ಇಂದು ಮಹಾಶಿವರಾತ್ರಿ ನಿಮಿತ್ತ ವಿಶೇಷ ಲೇಖನ
ಡಾ. ಸಂತೋಷ ಬಿ. ನವಲಗುಂದ, ಪತ್ರಕರ್ತರು, ಬರಹಗಾರರು, ಮಳ್ಳಿ

ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಶ್ರೇಷ್ಠತೆಯ ಭಾವ ತಾ ಹೆಚ್ಚು ನಾ ಹೆಚ್ಚೆಂಬ ವಾದ ತಾರಕಕ್ಕೇರಿ ಇನ್ನೇನು ರಣರಂಗಕ್ಕೆ ಕಾರಣವಾಗುವ ಹೊತ್ತಿಗೆ ಇವರಿಬ್ಬರ ಮಧ್ಯೆ ಶಿವನು ಮಧ್ಯ ಪ್ರವೇಶಿಸಿ ಇಬ್ಬರಿಗೂ ತಿಳುವಳಿಕೆ ನೀಡಿ ಕೊನೆಗೆ ಸಂಧಾನ ಮಾಡಿಸಿ, ಕೈಲಾಸ ಪರ್ವತಕ್ಕೆ ಬಂದು ವಿರಾಜಮಾನನಾಗುತ್ತಾನೆ. ಆ ಸಂದರ್ಭದಲ್ಲಿ ಶ್ರೀ ವಿಷ್ಣು ಬ್ರಹ್ಮರು ಶಿವನ ಎಡ ಬಲದಲ್ಲಿ ಕುಳಿತು ಹಾರು, ತುರಾಯಿ, ಶಿವನಾಮದೊಂದಿಗೆ ಮುಂತಾದ ದಿವ್ಯ ವಸ್ತುಗಳಿಂದ ಮತ್ತು ಉಪಹಾರಗಳಿಂದ ಅನನ್ಯ ಭಕ್ತಿಯಿಂದ ಶಿವಪೂಜೆಯನ್ನು ಮಾಡಿದರು. ಇವರಿಬ್ಬರ ಭಕ್ತಿ ನಿಷ್ಠೆಗೆ ಸಂತುಷ್ಟನಾದ ಶಿವನು ವಿಷ್ಣು ಬ್ರಹ್ಮರನ್ನು ಕುರಿತು “ ಎಲೈ ವತ್ಸರೇ, ಇಂದಿನ ದಿವಸವು ಮಹತ್ತರವಾದುದು, ಈ ದಿನವು ಶಿವರಾತ್ರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿ ಪವಿತ್ರ ದಿನವೆನಿಸುವುದು. ಈ ತಿಥಿ ನನಗೆ ಅತ್ಯಂತ ಪ್ರಿಯ ತಿಥಿಯಾಗಿರುವುದು” ಎಂದು ಶಿವನು ನುಡಿದನು. ವಿಷ್ಣು ಬ್ರಹ್ಮರಿಗೆ ಶಿವ ಬೋಧೆ ನೀಡಿದ ಪವಿತ್ರ ದಿನವೇ ಶಿವರಾತ್ರಿ ಎಂದು ಶಿವ ಪುರಾಣದಿಂದ ತಿಳಿದು ಬರುತ್ತದೆ.
ಮಾಘ ಮಾಸದ ಚತುರ್ದಶಿಯಂದು ಶಿವರಾತ್ರಿ ಆಚರಣೆ ಜಗತ್ತಿನ ಎಲ್ಲ ಶಿವ ಭಕ್ತರಿಂದ ವಿಜೃಂಭಣೆಯಿಂದ ಜರುಗುತ್ತದೆ. ಇನ್ನೂ ಹಲವು ಪುರಾಣಗಳ ಪ್ರಕಾರ ಪಾರ್ವತಿದೇವಿ(ಉಮೆ) ಶಿವನನ್ನು ವಿವಾಹವಾದ ದಿನವಿದು. ಶಿವ ರುದ್ರತಾಂಡವ ನೃತ್ಯವಾಡಿದ ದಿನ. ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದು, ವಿಷವನ್ನೆಲ್ಲ ಕುಡಿದು ನೀಲಕಂಠನಾದಾಗ ಗಂಟಿಲಿನಲ್ಲಿನ ವಿಷ ದೇಹದೊಳಗೆ ಇಳಿಯದಂತೆ ಪಾರ್ವತಿದೇವಿ ರಾತ್ರಿಯಿಡೀ ತಡೆದ ದಿನ. ತನ್ನ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ ಚಿತಾಭಸ್ಮಕ್ಕೆ ಗಂಗೆಯನ್ನು ಹರಿಸುವಂತೆ ಭಗೀರಥ ನಡೆಸಿದ ಘೋರ ತಪಸ್ಸಿಗೆ ಮೆಚ್ಚಿದ ಶಿವನು ತನ್ನ ಜಡೆಯಲ್ಲಿ ಅಲಂಕರಿಸಿದ್ದ ಗಂಗೆಯನ್ನು ಭೂಮಿಗೆ ಹರಿಸಿದ ದಿನವೆಂದು ಪುರಾಣಗಳು ತಿಳಿಸುತ್ತವೆ.
ಈ ಪುಣ್ಯ ದಿನದಂದು ಶಿವನ ಮೂರ್ತರೂಪಕ್ಕಾಗಲಿ, ಲಿಂಗರೂಪಿಗಾಗಲಿ ಯಾರು ಶ್ರದ್ಧೆ-ಭಕ್ತಿಯಿಂದ ಪೂಜಿಸುವರೋ ಅವರು ಶ್ರೇಷ್ಠರೆನಿಸಿಕೊಳ್ಳುವರು. ಇಲ್ಲಿ ವಿಶೆಷವಾಗಿ ಶಿವರಾತ್ರಿಯನ್ನು ರಾತ್ರಿಯಿಡೀ (ಜಾಗರಣೆ) ಭಜನೆ, ಸತ್ಸಂಗ, ಪುರಾಣ-ಪ್ರವಚನ ಇತ್ಯಾದಿ ಪೂಜಾಕರ‍್ಯಗಳ ಮೂಲಕ ಶಿವನ ಆರಾಧನೆ ಜರುಗುತ್ತದೆ. ದಿನವಿಡೀ ಉಪವಾಸ ವೃತದಿಂದ ಶಿವನನ್ನು ಪೂಜಿಸಿವುದು ವಿಶೇಷವಾಗಿರುತ್ತದೆ. ಷಡಕ್ಷರಿದೇವ ರಚಿಸಿದ ರಾಜಶೇಖರ ವಿಳಾಸ ಕೃತಿಯ ಮೂರನೇ ಆಶ್ವಾಸದಲ್ಲಿ ಪಂಚವಿಂಶತಿ ಲೀಲೆಗಳು ಎಂಬ ಶಿವನ ಇಪ್ಪತ್ತೆöÊದು ಲೀಲೆಗಳನ್ನು ವಿವರಿಸಿದ್ದಾನೆ. ಶಿವನ ಈ ಎಲ್ಲ ಲೀಲೆಗಳನ್ನು ಓದಿ ಅರ್ಥೈಸಿಕೊಂಡಾಗ ಶಂಕರನ ವಿರಾಡ್ರೂಪ ಕಣ್ಣ ಮುಂದೆ ಕಟ್ಟುತ್ತದೆ. ಭಕ್ತಿಯ ಭಾವವೂ ಇಮ್ಮಡಿಗೊಳ್ಳುತ್ತದೆ. ಈ ಮೂಲಕ ಶಿವನ ವಿವಿಧ ರೂಪ, ಅವತಾರಗಳು ಗೋಚರವಾಗುತ್ತವೆ. ಅಂತೆಯೇ, ಶಿವನಾಮದಿಂದಲೇ ಜೀವನ್ಮುಕ್ತಿ ಎನ್ನುವುದು ಭಾರತೀಯರ ಬಲವಾದ ನಂಬಿಕೆಯಾಗಿದೆ.
ಭಸ್ಮ, ರುದ್ರಾಕ್ಷಿ ಮತ್ತು ಶಿವನಾಮ ಈ ಮೂರು ಪುಣ್ಯರೂಪ ತರಿವೇಣಿಗೆ ಸಮನಾದ ಫಲದಾಯಕವಾಗಿರುವುದು. ಯಾರು ನಿತ್ಯವೂ ಭಸ್ಮ, ರುದ್ರಾಕ್ಷಿ ಧರಿಸಿ ಪಂಚಾಕ್ಷರಿ ಮಂತ್ರವನ್ನು ನಿರ್ಮಲ ಭಾವದಿಂದ ಜಪಿಸುವರೋ ಅಂತಹ ಭಕ್ತರು ಶಿವನಿಗೆ ಪ್ರಿಯರಾಗುತ್ತಾರೆ. ಯಾರು ಇವೆಲ್ಲವನ್ನೂ ತಿರಸ್ಕಾರಿಸುತ್ತಾರೋ ಅವರಿಗೆ ದಾರದ್ರö್ಯವೇ ಗತಿ ಎಂಬುದು ಶಿವಪುರಾಣ ಸ್ಪಷ್ಟಪಡಿಸುತ್ತದೆ.
ಹಿಂದೂಗಳು ಶ್ರದ್ಧೆಯಿಂದ ಪೂಜಿಸುವ ದೇವರುಗಳಲ್ಲಿಯೇ ಅತ್ಯಂತ ನಿರಾಡಂಬರದ ಪೂಜೆ ಬಯಸುವವನು ಶಿವನೆಂಬುದು ಭಕ್ತರ ನಂಬಿಕೆ. ಅಂತೆಯೇ ಶಿವನು ಭಸ್ಮ, ರುದ್ರಾಕ್ಷಿ, ಬಿಲ್ವಪತ್ರೆಯ ಪರಮ ಆಸಕ್ತ. ವಿಶ್ವದ ನಾನಾ ಭಾಗಗಳಲ್ಲಿರುವ ಶಿವನ (ಲಿಂಗರೂಪಿ) ದೇವಾಲಯಗಳಲ್ಲಿ ಶಿವರಾತ್ರಿಯಂದು ವಿಶೇಷ ಅಲಂಕಾರದಿಂದ ಪೂಜಾ ಕರ‍್ಯಕ್ರಮಗಳು ನಡೆಯುವವು. ವರ್ಷದಲ್ಲಿ ಬರುವ ಈ ಪವಿತ್ರ ದಿನದಂದು ಭಕ್ತರು ತಮ್ಮ ಭಕ್ತಿಯನ್ನು ಮೆರೆಯುವುದನ್ನು ಕಾಣುತ್ತೇವೆ.
ಮಾನವ ಮಹಾಮಾನವನಾಗಲು ಮಹಾಶಿವರಾತ್ರಿ ಆರಾಧನೆ: ಮನುಷ್ಯ ಮನುಷ್ಯನಾಗಿ ಬದುಕುವ ಹಾಗೂ ಸಕಲ ಜೀವಪರ ಬಾಳು ನಮ್ಮದಾಗಿಸಿ ಆತ್ಮದರಿವಿನಿಂದ ಪರಮಾತ್ಮನನ್ನು ಸಂತುಷ್ಟಗೊಳಿಸುವ ಪರಮ ಧ್ಯೇಯವೇ ಮಹಾಶಿವರಾತ್ರಿಯ ಆಚರಣೆ.
ರಂಗವಂದೇ ಕಂಬ ಒಂದೇ
ದೇವರೊಂದೆ ದೇಗುಲ ಒಂದೆ
ಗುಹೇಶ್ವರಾ! ನಿಮ್ಮ ಮನ್ನಣೆಯ
ಶರಣರೇ ದೇವರೆಂಬೆ.
ಲಿಂಗದಲ್ಲಿ ಮನವಿರಿಸಿದ ಶರಣಂಗೆ ದೇವರೊಬ್ಬನೇ. ಅಂತರಂಗವೇ ಮಂಟಪವಾಗಿ ಅಲ್ಲಿನ ಕಂಬವೇ ಏಕೋಭಾವವಾಗಿ ಮಂಟಪದಲ್ಲಿನ ಪರವಸ್ತುವೇ ದೈವವಾಗಿ ಕಂಡು ನಡೆದ ಶರಣರೇ ದೇವರೆಂಬ ಹಿರಿದಾದ ಅರ್ಥ ಪ್ರಭುದೇವರ ವಚನದಲ್ಲಡಗಿದೆ. ಈ ಕಟು ವಾಸ್ತವವನ್ನು ಅರಿತು ಮಾಡಿದ ಆಚರಣೆ ನಿಜಕ್ಕೂ ಶಿವನಿಗರ್ಪಿತವಾಗುವುದು. ಲಿಂಗ ಬೇರೆಯಲ್ಲ; ಶಿವ ಬೇರೆ ಅಲ್ಲ. ಮನುಷ್ಯ ತನ್ನ ನಿತ್ಯ ಬದುಕಿನ ಏರಿಳಿತಗಳಲ್ಲಿ ಜಿಗುಪ್ಸೆ, ಜಿದ್ದು, ಕೋಪ, ಭಾವೋದ್ವೇಗ, ಹತಾಶೆ, ಸಂಕುಚಿತತೆ, ಭಾವ ಕಲ್ಮಷ, ಅಲ್ಲದ ಪ್ರಚೋದನೆಗೊಳಗಾಗಿ ದಾನವರಂತೆ ವರ್ತಿಸದೇ ಸ್ಥಿತಪ್ರಜ್ಞ ಮಾನವನಾಗಿ ನಡೆದು ದೆವನೊಲುಮೆಗೆ ಪಾತ್ರನಾಗುವುದು ಅಷ್ಟೇ ಅಗತ್ಯವಾಗಿದೆ.
ಹಣೆಯಲ್ಲಿ ಧರಿಸಿದ ವಿಭೂತಿ ಸಜ್ಜನಿಕೆ, ಸೌಜನ್ಯ, ವಿನಯತೆ ಹಾಗೂ ವಿಧೇಯತೆ ತೋರಿಸುತ್ತದೆ. ಲಿಂಗಾರ್ಚನೆಯಿಂದ ವಿಕಾರಗಳು ಮನದಲ್ಲಿ ಸುಳಿಯದಂತಾಗುತ್ತದೆ. ಅನುಭಾವ ನಡೆ ನುಡಿಯನ್ನು ಶುದ್ಧೀಕರಿಸಿ ಏಕೋಮಂತ್ರದ ಭಾವ ಮೂಡಿಸುತ್ತದೆ. ಅರ್ಪಿಸುವ ಬಿಲ್ವಪತ್ರೆಯಿಂದ ಮನಸ್ಸು ಶಾಂತವಾಗುತ್ತದೆ. ಪಂಚಾಕ್ಷರಿ ಮಂತ್ರ ನುಡಿಯಲು ದೇಹ ಮತ್ತು ಮನಸ್ಸು ಒಂದೇ ಆಗಿ ಲಿಂಗವೇ ಎದ್ದು ಅಪ್ಪಿಕೊಳ್ಳುವಂತಾಗುತ್ತದೆ. ಇಂತಹ ಅರ್ಚನ, ಅನುಭಾವ, ಅರ್ಪಣ ನಿಜಕ್ಕೂ ಶಿವನಿಗರ್ಪಿತ ಎಂಬುದು ವೇದ್ಯವಾಗುವುದು. ಭಾವ ಕಲ್ಯಾಣವಾಗಿ, ಅತ್ಮ ಲಿಂಗವಾಗಿ, ದೇಹ ದೇವಾಲಯವಾಗುತ್ತದೆ.
ಆಧುನಿಕತೆಯ ಈ ಕಾಲಘಟ್ಟದಲ್ಲಿ ಉಪವಾಸ, ಭಕ್ತಿ, ಹಬ್ಬ-ವೃತಾಚರಿಸುವವರ ಕೊರತೆಯೇನಿಲ್ಲ. ಆದರೆ, ಇದು ಹಿರಿಯರಿಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಅಷ್ಟೇ ಸತ್ಯವೆನಿಸುತ್ತದೆ. ರಾತ್ರಿಪೂರ್ತಿ ಇಂಗ್ಲೀಷ ಕ್ಯಾಲೆಂಡರ್ ಮೊದಲ ದಿನದಂದು ಹುಚ್ಚೆದ್ದು ಕುಣಿಯುವ ಯುವಕ-ಯುವತಿಯರು ಈ ನಿಜ ರಾತ್ರಿಗೆ ಶಿವನ ಧ್ಯಾನದಲಿ ಕುಣಿಯಬೇಕಾಗಿದೆ. ನಲಿಯಬೇಕಾಗಿದೆ. ಮನವ ಶಿವಸ್ಮರಣೆಯಲಿ ತೊಡಗಿಸಬೇಕಾಗಿದೆ. ಮನೆಯ ಹಿರಿಯರು ಈ ಸನಾತನ ಪ್ರಾಕಲ್ಪನೆಗಳನ್ನು ಕಿರಿಯರಿಗೆ ಬೋಧಿಸಬೇಕಾಗಿದೆ. ಆಚರಣಗೆ ತರಬೇಕಾಗಿದೆ. ಈ ದಿಶೆಯಲ್ಲಿ ಆಚರಣೆ ನಡೆದದ್ದಾದರೆ ನಿಜಕ್ಕೂ ಶಿವರಾತ್ರಿಗೆ ಅರ್ಥ ಬಂದೀತು.
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವುದು, ಮಾಡಿದ ಪೂಜೆಯ
ನೋಡುವುದಯ್ಯ, ಶಿವತತ್ವ ಗೀತವ ಪಾಡುವುದು
ಶಿವನ ಮುಂದೆ ನಲಿದಾಡುವುದಯ್ಯ
ಭಕ್ತಿ ಸಂಭಾಷಣೆ ಮಾಡುವುದು
ನಮ್ಮ ಕೂಡಲಸಂಗನ ಕೂಡುವುದಯ್ಯ.
ನಲಿದಾಡುವುದು ಶಿವನ ಮುಂದಾಗಬೇಕು. ಭಕ್ತಿಯ ಸಂಭಾಷಣೆ ಮಾಡುವುದೆಂದರೆ ಕೂಡಲಸಂಗನನ್ನೇ (ಶಿವನನ್ನೇ) ಕೂಡಿಕೊಂಡಿರಬೇಕೆಂಬ ಭಾವ ಬಸವಣ್ಣನವರದ್ದಾಗಿದೆ.
ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ
ಶಿವನಾಗಿ ಶಿವನ ಪೂಜಿಸು ಮನವೆ
ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ
ಹರನಾಗಿ ಪುರಹರನ ಪೂಜಿಸು ಮನವೆ
ಲಿಂಗವೇ, ಲಿಂಗವೇ ಲಿಂಗವೇ ಎಂದೊಮ್ಮೆ
ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಪೂಜಿಸಿ
ಲಿಂಗವಾಗು ಮನವೆ.
ಶಿವನ ಪೂಜಿಸಿದರೆ ಶಿವನಂತಾಗಬೇಕು. ಹರನ ಪೂಜಿಸಿದರೆ ಹರನಂತಾಗಬೇಕು. ಲಿಂಗವ ಪೂಜಿಸಿದರೆ ಲಿಂಗವೇ ತಾನಾಗಿರಬೇಕು. ಇಂತಹ ದಿವ್ಯ ತನ್ಮಯತೆಯಿಂದ ಶಿವ(ಲಿಂಗ)ನ ಪೂಜಿಸಿದೊಡೆ ಅದೇ ಶಿವಯೋಗ ಎನಿಸುತ್ತದೆ. ಇದೇ ಮಹಾಶಿವರಾತ್ರಿಯೂ ಎನಿಸುತ್ತದೆ. ಪುಣ್ಯದ ಫಲವೂ ಸಿದ್ಧಿಸುತ್ತದೆ.
ಶ್ರೇಷ್ಠ-ಕನಿಷ್ಠ ಬೇಧಗಳಳಿಸಿ, ನಿರ್ಮಲ ಭಾವದಿ ಆತ್ಮ ಲಿಂಗದೊಳಿರುವ ಪರಮಾತ್ಮನ ಚೇತನವನ್ನು ಪೂಜಿಸಿ, ಮಾನವರೆಲ್ಲ ಮಹಾಮಾನವರೆನಿಸಿಕೊಳ್ಳುವ ಪಥವೇ ಮಹಾಶಿವರಾತ್ರಿ ಶಿವಯೋಗವಿದು.

ಡಾ. ಸಂತೋಷ ಬಿ. ನವಲಗುಂದ, ಪತ್ರಕರ್ತರು, ಬರಹಗಾರರು, ಮಳ್ಳಿ

