಅಥಣಿ ಪರಿಸರದ ಲಕ್ಷಾಂತರ ಎಕರೆಯಲ್ಲಿ ದ್ರಾಕ್ಷಿ
ಬೆಳೆಯಲಾಗುತ್ತಿದ್ದು
ದೇಶದ ಒಣ ದ್ರಾಕ್ಷಿ ಮಾರುಕಟ್ಟೆಯ ಒಟ್ಟು 60% ಒಣದ್ರಾಕ್ಷಿ ಬೇಡಿಕೆಯನ್ನು ಈ ಎರಡು ಜಿಲ್ಲೆಗಳಿಂದ ಪೂರೈಸಲಾಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆ ಇದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪಂಚಗಂಗಾ ಒಣ ದ್ರಾಕ್ಷಿ ಸಂಸ್ಕರಣ ಘಟಕ ಪ್ರಯತ್ನಿಸಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ತುಸು ಹೆಚ್ಚಿನ ದರದಲ್ಲಿ
ಒಣ ದ್ರಾಕ್ಷಿ ಖರೀದಿಸುವ ಮೂಲಕ ಸಾವಿರಾರು ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಂದಲೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಒಣ ದ್ರಾಕ್ಷಿ ಪೂರೈಸುವ ವ್ಯವಸ್ಥೆ ಹೊಂದಲಾಗಿದೆ. ಇದರಿಂದ ರೈತರಿಗೆ ಕನಿಷ್ಠ 10 ರಿಂದ 15 ಪರ್ಸೆಂಟ್ ಆರ್ಥಿಕ ಲಾಭವಾಗಲಿದೆ. ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸೌಲಭ್ಯ ದೊರಕಲಿದೆ. ಇದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೂ ಈ ವ್ಯವಸ್ಥೆ ಹೆದ್ದಾರಿಯಾಗಲಿದೆ ಎಂದವರು ಹೇಳಿದರು.
ಗಾತ್ರ ಮತ್ತು ಬಣ್ಣಗಳ ಆಧಾರದಲ್ಲಿ ವಿಂಗಡಣೆಯಾಗಿ ಸ್ಥಳೀಯ ಮಾರುಕಟ್ಟೆಗೆ ಅಗತ್ಯವಿರುವ ಎ ಬಿ ಸಿ ಡಿ ಮತ್ತು ಇಮಎಂದು ಐದು ಗುಣಮಟ್ಟಗಳಲ್ಲಿ ಒಣ ದ್ರಾಕ್ಷಿ ಉತ್ಪಾದನೆಯಾದರೆ, ಅದೇ ರೀತಿ ಅಂತರಾಷ್ಟ್ರೀಯ ಮಾರುಕಟ್ಟೆಗೆ ಆಯಾ ದೇಶಗಳ ಬೇಡಿಕೆಗೆ ಅನುಗುಣವಾಗಿ ಎ ಬಿ ಮತ್ತು ಸಿ ಎಂದು ಮೂರು ಪ್ರಕಾರದ ಗುಣಮಟ್ಟಗಳಲ್ಲಿ ಒಣ ದ್ರಾಕ್ಷಿ ಉತ್ಪಾದನೆ ಆಗಲಿದೆ. ಅತಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವ ಮೂಲಕ ಅತಿ ಕಡಿಮೆ ವೇಸ್ಟೇಜ್ ಗೆ ಆದ್ಯತೆ ಸಿಗಲಿದೆ. ಮಾರುಕಟ್ಟೆ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ನಿತಿನ್ ಬಿರಾದಾರ ನೇತೃತ್ವದಲ್ಲಿ ಸುರಳೀತವಾದ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಸೋಲಾಪುರ ರಸ್ತೆಯ ಯಶೋಧ ಆಸ್ಪತ್ರೆ ಹಿಂದುಗಡೆ ಮೂರುವರೆ ಎಕ್ಕರೆ ಪ್ರದೇಶದಲ್ಲಿ ನಾಲ್ಕು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆರಂಭವಾಗುತ್ತಿರುವ ಈ ಘಟಕದಲ್ಲಿ ವರ್ಷವಿಡಿ 150 ಜನ ಉದ್ಯೋಗಮಾಡಲಿದ್ದಾರೆ. ಸದ್ಯಕ್ಕೆ ನಮ್ಮ ಘಟಕಕ್ಕೆ ಅಗತ್ಯವಿರುವ ಕೂಲ್ ಸ್ಟೋರೇಜ್ ವ್ಯವಸ್ಥೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲಿ ದ್ರಾಕ್ಷಿ ಬೆಳೆಗಾರರಿಗೆ
ಅಗತ್ಯವಿರುವ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ವಿಶೇಷವಾಗಿ ಸ್ಥಾಪಿಸಲಾಗುತ್ತಿದೆ. ಅದರಲ್ಲಿ 10 ಸಾವಿರ ಟನ್ಒಣ ದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್ ಮಾಡುವ ಕೆಪಾಸಿಟಿ ಇರಲಿದೆ. ಪ್ರಸ್ತುತ ನಮ್ಮ ಘಟಕದಿಂದ ದಿನವೊಂದಕ್ಕೆ ಭಾರತದ ಮಾರುಕಟ್ಟೆ ಗುಣಮಟ್ಟದ 20 ಟನ್ ಒಣ ದ್ರಾಕ್ಷಿ ಉತ್ಪಾದನೆ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ 15 ಟನ್ ಒಣದ್ರಾಕ್ಷಿಉತ್ಪಾದನೆ ಆಗಲಿದೆ. ಒಟ್ಟಿನಲ್ಲಿ ಈ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಹೆಚ್ಚಿನ
ಅನುಕೂಲ ಸರಕಾರಕ್ಕೆ ಹೆಚ್ಚಿನ ಪ್ರಮಾಣದ ಕರಸಂಗ್ರಹ
ಮತ್ತು ಒಣ ದ್ರಾಕ್ಷಿ ರಫ್ತು
ಪ್ರಮಾಣದಲ್ಲೂ ಹೆಚ್ಚಳವಾಗಲಿದೆ ಎಂದು ಅಣ್ಣಾರಾಯ ಬಿರಾದಾರ ವಿವರಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿತಿನ್ ಬಿರಾದಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

