ವಿಜಯಪುರ: ನಗರದ ವಿವಿಧ ವಾರ್ಡ್ ಗಳಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿ, ನಂತರ ಸಾರ್ವಜನಿಕರ ಅಹವಾಲು ಆಲಿಸಿದರು.
ವಾರ್ಡ್ ನಂ.21 ರಲ್ಲಿ ಬರುವ ಇಬ್ರಾಹಿಂಪುರದ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ 2022-23ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಿದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ, ಸನ್ ಶೈನ್ ಸಿಟಿಯಲ್ಲಿ ರೂ.1 ಕೋಟಿ ಅನುದಾನದಲ್ಲಿ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ನಂ.28ರ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.13 ರಲ್ಲಿ ವಿವೇಕ ಯೋಜನೆಯಡಿ ಮಂಜೂರಿಸಿ, ನಿರ್ಮಾಣ ಮಾಡಲಾದ ಶಾಲಾ ಕೊಠಡಿ ಉದ್ಘಾಟಿಸಿ, ನಂತರ ವಾರ್ಡ್ ನಂ.29ರ ರಾಜಾಜಿನಗರದ ನಮ್ಮ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.40 ರಲ್ಲಿ ವಿವೇಕ ಯೋಜನೆಯಡಿ ಮಂಜೂರಿಸಿ, ನಿರ್ಮಾಣ ಮಾಡಲಾದ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.
ಪ್ರತಿ ಕಾರ್ಯಕ್ರಮದ ಬಳಿಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಶಾಸಕರು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸಂಬಂಧಿಸಿದವರ ಮೂಲಕ ಪರಿಹಾರ ಕಲ್ಪಿಸಿದರು. ಉಳಿದವುಗಳಿಗೆ ಪರಿಹರಿಸುವ ಭರವಸೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗಡಗಿ, ಪ್ರೇಮಾನಂದ ಬಿರಾದಾರ ಸೇರಿದಂತೆ ಮುಖಂಡರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

