ಮುದ್ದೇಬಿಹಾಳ: ಜಾನಪದ ಮಾನವ ಜನಾಂಗದ ಸಂಸ್ಕೃತಿಯಾಗಿದೆ. ಕಾಡು ಮಾನವರು ನಾಡಿಗೆ ಬಂದು ಸಂಘಟಿತರಾಗಿ ಬದುಕಿಗಾಗಿ ಒಳ್ಳೆಯ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ, ಮನೋರಂಜನೆ ರೂಢಿಸಿಕೊಂಡು ಜೀವನ ಪ್ರಾರಂಭಿಸಿದರು. ಈ ಎಲ್ಲ ಪದ್ದತಿಗಳು ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮ ಬದುಕಿಗೆ ದಾರಿ ದೀಪವಾಗಿವೆ ಎಂದು ಎಂಜಿವ್ಹಿಸಿ ಬಿ.ಇಡಿ ಕಾಲೇಜ ಪ್ರಾಚಾರ್ಯ ಡಾ.ಆರ್.ಜಿ.ಚಿಕ್ಕಮಠ ಅಭಿಪ್ರಾಯಪಟ್ಟರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ” ಜಾನಪದ ಕಲಾ ಮೇಳ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಅನುಭವದ ಮೂಲಕ ಕಟ್ಟಿಕೊಟ್ಟ ಜಾನಪದ ಸಿದ್ದಾಂತ ಸರ್ವ ಜನಾಂಗಕ್ಕೂ ಒಳಿತನ್ನು ಬಯಸುವ ಶ್ರೇಷ್ಠ ಪರಂಪರೆಯಾಗಿದೆ. ಅದನ್ನು ಅರಿತು ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
” ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಪಾತ್ರ” ಕುರಿತು ಉಪನ್ಯಾಸ ನೀಡಿದ ಕಜಾಪ ಬಸವನಬಾಗೇವಾಡಿ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕಜಾಪ ೯ ವರ್ಷದಲ್ಲಿ ಯಾವ ಸಂಘಟನೆಯೂ ಮಾಡದಂತಹ ಕೆಲಸಗಳನ್ನು ಮಾಡುತ್ತಿದೆ. ಕಲಾವಿದರಿಗೆ ವೇದಿಕೆ, ಸನ್ಮಾನ, ಪ್ರಶಸ್ತಿ, ಸಮೀಕ್ಷೆ, ಕೃತಿ ಪ್ರಕಟಣೆ, ಮಾಡುತ್ತಾ ಸಮಾವೇಶ, ಸಮ್ಮೇಳನ, ತರಬೇತಿ ಶಿಬಿರ ನಡೆಸುತ್ತಾ ಬಂದಿದೆ. ಕಲಾವಿದರಿಗೆ ಬಟ್ಟೆ ,ದವಸ – ದಾನ್ಯ, ವಿತರಿಸಿದೆ. ಜಿಲ್ಲಾ, ತಾಲೂಕು, ವಲಯ ಮತ್ತು ಗ್ರಾಮ ಘಟಕ ರಚಿಸಿ ಜಾನಪದ ಕಲೆ – ಕಲಾವಿದರ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ರಾಜ್ಯದಲ್ಲಿಯೇ ವಿಜಯಪುರ ಜಿಲ್ಲಾ ಘಟಕ ಮೊದಲು ಉಧ್ಘಟನೆಯಾಗಿ ಸಾವಿರಾರು ಕಲಾವಿದರ ಮಾಹಿತಿ ಸಂಗ್ರಹ, ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಲಾವಿದರಿಗೆ ಪ್ರದರ್ಶನಕ್ಕೆ ವೇದಿಕೆ, ಸನ್ಮಾನ, ಪ್ರಶಸ್ತಿ ಕಾರ್ಯ ಮಾಡಿದ್ದೇವೆ. ಜಿಲ್ಲೆಯ ಮಠ – ಮಂದಿರ, ಸಂಘ – ಸಂಸ್ಥೆ, ಹಾಗೂ ಪರಿಷತ್ತಿನ ಪದಾಧಿಕಾರಿಗಳ ಸಹಕಾರ ಮರೆಯಲಾಗದು ಎಂದರು.
ಮುದ್ದೇಬಿಹಾಳ ತಾಲೂಕು ಕ ಜಾ ಪ ಅಧ್ಯಕ್ಷ ಎ ಆರ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಜಾಪ ಸದಸ್ಯರಾದ ಶ್ರೀಮತಿ ಎಸ್ ಬಿ ಗೊಂಗಡಿ ಸ್ವಾಗತಿಸಿ ನಿರೂಪಿಸಿದರು. ಎಂ ಬಿ ವಾಳದ ವಂದಿಸಿದರು. ಕಾರ್ಯಕ್ರಮದಲ್ಲಿ ಗೋನಾಳ – ಭಜನೆ, ಗಂಗೂರ ತತ್ವಪದ, ಉಪ್ಪಲದಿನ್ನಿ ರಿವಾಯತ ಪದ, ಇಟಗಿ ಜನಪದ ಗೀತೆ, ಬಿದರಕುಂದಿ – ಕುಂಟೋಜಿ ಹಂತಿಪದ, ಅಬ್ಬಿಹಾಳ ಡೊಳ್ಳಿನ ಪದ, ಕಣಮುಚನಾಳ ಸಂಪ್ರದಾಯ ಪದ, ದೇವರಹುಲಗಬಾಳ ಸೋಬಾನೆಪದ, ಕುಂಟೋಜಿ ಚೌಡಕಿ ಪದ ಪ್ರದರ್ಶನಗೊಂಡವು.
Subscribe to Updates
Get the latest creative news from FooBar about art, design and business.
Related Posts
Add A Comment

