ಬೊಮ್ಮನಜೋಗಿ ಗ್ರಾಮದ ಸಾಮಾಜಿಕ ಕಳಕಳಿಯ ರಾಮನಗೌಡ ಕನ್ನೊಳ್ಳಿ ಯ ಗ್ರಾಮ ಸೇವೆ

-ಸಾಯಬಣ್ಣ ಮಾದರ (ಸಲಾದಹಳ್ಳಿ)
ವಿಜಯಪುರ: ಅದೊಂದು ಕುಗ್ರಾಮ. ಆ ಊರಿಗೆ ಬಸ್ಸಿನ ಸೌಕರ್ಯ ಇರುವುದಿಲ್ಲ. ರಸ್ತೆಯಂತೂ ನೋಡುತೀರದು, ಅಕ್ಷರಸ್ಥರು ಅಲ್ಲಿ ಕಂಡರೂ ಮೂಢನಂಬಿಕೆಯೆಂಬ ಅಂಧಕಾರವನ್ನು ಹೊದ್ದು ಮಲಗಿದ ಊರದು.
ಆ ಗ್ರಾಮದಲ್ಲಿ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗುವುದು ಒಂದು ಸಾಹಸದ ಕೆಲಸ. ಅವರು ಬಹಿರ್ದೇಸೆಗೆ ಕುಳಿತುಕೊಳ್ಳುವುದು ರೋಡಿನ ಪಕ್ಕದಲ್ಲಿಯೋ, ಕಾಲುದಾರಿಗಳ ಪಕ್ಕದಲ್ಲಿಯೋ ಕುಳಿತುಕೊಳ್ಳಬೇಕಾಗಿತ್ತು. ದಾರಿ ಹೋಕರು ಬರುವುದು ಕಂಡರೆ ಅವರು ಎದ್ದು ನಿಲ್ಲುವುದು ಸಾಮಾನ್ಯವಾಗಿತ್ತು. ಅವರು ಬಹಿರ್ದೇಸೆ ಮುಗಿಸುವಷ್ಟರಲ್ಲಿ ಹಲವು ಬಾರಿ ಎದ್ದು ಕುಳಿತುಕೊಳ್ಳಬೇಕಾಗಿತ್ತು. ಮಳೆಗಾಲದಲ್ಲಿ ಅಂತೂ ಹೇಳತೀರದ ಕಷ್ಟ. ರಾಡಿ ಗಲೀಜು ತುಂಬಿದ ರಸ್ತೆಗಳು, ಒಂದು ಕಾಲು ಎತ್ತಿ ಇಡಬೇಕೆಂದರೂ ಅಲ್ಲಿ ಬೆಂಕಿ ಕೆಂಡದಂತ ಹೊಲಸು. ಬಾಣಂತಿಯರು, ವೃದ್ಧರು ಅಂಗವಿಕಲರಿಗೆ ದೊಡ್ಡದೊಂದು ವ್ಯಥೆ. ಇಂತಹ ರಾಜ್ಯದ ಹಲವು ಹಳ್ಳಿಗಳಲ್ಲಿ ಇದು ಒಂದು ದೇವರ ಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ.
ಇದನ್ನೆಲ್ಲಾ ಕಣ್ಣಾರೆ ನೋಡಿದ ಅದೇ ಗ್ರಾಮದ ರಾಮನಗೌಡ ಕನ್ನೊಳ್ಳಿ ಎಂಬ ಅಧಿಕಾರಿಯು ತಾನು ಹುಟ್ಟಿ ಬೆಳೆದ ಆ ಊರಿನಲ್ಲಿ ತನ್ನ ತಾಯಿ ತಂಗಿಯಂತಹ ಹಲವಾರು ಮಹಿಳೆಯರ ಕಷ್ಟ ನೋಡಿ ಮರುಗಿದರು. ಇದಕ್ಕೆ ಒಂದು ಪರಿಹಾರ ಮಾಡಬೇಕೆಂದು ನಿರ್ಧರಿಸಿದರು. ಇವರು ಇರುವುದು ಕೆಲಸ ಮಾಡುವುದು ಬೆಂಗಳೂರಿನಲ್ಲಿ. ತಾನು ಇಲ್ಲಿಯ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ವಿಚಾರ ಮಾಡಿ, ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕಿಸಿದರು. ಅಲ್ಲಿ ಹಾರಿಕೆಯ ಉತ್ತರ ಬಂತು. ಜನಪ್ರತಿನಿಧಿಗಳನ್ನು ಕೇಳಿ ನೋಡಿದರೆ ಈ ಊರು ಉಸಾ ಬರಿ ನಿಮಗೇಕೆ ಎಂಬುವಂತೆ ಇವರನ್ನು ನೋಡಿದರು.
ನಂತರ ಊರಿನ ಕೆಲವು ಗಣ್ಯರನ್ನು ವಿಚಾರಿಸಿದಾಗ ಮಂದಿರ ಮಸೀದಿಯಾದರೂ ಕಟ್ಟಬಹುದು, ಇದು ಎಂತದು ಶೌಚಾಲಯ ಕಟ್ಟಿಸುವುದು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇದು ಹೀಗೆ ಆದರೆ ಆಗದ ಕೆಲಸವಲ್ಲ ಎಂದು ತಾವೇ ಸ್ವತಃ ಮಹಿಳಾ ಶೌಚಾಲಯವನ್ನು ಕಟ್ಟಿಸಲು ರಾಮನಗೌಡ ಸಿದ್ಧರಾದರು.
ಹಲವರು ನಮ್ಮ ಊರಿನಲ್ಲಿ ನೌಕರಸ್ಥರು, ರಾಜಕಾರಣಿಗಳಿದ್ದಾರೆ, ಶ್ರೀಮಂತರು ಇದ್ದಾರೆ. ಆದರೆ ಇಂತಹ ಶೌಚಾಲಯದ ಕೆಲಸ ಈ ಅಧಿಕಾರಿಗೆ ಏತಕ್ಕೆ ಬೇಕು ಎಂದು ಕೆಲ ಗ್ರಾಮಸ್ಥರು ಮೂಗು ಮುರಿದರು. ಆದರೆ ರಾಮನಗೌಡ ಕನ್ನೊಳ್ಳಿಯವರು ತಾವು ನಿರ್ಧರಿಸಿದಂತೆ ಊರಿಗೆ ಇಂಜಿನಿಯರಿಯನ್ನು ಕರೆದುಕೊಂಡು ಬಂದು ಯೋಜನೆ ಸಿದ್ಧಪಡಿಸಿದರು. ಆ ಯೋಜನೆಯ ವೆಚ್ಚ 27 ಲಕ್ಷ ರೂಪಾಯಿಗಳು. ಅದರಲ್ಲಿ ಹದಿನೈದು ಶೌಚಗೃಹಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು.
ಕಾಮಗಾರಿ ಪ್ರಾರಂಭವಾದಾಗ ಕಟ್ಟಡಕ್ಕಾಗಿ ತರಿಸಿದ ಇಟ್ಟಂಗಿಯ ಮೇಲೆ ಶೌಚ ಮಾಡಿ ಹೋಗುತ್ತಿದ್ದರು. ಹಲವಾರು ಕಷ್ಟಕಾರ್ಪಣ್ಯಗಳು ಅಲ್ಲಿದ್ದ ಜನರಿಂದಲೇ ಆಯಿತು. ಇದರಿಂದಾಗಿ ಕೆಲಸಕ್ಕೆ ಬರುವ ಕಾರ್ಮಿಕರು ಬರುವುದಿಲ್ಲ ಎಂದು ಹೇಳಿದಾಗ ಇವರೇ ರಜೆಯನ್ನು ಹಾಕಿ ಮುಂದೆ ನಿಂತು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದರು.
ಆ ಶೌಚಾಲಯಗಳು ಹೈಟೆಕ್ಕಾಗಿ ಕಟ್ಟಲ್ಪಟ್ಟದೆ ಶೌಚಾಲಯದಲ್ಲಿ ಕೈ ತೊಳೆಯಲು ಮಾರ್ಜಕಗಳು, ಹೆಚ್ಚು ಹೆಣ್ಣು ಮಕ್ಕಳು ಬಂದರೆ ಅವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಅಂಗವಿಕಲ ಮತ್ತು ವೃದ್ಧರಿಗೆ ಎರಡು ಪ್ರತ್ಯೇಕ ಕಮೋಡಗಳು ಶೌಚಾಲಯಕ್ಕೆ ನೀರು ಪೂರೈಸಲು ಎರಡು ಸಿಂಟೆಕ್ಸ್ ಗಳು ಮತ್ತು ಬೆಳಕಿಗಾಗಿ ಸೌರ ವಿದ್ಯುತ್ ವ್ಯವಸ್ಥೆ ಮಾಡಲಾಯಿತು.
ಇದರ ಮತ್ತೊಂದು ವಿಶೇಷತೆ ಎಂದರೆ ಶೌಚಾಲಯಗಳನ್ನು ಊರಿನ ಮಹಿಳೆಯರಿಂದಲೇ ಉದ್ಘಾಟಿಸಿದರು.
ಈ ಶೌಚಾಲಯಗಳನ್ನು ಯಾವ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಬಳಸುವುದಕ್ಕೆ ಇಲ್ಲಿ ಎಲ್ಲರಿಗೂ ಅವಕಾಶ ಇರುವುದು ವಿಶೇಷತೆ.
ಈಗಿನ ವರ್ತಮಾನ ಕಾಲದಲ್ಲಿ ಪ್ರಚಾರದ ಭರಾಟೆ ಜೋರು. ಒಂದು ಲೋಟ ಕೊಟ್ಟರೂ ತಮ್ಮ ಹೆಸರು ಹಾಕಿಸಿಕೊಳ್ಳುವರ ಮಧ್ಯದಲ್ಲಿ ಇವರು ಶೌಚಾಲಯಗಳ ಮೇಲೆ ನಮ್ಮೂರು ಯುವ ಸೇವಾ ಸಮಿತಿಯೆಂದು ಹೆಸರು ಬರಿಸಿದರು. ಆ ಶೌಚಾಲಯಗಳಿಗೆ ಸುಂದರವಾದಂತ ಸುಣ್ಣ ಬಣ್ಣ ಬಳಿಸಿ ಅಮೂಲ್ಯವಾದ ವಾಕ್ಯಗಳನ್ನು ಬರೆಸಿದ್ದಾರೆ.
ಈಗಿನ ಕಾಲಮಾನದಲ್ಲಿ ಮಂದಿರ ಮಸೂದಿ ಕಟ್ಟಿ ಜನಪ್ರಿಯತೆಗಾಗಿ ಹಂಬಲಿಸುವವರ ಮಧ್ಯೆ ಬೆಂಗಳೂರಿನ ಆದಿ ಜಾಂಬವ ನಿಗಮದ ಪ್ರಧಾನ ವ್ಯವಸ್ಥಾಪಕ ರಾಮನಗೌಡ ಕನ್ನೊಳ್ಳಿ ಅಂಥವರು ಬೆರಳಣಿಕೆಯಷ್ಟು. ಇಂತಹ ಕಾರ್ಯಗಳು ಇತರರಿಗೂ ಮಾದರಿಯಾದರೆ ಪ್ರತಿ ಹಳ್ಳಿಗಳು ಮಹಾತ್ಮ ಗಾಂಧಿ ಕಂಡ ಕನಸಿನ ಗ್ರಾಮಗಳಾಗುವುದರಲ್ಲಿ ಸಂಶವೇ ಇಲ್ಲ ಎಂದು ಹೇಳಬಹುದು.


