ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ನಗರದ 770 ಅಮರ ಗಣಾಧೀಶ್ವರರ (ಅಮರಗಣಂಗಳ) ದೇವಾಲಯದ ನವೀಕರಣ ಮತ್ತು ಲಿಂಗಗಳ ಪುನರುಜ್ಜೀವನ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆ ಕಾರ್ಯಕ್ರಮ ಮಾ.8 ರಂದು ಶುಕ್ರವಾರ ಮಹಾಶಿವರಾತ್ರಿ ದಿನ ನಡೆಯಲಿದೆ.
ಅಂದು ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಪಸ್ಥಿತರಿರಲಿದ್ದಾರೆ.
ಬಂಥನಾಳ ಶ್ರೀ ಸಂಗನಬಸವ ಮಹಾಶಿವಯೋಗಿಗಳ ದಿವ್ಯ ಸಂಕಲ್ಪದಂತೆ 1954 ರಲ್ಲಿ ನಗರದ 770 ಅಮರ ಗಣಾಧೀಶ್ವರರ(ಅಮರಗಣಂಗಳ) ಸ್ಮಾರಕ ಲಿಂಗಗಳ ದೇವಾಲಯದ ಪ್ರತಿಷ್ಠಾಪನೆ ನಡೆದಿತ್ತು. ಈ ದೇವಾಲಯ ಪೂರ್ಣಗೊಂಡ ಬಳಿಕ 15.01.1960ರಲ್ಲಿ ವಿಜ್ರಂಬಣೆಯಿಂದ ಲೋಕಾರ್ಪಣೆಯಾಯಿತು. 12 ನೇ ಶತಮಾನದಲ್ಲಿ 770 ಅಮರಗಣಂಗಳ(ಶರಣರ)ರು ಬಸವೇಶ್ವರ ಜೊತೆಗೂಡಿ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಿ, ಸಮಾನತೆಗಾಗಿ ಶ್ರಮಿಸಿದ್ದರು. ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಹೆಸರಿನಲ್ಲಿಯೇ 770 ದಂಪತಿ ತಲಾ ರೂ.151 ಭಕ್ತಿ ಸಮರ್ಪಿಸಿ ಲಿಂಗ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ಶಿವಧ್ಯಾನ, ಶಿವಸ್ತೋತ್ರ, ಮಂತ್ರ ಘೋಷಣೆಗಳ ಮಧ್ಯೆ ಅಂದು ಅದ್ದೂರಿ ಕಾರ್ಯಕ್ರಮ ನಡೆದಿತ್ತು. ಅಂದಿನ ಮೈಸೂರು ಮಹಾರಾಜರು ಬಬಲೇಶ್ವರ ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗ, ಸಿದ್ದಗಂಗಾ ಮತ್ತು ಸುತ್ತೂರು ಸೇರಿದಂತೆ ನಾನಾ ಸುಕ್ಷೇತ್ರಗಳ ಮಠಾಧೀಶರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ಈ ದೇವಸ್ಥಾನ ವಿಜಯಪುರ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿತ್ತು.
ಕಳೆದ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ದರ್ಶನಕ್ಕೆ ಆಗಮಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ದೇವಸ್ಥಾನದ ಗೋಡೆಗಳು, ಮೇಲ್ಛಾವಣಿ ಮತ್ತು ಲಿಂಗಗಳ ನವೀಕರಣ ಮತ್ತು ಪುನರುಜ್ಜೀವನ ಅಗತ್ಯವಿರುವದನ್ನು ಮನಗಂಡು ದುರಸ್ಥಿಗೆ ಕ್ರಮ ಕೈಗೊಂಡಿದ್ದರು. ಅದರಂತೆ ಈಗ ರೂ.1.51 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಮೇಲ್ಛಾವಣಿ ಹಾಗೂ ಗೋಡೆಗಳನ್ನು ನವೀಕರಣ ಮಾಡಲಾಗಿದೆ. ಅಲ್ಲದೇ, ಒಳಾಂಗಣದಲ್ಲಿ ಪೂಜಾ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಎಲ್ಲ 770 ಲಿಂಗಗಳನ್ನು ಬದಲಾವಣೆ ಮಾಡಲಾಗಿದೆ. ಕಾರ್ಕಳದ ಕೃಷ್ಣ ಶಿಲೆಯಲ್ಲಿ ತಯಾರಾದ 770 ಹೊಸ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ, ಒಳಾಂಗಣದ ಗೋಡೆ ಮತ್ತು ನೆಲಹಾಸುಗಳನ್ನು ಗ್ರಾನೈಟ್ ಬಳಸಿ, ನವೀಕರಿಸಲಾಗಿದೆ. ಜೊತೆಗೆ ಈ ಹಿಂದೆ 770 ಲಿಂಗಗಳ ಪ್ರತಿಷ್ಠಾಪನೆ ಮಾಡಿಸಿದ ದಂಪತಿಯ ಹೆಸರುಳ್ಳ ನಾಮಫಲಕಗಳನ್ನೂ ಬದಲಾಯಿಸಲಾಗಿದೆ.
ದೇವಸ್ಥಾನದ ಹೊರ ಆವರಣದಲ್ಲಿ ಖಾಲಿಯಿದ್ದ ಸುಮಾರು 30 ಗುಂಟೆ ಜಮೀನನ್ನು ಅಭಿವೃದ್ಧಿ ಪಡಿಸಲಾಗಿದ್ದು, 30 ನಾನಾ ಬಗೆಯ ಹೂವಿನ ಗಿಡಗಳನ್ನು ನೆಡಲಾಗಿದೆ. ಮಹಾರಾಷ್ಟ್ರದ ಪುಣೆಯಿಂದ ತರಿಸಲಾದ ಮತ್ತು ವರ್ಷವಿಡೀ ದೇವಸ್ಥಾನದ ಪೂಜೆಗೆ ಅಗತ್ಯವಾದ ಮತ್ತು ಸಾಕಾಗುವಷ್ಟು ಪ್ರಮಾಣದ ಹೂವುಗಳನ್ನು ಬೆಳೆಯುವ ವ್ಯವಸ್ಥೆ ಮಾಡಲಾಗಿದೆ. ರುದ್ರಾಕ್ಷಿ, ನಾಗಲಿಂಗ ಪುಷ್ಪ ಸೇರಿದಂತೆ ಅನೇಕ ಅಲಂಕಾರಿಕ ಹೂವಿನ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಅಷ್ಟೇ ಅಲ್ಲ, ಸುಮಾರು 5000 ಚದುರ ಅಡಿ ಪ್ರದೇಶದಲ್ಲಿ ಹುಲ್ಲುಗಾವಲು (ಗಾರ್ಡನ್) ನಿರ್ಮಿಸಲಾಗಿದೆ.
ಮಹಾಶಿವರಾತ್ರಿ ಶುಭ ದಿನದಂದು ನಸುಕಿನ ಜಾವ ನಾನಾ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ಸಚಿವ ಎಂ.ಬಿ.ಪಾಟೀಲ ಅವರು ನವೀಕರಣಗೊಂಡ ಈ ದೇವಸ್ಥಾನವನ್ನು ಲೋಕಾರ್ಪಣೆ ಮಾಡುತ್ತಿರುವುದು ಶಿವಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

