ಯೋಜನೆ ಕೈಬಿಡದಿದ್ದರೆ ತೀವ್ರಗೊಳ್ಳಲಿರುವ ಮೀನುಗಾರರ ಪ್ರತಿಭಟನೆ | ಡಾ.ಡಾ.ಗೌತಮ್ ಚೌಧರಿ ಎಚ್ಚರಿಕೆ
ವಿಜಯಪುರ: ಹೊನ್ನಾವರದ ಬಂದರು ಯೋಜನೆ ಕಡಲಮಕ್ಕಳ ಬದುಕನ್ನೇ ಮುಳುಗಿಸುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಬಡ ಮೀನುಗಾರರ ಕುಟುಂಬಗಳ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವ ಈ ಯೋಜನೆ ಕೈಬಿಡದಿರುವುದು ಖಂಡನೀಯವೆಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹೊನ್ನಾವರ ಬಂದರು ಯೋಜನೆಯಿಂದ ಸುಮಾರು 6,000 ಮೀನುಗಾರರ ಕುಟುಂಬಗಳು ಮತ್ತು ಒಟ್ಟು ಸುಮಾರು 23,500 ಮೀನುಗಾರರ ಬದುಕು ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಬಂದರು ಬೇಡ ಅಂತ ಅದೆಷ್ಟೋ ಪ್ರತಿಭಟನೆಗಳು ನಡೆದರೂ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೀನುಗಾರರಿಗೋಸ್ಕರ ಸಾಕಷ್ಟು ಯೋಜನೆಗಳನ್ನು ಮಾಡಿದ್ದೇವೆ ಅಂದರು. ಅದು ಇದೇನಾ? ಅನ್ನೋ ಪ್ರಶ್ನೆ ಎದ್ದಿದೆ. ಹೊಸ ಬಂದರು ನಿರ್ಮಾಣ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಗಾಗಿ ಸಾವಿರಾರು ಮೀನುಗಾರರ ಬದುಕಿನ ಮೇಲೆಯೇ ಚಪ್ಪಡಿ ಎಳೆಯುವ ಕಾರ್ಯ ಭರದಿಂದ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
2010ರಲ್ಲಿಯೇ ಬಂದರು ನಿರ್ಮಾಣದ ಕುರಿತು ಕರ್ನಾಟಕ ಸರ್ಕಾರ ಮತ್ತು ಖಾಸಗಿ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆಗಿನಿಂದಲೂ ಸ್ಥಳೀಯ ಮೀನುಗಾರರು ಈ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದಾರೆ. 2016ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಯೋಜನೆಗಾಗಿ ಮೀನುಗಾರರ ಎತ್ತಂಗಡಿ ಮಾಡುವಂತೆ ಆದೇಶಿಸಿದ ಬಳಿಕ ಹೋರಾಟ ತೀವ್ರಗೊಂಡಿದೆ. 8 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಪ್ರತಿಭಟನೆ ಮಾಡ್ತಿರೋ ಮೀನುಗಾರರ ಮೇಲೆ ಸುಳ್ಳು ಆರೋಪ ಮಾಡಿ ಕೇಸ್ ದಾಖಲಿಸಲಾಗ್ತಿದೆ. ಸರ್ಕಾರ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲು ನಡೆಸುವ ಪ್ರಯತ್ನಗಳು ನಮ್ಮನ್ನು ಹಿಮ್ಮೆಟ್ಟಿಸಲಾರವು. ಈ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ರೆ ಮೀನುಗಾರರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಈ ಬಂದರು ಯೋಜನೆಯಿಂದ ಕೇವಲ ಮೀನುಗಾರರಿಗಷ್ಟೇ ಅಲ್ಲ, ಆಲಿವ್ ರಿಡ್ಲೆ ಆಮೆಗಳು ಸೇರಿದಂತೆ ಅಪರೂಪದ ಪ್ರಭೇದಗಳ ವಿನಾಶಕ್ಕೆ ಕಾರಣವಾಗಲಿದೆ ಎಂದು ಡಾ.ಗೌತಮ್ ಆರ್ ಚೌಧರಿ ಎಚ್ಚರಿಸಿದ್ದಾರೆ.
ಬೆಂಗಳೂರಿನ ಹೊಟೇಲ ಉದ್ಯಮಿ ಮಂಜುನಾಥ, ಸೋಮು ಚವಡೀಕರ ಸೇರಿದಂತೆ ಹಲವರಿದ್ದರು.

