ತಾಳಿಕೋಟಿಯಲ್ಲಿ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ 8ನೇ ಶಾಖೆ ಉದ್ಘಾಟನೆ
ತಾಳಿಕೋಟಿ: ಪಟ್ಟಣದಲ್ಲಿ ಸಹಕಾರಿ ಸಂಘಗಳು ಜನರ ವಿಶ್ವಾಸದ ಮೇಲೆ ಅವಲಂಬಿತವಾಗಿ ನಡೆಯುತ್ತವೆ. ಇಲ್ಲಿ ಠೇವಣಿಗಳ ಮೇಲೆ ಆಕರ್ಷಿತ ಬಡ್ಡಿಯನ್ನು ನೀಡಲಾಗುತ್ತದೆ. ಸಣ್ಣ ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲ ಸಿಗುತ್ತದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಸೋಪು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಇರುವ ದೊಡಮನಿ ಕಾಂಪ್ಲೆಕ್ಸ್ ನಲ್ಲಿ ಬಿಎಲ್ ಡಿ ಸೌಹಾರ್ದ ಸಹಕಾರಿ ಸಂಘ ಇದರ ಎಂಟನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಎಲ್ಡಿ ಸಂಸ್ಥೆ ಈಗಾಗಲೇ ಶಿಕ್ಷಣ ರಂಗದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದೆ. ಅದಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಈ ಕಾರಣಕ್ಕಾಗಿಯೇ ಕೇವಲ ನೂರು ದಿನಗಳಲ್ಲಿ ಈ ಬ್ಯಾಂಕು ಎರಡು ನೂರು ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿದೆ. ಸಚಿವ ಎಂ. ಬಿ. ಪಾಟೀಲರ ಸಹೋದರ ಸುನೀಲ ಗೌಡರು ಸಾಕಷ್ಟು ಕ್ರಿಯಾಶೀಲತೆಯೊಂದಿಗೆ ಈ ಕೆಲಸವನ್ನು ಮಾಡುತ್ತಿದ್ದಾರೆ. ಈ ಬ್ಯಾಂಕ್ ನ ಸೇವೆ ರಾಜ್ಯಾದ್ಯಂತ ಹರಡಲಿ, ಇದು ಹೆಮ್ಮರವಾಗಿ ಬೆಳೆದು ಇದರಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಬ್ಯಾಂಕನ ಅಧ್ಯಕ್ಷ ಸುನೀಲ ಗೌಡ ಪಾಟೀಲ ಮಾತನಾಡಿ, ಅತ್ಯಂತ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ಲಿಂ.ಬಂಥನಾಳ ಶ್ರೀಗಳು, ಡಾ.ಫ.ಗು. ಹಳಕಟ್ಟಿ ಹಾಗೂ ದಿ. ಡಾ. ಬಿ.ಎಂ.ಪಾಟೀಲರು ಬಿಎಲ್ ಡಿ ಇ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ದೇಶ ಮತ್ತು ರಾಜ್ಯದಲ್ಲೇ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಹೋದರ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಈ ಭಾಗಕ್ಕೆ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಇದೆಲ್ಲವನ್ನು ಮಾರ್ಗದರ್ಶನವಾಗಿಟ್ಟುಕೊಂಡು ನಾವು ಈ ಸಹಕಾರಿ ಸಂಘವನ್ನು ಆರಂಭಿಸಿದ್ದೇವೆ. ಒಂದು ವರ್ಷದ ಹಿಂದೆ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಆರಂಭವಾದ ಈ ಸೌಹಾರ್ದ ಸಹಕಾರಿ ಸಂಘವು ಇಂದು ಎರಡು ನೂರು ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವ ಮೂಲಕ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್. ಪಾಟೀಲ ಯಾಳಗಿ. ಮಹಾಂತೇಶ ಬಿರಾದಾರ ಹಾಗೂ ವಿಜಯಕುಮಾರ ಕನಮಡಿ ಮಾತನಾಡಿದರು.
ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ, ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಶಿವನಗೌಡ ದೇಸಾಯಿ, ರಾಯನಗೌಡ ತಾತರೆಡ್ಡಿ, ಸಂತೋಷ ದೊಡ್ಡಮನಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಮಹಿಬೂಬ ಚೋರಗಸ್ತಿ, ಬಾಬುರಾವ್ ಸಿಂಧೆ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬಿ. ಕಟ್ಟಿಮನಿ, ಬಿ.ಎನ್. ಹಿಪ್ಪರಗಿ, ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಸಂಗನಗೌಡ ಅಸ್ಕಿ, ಜಗದಿಶ ಬಿಳೇಭಾವಿ, ಬಸನಗೌಡ.ಎಸ್.ಇಸಾಂಪೂರ,(ಎಲ್ ಆಯ್ ಸಿ ) ಬ್ಯಾಂಕ್ ವ್ಯವಸ್ಥಾಪಕ ಶಶಿಧರ ದೇಸಾಯಿ, ಶರಣಗೌಡ ಪತ್ತೆಪೂರ, ಮಹಾಂತೇಶ ಮುರಾಳ, ಬಸವರಾಜ ಗೊರಜಿ ಮತ್ತೀತರರು ಇದ್ದರು.

