ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮಾರ್ಚ್ 9 ಶನಿವಾರ ಬಬಲೇಶ್ವರ ಪಟ್ಟಣಕ್ಕೆ ಭೇಟಿ ನೀಡಲಿದ್ದು, ತಾಲೂಕು ಆಡಳಿತ ಸೌಧ(ಮಿನಿ ವಿಧಾನಸೌಧ) ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಅಲ್ಲದೇ, ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 11ಗಂ. ಬಬಲೇಶ್ವರ ಪಟ್ಟಣದ ಅಡವಿಸಂಗಾಪುರ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ರೂ.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಡಳಿತ ಸೌಧ (ಮಿನಿ ವಿಧಾನಸೌಧ) ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಈ ಕಟ್ಟಡದ ನೆಲಮಹಡಿಯಲ್ಲಿ ತಹಸೀಲ್ದಾರ ಕಚೇರಿ, ಕೋರ್ಟ್ ಹಾಲ್, ತಹಸೀಲ್ದಾರ ಗ್ರೇಡ್-1 ಮತ್ತು ಗ್ರೇಡ್-2, ಸಬ್‍ರಜಿಸ್ಟಾರ್ ಕಚೇರಿ, ಸಬ್ ಟ್ರೆಜರಿ ಕಚೇರಿ, ಸ್ಟ್ರಾಂಗ್ ರೂಂ, ರಜಿಸ್ಟಾರ್ ಕಚೇರಿಗಳನ್ನು ಹೊಂದಿವೆ. ಮೊದಲನೇ ಮಹಡಿಯಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕ ಕಚೇರಿ, ಭೂ ದಾಖಲೆ ಕೋಣೆ, ವಿಡಿಯೋ ಸಂವಾದ ಸಭಾಂಗಣ, ಕೆಸ್ವಾನ್, ಚುನಾವಣೆ ಕೊಠಡಿ ಹೊಂದಿದ್ದರೆ, ಎರಡನೇ ಮಹಡಿಯಲ್ಲಿ ಸ್ಟೇರ್‍ಕೇಸ್ ಮುಖ್ಯ ಕೋಣೆ ಮತ್ತು ಲಿಫ್ಟ್ ಕೋಣೆ ಇರಲಿದೆ.
ಇದೇ ವೇಳೆ ತಾಲೂಕು ಮತ್ತು ಪಟ್ಟಣ ಪಂಚಾಯಿತಿಯ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ.
ಇದಾದ ಬಳಿಕ ಮಧ್ಯಾಹ್ನ 12ಗಂ. ಆಯೋಜಿಸಲಾಗಿರುವ ಬಬಲೇಶ್ವರ-ತಿಕೋಟಾ ತಾಲೂಕುಗಳ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.
ಸರಕಾರದ ಪಂಚ ಗ್ಯಾರಂಟಿ ಯೋಜನೆಯಡಿ ಬಬಲೇಶ್ವರ-ತಿಕೋಟಾ ತಾಲೂಕುಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 60 ಸಾವಿರ, ಗೃಹ ಜ್ಯೋತಿ ಯೋಜನೆಯಡಿ 40 ಸಾವಿರ, ಅನ್ನಭಾಗ್ಯ ಯೋಜನೆಯ ಸುಮಾರು 60 ಸಾವಿರ, ಶಕ್ತಿ ಯೋಜನೆಯಡಿ ಸಹಸ್ರಾರು ಮಹಿಳೆಯರು ಮತ್ತು ಯುವನಿಧಿ ಯೋಜನೆಯಡಿ 773 ಫಲಾನುಭವಿಗಳು ಲಾಭ ಪಡೆದಿದ್ದಾರೆ.
ಶನಿವಾರ ನಡೆಯಲಿರುವ ಸಮಾವೇಶದಲ್ಲಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಲಾಭ ಪಡೆದ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
