ಫಲಾನುಭವಿಗಳ ಪಟ್ಟಿ ರದ್ದು ಪಡಿಸಿದ್ದಕ್ಕೆ ಶಾಸಕ ಮನಗೂಳಿ ವಿರುದ್ದ ಬಿಜೆಪಿ ಬೃಹತ್ ಪ್ರತಿಭಟನೆ
ಸಿಂದಗಿ: ಎಸ್.ಸಿ.ಪಿ.ಟಿ ಮತ್ತು ಟಿ.ಎಸ್.ಪಿ ಅನುದಾನದ ಕ್ರಿಯಾಯೋಜನೆಯಲ್ಲಿ ರೂ.೫ಕೋಟಿ ಅನುದಾನ ಬಿಡುಗಡೆಗೊಳಿಸಿ ೬೯ ಪಲಾನುಭವಿಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ನನ್ನ ಅವಧಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರನ್ನು ಬದಲಾಯಿಸಿ ಬೇರೆ ಹೆಸರುಗಳನ್ನು ಸೇರಿಸುವಂತೆ ಈಗಿನ ಶಾಸಕರು ಸಚಿವರಿಗೆ ಪತ್ರ ಬರೆದಿರುವುದು ಖಂಡಿಸುತ್ತೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ರಾಂಪೂರ ಪಿಎ ಗ್ರಾಮದ ಅಂಬೇಡ್ಕರ್ ವೃತ್ತದಿಂದ ಕೆಬಿಜೆಎನ್‌ಎಲ್ ಕಾರ್ಯಾಲಯದವರೆಗೆ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ೨೦೨೨-೨೩ನೆಯ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಅನುದಾನದಡಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಅರ್ಹ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಪಟ್ಟಿ ರದ್ದು ಪಡಿಸಿರುವ ಸ್ಥಳೀಯ ಶಾಸಕರ ವಿರುದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿನ ಫಲಾನುಭವಿಗಳ ಪಟ್ಟಿಯನ್ನು ರದ್ದು ಪಡಿಸುವಂತೆ ಪತ್ರ ಬರೆದು ದೀನ ದಲಿತರಿಗೆ ಸ್ಥಳೀಯ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ, ಇದನ್ನು ನಾವು ಖಂಡಿಸುತ್ತೇವೆ. ಈಗಿನ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಿಂದಗಿ ಮತ್ತು ಆಲಮೇಲ ಪಟ್ಟಣಕ್ಕೆ ನನ್ನ ಅಧಿಕಾರದ ಅವಧಿಯಲ್ಲಿ ತಂದಿರುವ ೭೦೦೦ ಮನೆಗಳ ದಾಖಲೆ ನನ್ನ ಬಳಿಯಿದೆ. ದಾಖಲೆ ಇಲ್ಲದೇ ನಾನು ಯಾವತ್ತೂ ಮಾತನಾಡುವುದಿಲ್ಲ. ದ್ವೇಷ ರಾಜಕಾರಣ ಹೀಗೆ ಮುಂದುವರೆದರೆ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿದರು.
ರಾಂಪೂರ ಪಿಎ ಗ್ರಾಮದ ಆರೂಢ ಮಠದಿಂದ ಪ್ರಾರಂಭವಾದ ಪ್ರತಿಭಟನೆ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಾಲಯದವರೆಗೆ ಜರುಗಿತು.
ಇದೇ ಸಂದರ್ಭದಲ್ಲಿ ಸಿದ್ದು ಬುಳ್ಳಾ, ಗುರು ತಳವಾರ, ಶ್ರೀಕಾಂತ ಬಿಜಾಪುರ, ಶಂಕರ ಬಗಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ರವಿ ನಾಯ್ಕೋಡಿ, ಶಿವನಗೌಡ ಬಿರಾದಾರ, ಪ್ರಶಾಂತ ಕದ್ದರಕಿ, ಸಂತೋಷ ಮಣಗೀರಿ, ಪೀರೂ ಕೆರೂರ, ನಾಗಪ್ಪ ಶಿವೂರ, ಸಿದ್ರಾಮ ಆನಗೊಂಡ, ಮಡಿವಾಳಪ್ಪಗೌಡ ಬಿರಾದಾರ, ಶ್ರೀಶೈಲ ಚಳ್ಳಗಿ, ಮಲ್ಲನಗೌಡ ಬಿರಾದಾರ, ಯಲ್ಲು ಇಂಗಳಗಿ, ಪ್ರಧಾನಿ ಮೂಲಿಮನಿ, ಶಮೀ ಬಿಜಾಪುರ, ವಿಠಲ ಪೂಜಾರಿ, ರಜಾಕ ಮುಜಾವರ, ಖಾಜು ಬಂಕಲಗಿ ಸೇರಿದಂತೆ ರೈತರು, ಬಿಜೆಪಿ ಕಾರ್ಯಕರ್ತರು ಇದ್ದರು.

