ಎಕ್ಸಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅಭಿಮತ
ಆಲಮಟ್ಟಿ: ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿತ್ವ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ಆಲಮಟ್ಟಿ ರೈಲು ನಿಲ್ದಾಣದಲ್ಲಿ ಬುಧವಾರ, ಶಿರಡಿ-ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಆಲಮಟ್ಟಿಯಲ್ಲಿ ನಿಲುಗಡೆಗೆ ಅವಕಾಶ ದೊರೆತಿದ್ದು, ಅದರ ಪ್ರಯುಕ್ತ ರೈಲ್ವೆ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ರೈಲ್ವೆ ಬೋಗಿಯ ವಿನ್ಯಾಸಗಳು ಬದಲಾವಣೆಯಾಗಿವೆ, ರೈಲ್ವೆಯ ವೇಗ ಹೆಚ್ಚಾಗಿದೆ, ನಿಗದಿತ ಸಮಯಕ್ಕೆ ನಿಗದಿತ ಸ್ಥಳ ತಲುಪುವ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ರೈಲುಗಳ ಸಂಖ್ಯೆಗಳು ಹೆಚ್ಚಿವೆ. ಈಗ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ನಿರ್ಮಾಣಗೊಳ್ಳುತ್ತಿವೆ ಇದಕ್ಕೆ ಕಾರಣ ಪ್ರಧಾನಿ ಮೋದಿ ಎಂದರು.
ಆಲಮಟ್ಟಿ ಮೂಲಕ ಹಾದು ಹೋಗುವ ಗದಗ-ಹೊಟಗಿ ರೈಲು ಮಾರ್ಗ ದ್ವಿಪಥಗೊಳ್ಳುವುದರ ಜತೆಗೆ ಎಲೆಕ್ಟ್ರಿಫಿಕೇಶನ್ ಕಾಮಗಾರಿಯೂ ಅಂತಿಮ ಹಂತದಲ್ಲಿದೆ, ಈ ಭಾಗದ ಅಭಿವೃದ್ಧಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಕಾರ್ಯ ಸಾಕಷ್ಟಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ನನ್ನ ವಿಶೇಷ ಪ್ರಯತ್ನದ ಫಲವಾಗಿ ನಿಡಗುಂದಿ-ಕೊಲ್ಹಾರ ಸೇರಿದಂತೆ ಜಿಲ್ಲೆಯಲ್ಲಿ 8 ಹೊಸ ತಾಲ್ಲೂಕುಗಳು ರಚನೆಯಾಗಿವೆ. ಆದರೆ ಅದರಲ್ಲಿ ಇನ್ನೂವರೆಗೂ ಹೊಸ ಹೊಸ ಕಚೇರಿಗಳು ಆರಂಭಗೊಂಡಿಲ್ಲ ಎಂದು ವಿಷಾದಿಸಿದರು. ಆಲಮಟ್ಟಿ ಜಲಾಶಯ ಜಿಲ್ಲೆಯ ರೈತರ ಪಾಲಿಗೆ ಶಾಪ ಎಂದರು. ಇದರ ನಿರ್ಮಾಣದಿಂದ ಲಕ್ಷಾಂತರ ಎಕರೆ ಭೂಮಿ ಕಳೆದುಕೊಂಡಿದ್ದೇವೆ. ಆದರೆ ಇದರಿಂದ ಕಲಬುರ್ಗಿ ಭಾಗದ ರೈತರು ಉದ್ದಾರವಾದರು. ಜಿಲ್ಲೆಯ ಅಳಿದುಳಿದ ಜಮೀನಿಗೆ ಸಮರ್ಪಕವಾಗಿ ನೀರು ಕೊಡಲು ಆಗುತ್ತಿಲ್ಲ ಎಂದರು. ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ರಸ್ತೆ, ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ದಾಮೋದರ ರಾಠಿ, ಎನ್.ಎ. ಪಾಟೀಲ, ಬಸವರಾಜ ಬಾಗೇವಾಡಿ, ರಮೇಶ ಆಲಮಟ್ಟಿ, ಡಾ ಸಂಗಮೇಶ ಗೂಗಿಹಾಳ, ಶಿವಾನಂದ ಮುಚ್ಚಂಡಿ, ಮಲ್ಲು ರಾಠೋಡ, ರೈಲ್ವೆ ಅಧಿಕಾರಿಗಳಾದ ಪ್ರಾಣೇಶ ಕವಲಗಿ,ಚಂದನಕುಮಾರ ಝಾ ಇತರರು ಇದ್ದರು.

