ಆಲಮಟ್ಟಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮೂರು ಬಾರಿ ನಡೆಸುವುದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದಕ್ಕೆ ಪ್ರೌಡಶಾಲಾ ಶಿಕ್ಷಕರ ಯಾವೊಂದು ಸಂಘಟನೆಗಳು ಸ್ವಲ್ಪವೂ ವಿರೋಧ ವ್ಯಕ್ತವಾಗದಿರುವುದು ವಿಷಾದನೀಯ ಎಂದು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅಭಿಪ್ರಾಯಪಟ್ಟರು.
ಬುಧವಾರ, ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಏಕಾಏಕಿ ಮೂರು ಬಾರಿ ಪರೀಕ್ಷೆ ಎಂದು ನಿರ್ಧರಿಸಬಾರದಿತ್ತು. ಅದನ್ನು ವಿವಿಧ ಶಿಕ್ಷಣ ತಜ್ಞರು, ಶಿಕ್ಷಕರು, ಸಂಘ, ಸಂಸ್ಥೆಗಳ, ಪೋಷಕರ ಹಂತದಲ್ಲಿ ಚರ್ಚೆಯಾಗಬೇಕಿತ್ತು. ನಂತರವಷ್ಟೇ ಈ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಬೇಕಿತ್ತು ಎಂದರು.
ಪರೀಕ್ಷೆ ನಡೆಸುವುದು ಅಷ್ಟು ಸುಲಭವಲ್ಲ. ಪ್ರತಿ ಬಾರಿಯೂ 144 ಕಲಂ ಜಾರಿಗೆ ಮಾಡಿ, ಇಡೀ ಜಿಲ್ಲಾಡಳಿತವೇ ಉಸ್ತುವಾರಿ ನಿರ್ವಹಿಸಿ ಪರೀಕ್ಷೆ ನಡೆಸುತ್ತದೆ. ನಂತರ ಮೌಲ್ಯಮಾಪನ, ಮರು ಮೌಲ್ಯಮಾಪನ ಹೀಗೆ ಸಾಕಷ್ಟು ಹಂತಗಳು ಇರುತ್ತವೆ. ಅದಕ್ಕಾಗಿ ಕೋಟ್ಯಂತರ ಹಣ ಖರ್ಚಾಗುತ್ತದೆ, ಜತೆಗೆ ಸಮಯವೂ ಸಾಲುವುದಿಲ್ಲ ಎಂದರು. ಪ್ರೌಡಶಾಲಾ ಶಿಕ್ಷಕರ ಮೇಲೆ ಅನಗತ್ಯ ಹೊರೆ ಬೀಳುತ್ತವೆ. ಇದನ್ನು ಪ್ರತಿರೋಧಿಸಬೇಕಿದ್ದ ಪ್ರೌಡಶಾಲಾ ಶಿಕ್ಷಕರ ಸಂಘಟನೆಗಳು ಮೌನವಾಗಿರುವುದು ವಿಷಾದ ಎಂದರು.
144 ಕಲಂ ಜಾರಿಯಿದ್ದರೂ ಸಾಕಷ್ಟು ಅವಘಡಗಳು ಸಂಭವಿಸುತ್ತವೆ ಎಂದರು.
ಮಕ್ಕಳ ಮೇಲೆಯೂ ಈ ಪರೀಕ್ಷೆಯ ಹೊರೆ, ಒತ್ತಡ ಬೀಳುತ್ತವೆ. ಮೊದಲ ಬಾರಿ ಕಡಿಮೆ ಅಂಕ ಪಡೆದ ಮಗು, ಇನ್ನಷ್ಟು ಹೆಚ್ಚು ಅಂಕ ಪಡೆ ಎಂದು ಪಾಲಕರು ಒತ್ತಾಯಿಸಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಒತ್ತಡ ಹೇರುತ್ತಾರೆ, ಇದರಿಂದ ಮಗುವಿನ ಮೇಲೆ ಮಾನಸಿಕ ಪರಿಣಾಮ ಉಂಟಾಗುತ್ತವೆ. ಮೂರು ಬಾರಿ ಪರೀಕ್ಷೆ ನಡೆಸುವುದು ಹುಡುಗಾಟವಲ್ಲ ಎಂದರು.
ಈಗಲೇ, ಪ್ರೌಡಶಾಲಾ ಶಿಕ್ಷಕರಿಗಂತೂ ಏಪ್ರಿಲ್ ತಿಂಗಳಲ್ಲಿ ರಜೆ ಇದ್ದರೂ ಪರೀಕ್ಷಾ ಕಾರ್ಯ, ಮೌಲ್ಯಮಾಪನ ಕಾರ್ಯಕ್ಕಾಗಿ ರಜೆಯಿದ್ದರೂ ಇಡೀ ತಿಂಗಳು ಕಾರ್ಯನಿರ್ವಹಿಸಬೇಕಾಗಿದೆ, ಈಗ ಮೂರು ಪರೀಕ್ಷೆಯಾದರೆ ಅವರಿಗೆ ರಜೆಯೆ ದೊರೆಯದ ಪರಿಸ್ಥಿತಿ ಉಂಟಾಗಲಿದೆ. ಶಿಕ್ಷಕರ ಮೇಲೆಯೂ ಸಾಕಷ್ಟು ಒತ್ತಡ ಬೀಳಲಿದೆ ಎಂದರು.
ಶಿವಾನಂದ ಅವಟಿ, ಶಿವಾನಂದ ಮುಚ್ಚಂಡಿ, ಡಾ ಸಂಗಮೇಶ ಗೂಗಿಹಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

