’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ

ಮೊನ್ನೆ ಮೊನ್ನೆ ಈ ತರಗತಿಗೆ ಪ್ರವೇಶ ಪಡೆದ ಹಾಗಾಗಿತ್ತು ಆಗಲೇ ವಾರ್ಷಿಕ ಪರೀಕ್ಷೆ ಬಂದೇ ಬಿಟ್ಟಿತು ಈಗೇನು ಮಾಡುವದು ?ಎನ್ನುವುದು ಕೇವಲ ಓದುವ ವಿದ್ಯಾರ್ಥಿಗಳ ಭಯದ ಪ್ರಶ್ನೆಯಲ್ಲ. ಇದು ಪಾಲಕರ ಆತಂಕವೂ ಕೂಡ. ಟಿವಿ ಕೇಬಲ್ ಕನೆಕ್ಷನ್ ತೆಗೆಸಿ ಸಿರಿಯಲ್ಸ್ ಬಿಟ್ಟು ನಾನೂ ನಿನ್ನ ಜೊತೆ ಕುಳಿತುಕೊಂಡಿದಿನಿ ಎಂದು ಬಿಟ್ಟು ಬಿಡದೇ ಬೆನ್ನು ಹತ್ತಿಸಿ ಓದಿಸುವ ತಾಯಂದಿರು ಒಂದೆಡೆಯಾದರೆ ಇಷ್ಟು ಓದಿದರೂ ಯಾವುದೂ ನೆನಪು ಉಳಿತಿಲ್ಲ. ಏನು ಮಾಡೋದು ತಿಳಿತಿಲ್ಲ ಎನ್ನುವದು ಕೆಲ ವಿದ್ಯಾರ್ಥಿಗಳ ಅಳಲು. ಇನ್ನೂ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಭರ್ಜರಿಯಾಗಿ ಮಾಡಿದ್ದರೂ ಮನಸ್ಸಿನಲ್ಲಿ ಪರೀಕ್ಷೆಯ ಬಗ್ಗೆ ಭಯ ಕಾಡುತ್ತಿದೆ. ಪರೀಕ್ಷೆಯ ಕೊಠಡಿಯಲ್ಲಿ ಹೆದುರುತ್ತಲೇ ಕಾಲಿಡುತ್ತಾರೆ. ಎಲ್ಲರಿಗೂ ತಿಳಿದಂತೆ ಒಬ್ಬೊಬ್ಬರಿಗೆ ಒಂದು ತೆರನಾದ ಭಯವಿರುತ್ತೆ. ಕೆಲವರಿಗೆ ಎತ್ತರದ ಭಯ ಕೆಲವರಿಗೆ ನೀರಿನ ಭಯ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಾಮಾನ್ಯ ಭಯವೇ ಪರೀಕ್ಷೆ ಭಯ. ಇದನ್ನೇ ಎಕ್ಷಾಮ್ ಫೋಬಿಯಾ ಅಂತಾರೆ ಮನಶಾಸ್ತçಜ್ಞರು. ಭಯ ಅನ್ನುವದು ಮಾನಸಿಕ ಕಾಯಿಲೆ. ಅದು ನಮ್ಮ ಭ್ರಮೆ ವಾಸ್ತವ ಅಲ್ಲ. ಮನಸ್ಸು ಏನು ದೃಢವಾಗಿ ನಂಬುತ್ತೋ ಅದೇ ನಡೆಯುತ್ತೆ ಎನ್ನುವದು ಈಗಾಗಲೇ ಸಾಬೀತಾಗಿದೆ. ಅದಕ್ಕೆ ನೀವು ಪರೀಕ್ಷೆಯ ಬಗ್ಗೆ ಭಯ ಬಿಟ್ಟು ಉತ್ತಮ ಭಾವ ಹೊಂದಿ ನಾನು ಪರೀಕ್ಷೆಯನ್ನು ಚೆನ್ನಾಗಿ ಎದುರಿಸಬಲ್ಲೆ. ಹೆದರಲು ಅದೇನು ದೆವ್ವ ಭೂತ ಅಲ್ಲ ಎಂದು ನೀವು ಗಟ್ಟಿಯಾಗಿ ಅಂದುಕೊಂಡು ನೋಡಿ ಫಲಿತಾಂಶ ಹೇಗಿರುತ್ತೆ ಅಂತ !
ನನ್ನ ಮಗ/ಳು ಚೆನ್ನಾಗಿಯೆ ಓದುತ್ತಾಳೆ, ಮನೆಯಲ್ಲಿ ಯಾವ ಪ್ರಶ್ನೆ ಕೇಳಿದರೂ ಟಕ್ ಅಂತ ಉತ್ತರಿಸುತ್ತಾನೆ/ಳೆ, ಆದರೆ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳಿಗೆ ಉತ್ತರಿಸಿರಲ್ಲ ಏಕೆ ಹೀಗೆ? ಎಂಬುದು ಹಲವು ಪಾಲಕರ ಪ್ರಶ್ನೆ. ಮಕ್ಕಳನ್ನು ವಿಚಾರಿಸಿದರೆ ಹೌದು ನನಗೆ ಉತ್ತರ ಗೊತ್ತಿದ್ದರೂ ಪರೀಕ್ಷೆಯ ಕೊಠಡಿಯಲ್ಲಿ ತಲೆ ಖಾಲಿ ಖಾಲಿ ಅನಿಸುತ್ತೆ. ಒಮ್ಮೊಮ್ಮೆ ಕಣ್ಣು ಮಂಜು ಮಂಜಾಗಿ ಪ್ರಶ್ನೆ ಪತ್ರಿಕೆ ಸರಿಯಾಗಿ ಓದಲು ಕೂಡ ಆಗಲ್ಲ. ಎಲ್ಲಿ ಜ್ಞಾನ ತಪ್ಪಿ ಬೀಳುತ್ತಿನೇನೋ ಎಂದು ಅನಿಸುತ್ತೆ ಎಂದು ಗೋಳು ತೋಡಿಕೊಂಡು ಗೊಳೋ ಎಂದು ಅಳುತ್ತಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಸ್ವಲ್ಪವೇ ತಯಾರಿ ಮಾಡಿದ್ದರೂ ಭಯಗೊಳ್ಳದೇ ಬರುವ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರಿಸಿ ಬರಲಾರದ್ದನ್ನು ಕೂಲಾಗಿ ವಿಚಾರ ಮಾಡಿ ತರಗತಿಯಲ್ಲಿ ಕೇಳಿದ್ದನ್ನು ನೆನಪಿಗೆ ತಂದುಕೊಂಡು ಉತ್ತರಿಸಿ ಉತ್ತಮ ಅಂಕ ಪಡೆಯುವವರೂ ಇದ್ದಾರೆ. ಪರೀಕ್ಷೆಯನ್ನು ವಿಶೇಷ ಎಂದು ತಿಳಿದುಕೊಳ್ಳದೇ ದಿನ ನಿತ್ಯ ನಡೆಯುವ ಸಾಮಾನ್ಯ ಘಟನೆಯಂತೆ ಪರಿಭಾವಿಸಿ ಬಿಂದಾಸ ಮನೋಭಾವ ಹೊಂದಿದವರೂ ಇದ್ದಾರೆ ಆದರೆ ಅಂಥವರ ಸಂಖ್ಯೆ ಕಮ್ಮಿ.
ವಿದ್ಯಾರ್ಥಿಗಳೆ, ಪರೀಕ್ಷೆ ಎಂಬ ಗುಮ್ಮ ನಿಮ್ಮನ್ನು ಭಯ ಪಡಿಸದಿರಲು ಈ ಕೆಳಗಿನ ಅಂಶಗಳನ್ನು ಪಾಲಿಸಿ.
ಅಟೋ ಸಜೇಶನ್ (ಸ್ವ ಸಲಹೆ)
ಸಂಪೂರ್ಣ ತಯಾರಿ ನಡೆಸಿದ್ದರೂ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೋಡುತ್ತಲೇ ನಡುಕ ಉಂಟಾಗುವದೇಕೆ? ಮೈಯೆಲ್ಲ ಬೆವರುವದೇಕೆ? ಕೈ ಕಾಲುಗಳಲ್ಲಿ ನಡುಕವೇಕೆ? ಎನ್ನುವ ಪ್ರಶ್ನೆಗಳು ಬೆಂಬಿಡದ ಭೂತದಂತೆ ತಲೆ ತಿನ್ನುತ್ತವೆ. ಈ ರೀತಿಯ ಲಕ್ಷಣಗಳು ಉಂಟಾಗುವದಕ್ಕೆ ‘ಸೈಕೋ ಸೋಮ್ಯಾಟಿಕ್ ಡಿಸ್ ಆರ್ಡರ್’ ಎಂದು ಹೆಸರಿಸಿದ್ದಾರೆ. ಕಡಿಮೆ ಓದಿದರೂ ಚೆನ್ನಾಗಿ ಉತ್ತರಿಸುವ ಹೆಚ್ಚು ಓದಿದರೂ ಚೆನ್ನಾಗಿ ಉತ್ತರಿಸಲಾಗದ ಪರಿಸ್ಥಿತಿಯನ್ನು ಕಂಡರೆ ಆಡು ಭಾಷೆಯಲ್ಲಿ ಮನಸ್ಸಿದಂತೆ ಮಹಾದೇವ ಅಂತಾರೆ. ಜನ ಸಾಮಾನ್ಯರು ಹೇಳಿದಂತೆ ಪರೀಕ್ಷೆಯನ್ನು ತುಂಬಾ ಸುಲಭದ ವಿಷಯ ಅಂತ ಮನಸ್ಸಿನಲ್ಲಿ ಅಂದುಕೊಂಡು ಜೀವನವೇ ಒಂದು ದೊಡ್ಡ ಪರೀಕ್ಷೆ. ಅದು ವಿಷಯ ಕಲಿಸದೇ ಪರೀಕ್ಷೆಯೊಡ್ಡುತ್ತೆ. ಅದಕ್ಕೆ ಹೋಲಿಸಿದರೆ ಇದು ತುಂಬಾ ಚಿಕ್ಕದು ಎಂದು ತಯಾರಿ ನಡೆಸುವದು ಉತ್ತಮ ಮಾರ್ಗ. ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಗಳು ಬಂದರೂ ಚೆನ್ನಾಗಿ ಉತ್ತರಿಸುತ್ತೇನೆ ಎಂದು ಮೇಲಿಂದ ಮೇಲೆ ಹೇಳಿಕೋಳ್ಳುವುದೇ ಇದಕ್ಕೆ ರಾಮಬಾಣ. ಹೀಗೆ ನಿಮಗೆ ನೀವೇ ಅಟೋ ಸಜೇಷನ್ (ಸ್ವ ಸಲಹೆ) ಗಳನ್ನು ಕೊಟ್ಟುಕೊಳ್ಳುವ ರೂಢಿಮಾಡಿಕೊಳ್ಳಿ. ಇದು ನಿಜಕ್ಕೂ ಅತ್ಯದ್ಭುತ ಫಲ ನೀಡುತ್ತದೆ. ಸ್ವ ಸಲಹೆ ಪದ್ದತಿ ನಿಮ್ಮಲ್ಲಿ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಪರೀಕ್ಷೆಯ ಬಗೆಗಿನ ಅತಿಯಾದ ವಿಚಾರಗಳನ್ನು ತಗ್ಗಿಸುತ್ತದೆ. ಧೈರ್ಯವನ್ನೂ ತುಂಬುತ್ತದೆ. ಪಾಸಿಬಿಲಿಟಿ ಥಿಂಕಿಂಗ್‌ನ್ನು (ನೀವು ಯೋಚಿಸುತ್ತಿರುವದು ಸಾಧ್ಯವಾಗುತ್ತದೆ ) ಬೆಳೆಸಿಕೊಳ್ಳಿ.
ಉತ್ಸಾಹದಿಂದ ಓದಿ
ಕಡಿಮೆ ತಯಾರಿ ನಡೆಸಿದವರು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯೋದಕ್ಕೆ ಕಾರಣ ಆತ್ಮವಿಶ್ವಾಸ. ಮನಸ್ಸಿದ್ದರೆ ಮಾರ್ಗ. ಮನಸ್ಸು ಮಾಡಿದರೆ ಇಲಿಯೂ ಹುಲಿಯಾಗಬಲ್ಲದು. ಹೆದರಿದರೆ ಸಿಂಹವೂ ಮೊಲವಾಗುತ್ತದೆ. ಕಿರು ಪರೀಕ್ಷೆಗಳಲ್ಲಿ ಮಧ್ಯಾವಧಿ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ತೆಗೆಯೋಕೆ ಅಗಿಲ್ಲ ಈಗ ಆಗುತ್ತಾ ಅಂದುಕೊಳ್ಳಬೇಡಿ. ಪ್ರಯತ್ನಕ್ಕೆ ಇಲ್ಲವೆಂದೆನ್ನಲೆ ಬೇಡಿ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನತ್ತ ಚಲಿಸುತ್ತವೆ ಎಂಬುದನ್ನು ಮರೆಯಬೇಡಿ. ಖಂಡಿತ ಖಂಡಿತ ಖಂಡಿತ ಚೆನ್ನಾಗಿ ಓದಿ ಚೆನ್ನಾಗಿ ಪರೀಕ್ಷೆಯನ್ನು ಎದುರಿಸುತ್ತೇನೆ. ಎಂದುಕೊಳ್ಳಿ. ಯಾವುದೇ ವಿಷಯಕ್ಕೂ ಕೈ ಚೆಲ್ಲಿ ಕೂಡಬೇಡಿ. ಒಮ್ಮೆ ಸಂತೋಷದಿಂದ ಅಭ್ಯಾಸದ ಬೆನ್ನು ಹತ್ತಿ ನೀವೇ ಬೆರಗಾಗುವಂಥ ವಿಸ್ಮಯಗಳು ನಡೆಯುತ್ತವೆ. ನಿಮ್ಮೊಳಗಿರುವ ಶಕ್ತಿಯನ್ನು ಖಂಡಿತ ಕೀಳಾಗಿ ಕಾಣಬೇಡಿ. ನಿಮ್ಮ ಕುತೂಹಲವನ್ನು ಕಳೆದುಕೊಳ್ಳಬೇಡಿ ಅದೇ ನಿಮ್ಮ ಮನಸ್ಸನ್ನು ಚುರುಕಾಗಿಡುತ್ತದೆ. ನೀವು ಉತ್ಸಾಹದಿಂದ ಓದ ತೊಡಗಿದರೆ ನೀವು ಮುಂದುವರಿದಂತೆಯೇ ಸರಿ.
ಸಕಾರಾತ್ಮಕವಾಗಿ ಯೋಚಿಸಿ
ನಮ್ಮ ಆಲೋಚನೆಗಳನ್ನು ನಿಯಂತ್ರಿಸುವಂತದ್ದು ನಮ್ಮ ಮೆದುಳು. ಮೆದುಳಿನಲ್ಲಿರುವ ನೂರಾರು ಮಿಲಿಯನ್ ನ್ಯೂರಾನ್‌ಗಳು ಅದು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ನಾವು ಮಾಡುವ ಎಲ್ಲ ಕೆಲಸಗಳಿಗೆ ಸೂಚನೆಗಳನ್ನು ಕೊಡುವದು ನಮ್ಮ ಮೆದುಳು. ಮೆದುಳಿನ ಕಾರ್ಯಕ್ಕೆ ಅವಶ್ಯಕವಾಗಿರುವ ಎಡಿನೋಸಿನ್ ಟ್ರೆöÊಫಾಸೈಟ್ ಎನ್ನುವ ಪದಾರ್ಥವನ್ನು ನಮ್ಮ ಶರೀರ ಉತ್ಫಾದಿಸಿ ಸಹಕರಿಸುತ್ತದೆ. ಇದು ಮೆದುಳಿನ ಬಗ್ಗೆಯಾದರೆ ಮನಸ್ಸು ಆಲೋಚನೆಗಳನ್ನು ಉತ್ಪಾದಿಸುವ ಕಾರ್ಖಾನೆ ಇದ್ದ ಹಾಗೆ ನಾವು ಉತ್ಪಾದಿಸುವ ಆಲೋಚನೆಗಳು ಉತ್ತಮವಾಗಿದ್ದರೆ ಅವು ಸಕಾರಾತ್ಮಕ ಆಲೋಚನೆಗಳು ನಮ್ಮ ಮೇಲೆ ಬೀರುವ ಪ್ರಭಾವ ನಿಜಕ್ಕೂ ಅಚ್ಚರಿ ತರುವಂತದ್ದು. ಯೊಚನೆಗಳು ಕೆಟ್ಟದ್ದಾಗಿದ್ದರೆ ಅದರ ಪ್ರಭಾವ ನಮಗೆ ಹಿತಕರವಲ್ಲದ್ದು. ಸಮಸ್ಯೆಗಳಿಗೆ ದೂಡುವಂತದ್ದು. ಅದಕ್ಕೆ ನೀವು ಸಕಾರಾತ್ಮಕ ಯೋಚನೆಗಳಲ್ಲಿ ತೊಡಗಿಸಿಕೊಳ್ಳಿ.
ಪ್ರಾಣಾಯಾಮ
ಸಕಾರಾತ್ಮಕ ಆಲೋಚನೆಗಳನ್ನು ನಿಮ್ಮದಾಗಿಸಿಕೊಳ್ಳಲು ಒತ್ತಡ ಹೊರ ಹಾಕಲು ಯೋಗ ಪ್ರಾಣಯಾಮ ಅತ್ಯುತ್ತಮವಾದುವು. ತಜ್ಞರನ್ನು ಭೇಟಿಯಾಗಿ ಪ್ರಾಣಾಯಾಮದ ವಿಧಾನ ತಿಳಿದು ನಿತ್ಯವೂ ಅನುಲೋಮ ವಿಲೋಮ ಪ್ರಾಣಾಯಾಮ ರೂಢಿಸಿಕೊಳ್ಳಿ.
ಓದಿನ ಸಮಯ ನಿಗದಿಸಿಕೊಳ್ಳಿ
ದಿನಾಲೂ ಓದುವ ಸಮಯವನ್ನು ಬದಲಾಯಿಸಬೇಡಿ. ಒಂದು ನಿಗದಿತ ಸಮಯವನ್ನು ಓದಿನ ಸಮಯವೆಂದೇ ಮೀಸಲಿರಿಸಿಕೊಂಡು ಡು ನಾಟ್ ಡಿಸ್ಟರ್ಬ್ ಎಂಬ ಫಲಕವನ್ನು ಓದುವ ಕೋಣೆಗೆ ತಗುಲಿ ಹಾಕಿ ಬಾಗಿಲು ಮುಚ್ಚಿಕೊಂಡು ಓದುವ ರೂಢಿ ಮಾಡಿಕೊಳ್ಳಿ ಇದರಿಂದ ನಿಮ್ಮ ಮೆದುಳು ನಿಗದಿತ ಸಮಯಕ್ಕೆ ಓದಿಗೆ ಟ್ಯೂನ್ ಆಗುತ್ತದೆ.
ಅಕ್ರೋನಿಮ್ಸ್ ಬಳಸಿ
ಓದಿದ್ದನ್ನು ನೆನಪಿಟ್ಟುಕೊಳ್ಳಲು ಅನೇಕ ಮಾರ್ಗಗಳಿವೆ. ಓದಿದ್ದನ್ನು ಮೇಲಿಂದ ಮೇಲೆ ರಿಕಾಲ್ ಮಾಡಿಕೊಳ್ಳುವದು. ಒಂದು ವಿಧಾನವಾದರೆ ನೆನಪಿಡಬೇಕಾದ ಸೈಡ್ ಹೆಡ್ಡಿಂಗ್ ವಿಷಯದ ಮೊದಲ ಅಕ್ಷರಗಳನ್ನು ತೆಗೆದುಕೊಂಡು ಅದನ್ನೇ ಒಂದು ದೊಡ್ಡ ಪದ ಅಥವಾ ಸಣ್ಣ ವಾಕ್ಯದಂತೆ ಮಾಡಿ ಹೆಚ್ಚಿನ ಅಂಕದ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಬರೆಯಲು ಸಹಾಯವಾಗುವದು. ಇದಕ್ಕೆ ಅಕ್ರೋನಿಮ್ಸ್ ಎನ್ನುವರು ಉದಾಹರಣೆಗೆ ಕಾಮನಬಿಲ್ಲಿನಲ್ಲಿನ ಏಳು ಬಣ್ಣಗಳನ್ನು ನೆನಪಿನಲ್ಲಿಡೋದು ತುಸು ಗೊಂದಲ ಅನಿಸುತ್ತಲ್ವಾ? ಆದರೆ ಅದನ್ನು “ವಿಬ್ ಗಯಾರ್” ಎಂದು ಅಕ್ರೋನಿಮ್ಸ್ ನಲ್ಲಿ ನೆನಪಿಟ್ಟುಕೊಂಡರೆ ಗೊಂದಲ ಮಾಯವಾಗುವದಲ್ಲದೇ ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.
ಮೈಂಡ್ ಮ್ಯಾಪಿಂಗ್ ಕಲೆ ಕಲಿತುಕೊಳ್ಳಿ
ಇದಲ್ಲದೇ ಮೈಂಡ್ ಮ್ಯಾಪಿಂಗ್ ವಿಧಾನವನ್ನೂ ಬಳಸಿ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಮೈಂಡ್ ಮ್ಯಾಪಿಂಗ್ ಮಾಡಲು ಒಂದು ಬಿಳಿ ಕಾಗದದಲ್ಲಿ ಒಂದು ದೊಡ್ಡ ವೃತ್ತ ಹಾಕಿ ನೀವು ಓದಿದ ಒಟ್ಟು ಅಧ್ಯಾಯಗಳನ್ನು ಬರೆದು ನಂತರ ಅಧ್ಯಾಯದಲ್ಲಿರುವ ಮುಖ್ಯಾಂಶ ಮತ್ತು ಮುಖ್ಯಾಂಶಗಳಿಗೆ ಸಂಬಂಧಪಟ್ಟ ಅಕ್ರೋನಿಮ್ಸ್ ಬರೆದು ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವೃತ್ತ ಹಾಕಿ ಮೇಲಿಂದ ಮೇಲೆ ಹೀಗೆ ಪುನರಾವರ್ತಿಸುವದರಿಂದ ಓದಿದ ಅಂಶಗಳು ದೀರ್ಘ ಸಮಯದವರೆಗೂ ಸ್ಮೃತಿ ಪಟಲದಲ್ಲಿ ಉಳಿದುಕೊಳ್ಳುವದರಲ್ಲಿ ಸಂಶಯವಿಲ್ಲ.
ಸಿಬಿಟಿ ಥೆರಪಿ ಉಪಯೋಗಿಸಿ
ಮೇಲೆ ಚರ್ಚಿಸಲಾದ ಏನೆಲ್ಲ ಅಂಶಗಳನ್ನು ಅಳವಡಿಸಿಕೊಂಡರೂ ಪರೀಕ್ಷಾ ಭಯ ಸಂಪೂರ್ಣ ಹೋಗುವದಿಲ್ಲ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದ್ದರೆ ನೀವು ಸಿಬಿಟಿಯನ್ನು ಉಪಯೋಗಿಸಬಹುದು. ಏನಿದು ಸಿಬಿಟಿ ಅಂತಿರೇನು? ಮಾನಸಿಕ ಒತ್ತಡವನ್ನು ನಿವಾರಿಸಲು ಇರುವ ಬಿಹೇವಿಯರ್ ಥೆರಪಿ.ಸಿಬಿಟಿ ಎಂದರೆ ಕಾಗ್ನೇಟಿವ್ ಬಿಹೇವಿಯರ್ ಧೆರಪಿ ಈ ಥೆರಪಿಯಲ್ಲಿ ಯಾವುದೇ ಒಂದು ಸಮಸ್ಯೆಗೆ ಸಾಧ್ಯವಿರುವ ಎಲ್ಲ ಪರಿಹಾರಗಳನ್ನು ಬರೆದುಕೊಂಡು ಅದರಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವದು. ಉದಾಹರಣೆಗೆ ಪರೀಕ್ಷಾ ಭಯವನ್ನೇ ತೆಗೆದುಕೊಳ್ಳಿ ಇಲ್ಲಿ ಪರೀಕ್ಷೆಯೆಂಬ ಶಬ್ದ ಕೇಳಿದೊಡನೆ ಮೆದುಳಿನಲ್ಲಿ ಅನೇಕ ಆಲೋಚನೆಗಳು ಬರುತ್ತವೆ. ಆಲೋಚನೆಗೆ ತಕ್ಕಂತೆ ಭಾವನೆಗಳು ಮೂಡುತ್ತವೆ. ಭಾವನೆಗಳೇ ಮನುಷ್ಯನ ವರ್ತನೆಯನ್ನು ತಿಳಿಸುತ್ತವೆ. ವರ್ತನೆಗಳು ಶರೀರದಲ್ಲಿ ಒಂದು ರೀತಿಯ ಸ್ಪಂದನೆಯನ್ನುಂಟು ಮಾಡುತ್ತವೆ. ಈ ಸ್ಪಂದನೆಗಳೇ ಮತ್ತೆ ಆಲೋಚನೆಗಳಿಗೆ ಕಾರಣವಾಗುತ್ತವೆ. ಇದನ್ನೇ ಸಿಬಿಟಿ ಸರ್ಕಲ್ ಎಂದು ಕರೆಯುವರು. ಉದಾಹರಣೆಗೆ ವಿದ್ಯಾರ್ಥಿ ನನಗೆ ಪರೀಕ್ಷೆ ಎಂದರೆ ಭಯವಿಲ್ಲ ಅದು ದಿನ ನಿತ್ಯದ ಕೆಲಸವಿದ್ದಂತೆ ಅದನ್ನು ಸಲೀಸಾಗಿ ಉತ್ಸಾಹದಿಂದ ಬರೆಯುವೆ ಎಂದು ಆಲೋಚಿಸುತ್ತಾನೆ ಎಂದುಕೊಳ್ಳೋಣ. ಇದರಿಂದ ಅವನಲ್ಲಿ ಪರೀಕ್ಷೆಯ ಬಗ್ಗೆ ಒಳ್ಳೆಯ ಆಲೋಚನೆಗಳು ಹುಟ್ಟುತ್ತವೆ ಈ ಆಲೋಚನೆಗಳು ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿ ಭಯ ದೂರವಾಗಿಸುತ್ತವೆ.
ಒಂದು ವೇಳೆ ಪರೀಕ್ಷೆಯೆಂದರೆ ಪಿಶಾಚಿ ಎಂದುಕೊಂಡರೆ ಅದರ ಬಗ್ಗೆ ಭಯ ಆತಂಕದಂತ ಕೆಟ್ಟ ಯೋಚನೆಗಳು ಹುಟ್ಟುತ್ತವೆ. ಇವು ಕೆಟ್ಟ ಭಾವನೆಗಳಿಗೆ ದಾರಿ ಮಾಡಿಕೊಡುತ್ತವೆ. ತನ್ನ ಕೈಯಲ್ಲಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ಭಾವ ಮೂಡಿಸಿ ಓದಿದ್ದೆಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೆ ನಪಾಸಾಗುತ್ತೇನೆ ಎಂಬ ಭಯ ಮನದಲ್ಲಿ ಮನೆ ಮಾಡುತ್ತದೆ. ಇದರಿಂದ ಶರೀರದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವದು ಖಚಿತ. ಮಾನಸಿಕ ಆರೋಗ್ಯದ ಗತಿಯಂತೂ ಈಗಾಗಲೇ ಹಾಳಾಗಿಬಿಟ್ಟಿರುತ್ತದೆ.
ನೋಡಿದರಲ್ಲಾ ವಿದ್ಯಾರ್ಥಿಗಳೆ, ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿದ್ದರೆ ಆತ್ಮವಿಶ್ವಾಸ ಮೂಡಿ ಪರೀಕ್ಷೆ ಚೆನ್ನಾಗಿ ಎದುರಿಸಿ ಗೆಲ್ಲಬಲ್ಲಿರಿ. ನಕಾರಾತ್ಮಕ ಆಲೋಚನೆಗಳಿಂದ ಭಯ ಆತಂಕ ಖಿನ್ನತೆಗೆ ಒಳಗಾಗಿ ನರಳುವಂತಾಗುವದು. ಆದ್ದರಿಂದ ಪರೀಕ್ಷೆಯ ಬಗ್ಗೆ ನಿಮ್ಮ ಮನದಲ್ಲಿ ಸಕಾರಾತ್ಮಕವಾಗಿ ಯೋಚಿಸುವದು ಪರೀಕ್ಷಾ ಭಯವನ್ನು ಹೋಗಲಾಡಿಸುವದಲ್ಲದೇ ಜೀವನದ ಪರೀಕ್ಷೆಯಲ್ಲೂ ಗೆಲ್ಲ ಬಲ್ಲೆ ಎನ್ನುವ ಉತ್ಸಾಹ ನೀಡುತ್ತೆ.
ಗೆಲುವಿಗಿಂತ ಪ್ರಮುಖವಾದುದು ಪ್ರಯತ್ನ. ಪ್ರಯತ್ನದ ಕೆಂದ್ರಬಿಂದು ಧೈರ್ಯ- ಅದು ಪರೀಕ್ಷೆ ಇರಬಹುದು ಆಟೋಟ ಇರಬಹುದು ಅಥವಾ ಜೀವನದ ಸಮಸ್ಯೆಯೇ ಇರಬಹುದು. ಮುಂಬರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳೆ ನಿಮಗೆ ಗುಡ್ ಲಕ್.
ಪಾಲಕರೆ, ಈ ಅಂಶಗಳನ್ನು ಪಾಲಿಸಿ ನಿಮ್ಮ ಮಕ್ಕಳ ಪರೀಕ್ಷೆಗೆ ಸಹಕರಿಸಿ.
ಪರೀಕ್ಷೆ ಸಮೀಪಿಸುತ್ತಿದೆ ಟಿವಿ ಬೇಡ ಆಟೋಟ ಬಂದ್ ಓದುವುದೊಂದೇ ನಿನ್ನ ಕೆಲಸ ಅಂತ ಜೋರಾಗಿ ಹೇಳುತ್ತ ಬರೀ ಪುಸ್ತಕದಲ್ಲಿ ಮುಖ ಹುದುಗಿಸಿಕೊಂಡು ಕುಳಿತುಕೊಳ್ಳಲು ಒತ್ತಾಯಿಸದಿರಿ.
ಪಕ್ಕದ ಮನೆ ಮಕ್ಕಳ ಸಾಧನೆಯೊಂದಿಗೆ ಅಥವಾ ಇತರ ಸ್ನೇಹಿತರ ಅಂಕಗಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸದಿರಿ. ಅವನಿಗೆ ಅವನೇ ಸಾಟಿ. ಅವನನ್ನು ಅವನೊಂದಿಗೆ ಸ್ಪರ್ಧಿಸಲು ಕಲಿಸಿ. .
ಪರಿಕ್ಷಾ ಸಮಯವೆಂದು ನಿಮ್ಮ ಪ್ರೀತಿಯ ಮಾತು ಒಡನಾಟಕ್ಕೆ ಕಡಿವಾಣ ಹಾಕದಿರಿ. ನಿಜ ಹೇಳಬೇಕಂದರೆ ಅವರಿಗೆ ನಿಮ್ಮ ಪ್ರೀತಿಯ ಜರೂರತ್ತು ಪರೀಕ್ಷೆಯ ಸಮಯದಲ್ಲೇ ಹೆಚ್ಚಿರುತ್ತದೆ ಎನ್ನುವದು ನೆನಪಿರಲಿ.
ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದಲು ಬಿಡಬೆಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಸುಲಭವಾಗಿ ಜೀರ್ಣವಾಗುವ ಆಹಾರ ನೀಡಿ. ಹೆಚ್ಚಾಗಿ ಹಣ್ಣುಗಳನ್ನು ನೀಡಿ. ಅದರಲ್ಲೂ ಬಾಳೆಹಣ್ಣು.(ಇದರಲ್ಲಿ ನೆನಪಿನ ಶಕ್ತಿ ವೃದ್ಧಿಸುವ ಫಾಸ್ಪರಸ್ ಮೆಗ್ನೀಷಿಯಂ ಇವೆ)
ಅತಿಯಾದ ಕಾಫಿ ಟೀ ಬೇಡವೆ ಬೇಡ. ಅವುಗಳ ಬದಲಾಗಿ ಡ್ರೈ ಫ್ರುಟ್ಸ್ ಗಳನ್ನು ಕೊಡಿ. ಅದರಲ್ಲೂ ಬಾದಾಮಿ ವಾಲ್ ನಟ್ಸ್ ಮುಂತಾದವು. ಹಾಲು ಮೊಟ್ಟೆಯ ಬಿಳಿ ಭಾಗವನ್ನೂ ನೀಡಿ.
ಪರೀಕ್ಷೆ ಸಮೀಪಿಸಿದಾಗ ಕುಟುಂಬ ಪ್ರವಾಸ ಮತ್ತು ಇತರೆ ಕಾರ್ಯಕ್ರಮಗಳಿಗೆ ಹಾಜರಾಗಲೇಬೇಕೆಂದು ಒತ್ತಾಯಿಸದಿರಿ.
ನಿಮ್ಮ ಮಕ್ಕಳಿಂದ ಅವಾಸ್ತವಿಕವಾದುದುನ್ನು ಮತ್ತು ಅಸಾಧ್ಯವಾದುದನ್ನು ನಿರೀಕ್ಷಿಸಬೇಡಿ.
ಮಕ್ಕಳನ್ನು ಬೆಳೆಸುವದು ನಮಗಿರುವ ಅತಿ ಮುಖ್ಯ ಮತ್ತು ಅತಿ ಕಷ್ಟದ ಕೆಲಸಗಳಲ್ಲಿ ಒಂದು ಈ ಬಗ್ಗೆ ಯಾವುದೇ ತರಬೇತಿ ಅನುಭವ ಇಲ್ಲದಿದ್ದರೂ ನಾವು ಒಪ್ಪಿಕೊಳ್ಳುವ ಕೆಲಸ. ನಿಮ್ಮ ಅವಿರತ ದಿನಚರಿಯಲ್ಲೂ ಮಕ್ಕಳಿಗಾಗಿ ಸ್ವಲ್ಪ ಸಮಯ ಮೀಸಲಿರಿಸಿ. ಬರೀ ಉಪದೇಶ ನೀಡಬೇಡಿ. ಉತ್ತಮ ಸಲಹೆ ಉದಾಹರಣೆ ಕೊಡಿ. “ಒಳ್ಳೆಯ ಉಪದೇಶ ಕೊಡುವವನು ಒಂದು ಕೈನಿಂದ ಕಟ್ಟುತ್ತಾನೆ. ಒಳ್ಳೆಯ ಸಲಹೆ ಮತ್ತು ಉದಾಹರಣೆ ನೀಡುವಾತ ಎರಡೂ ಕೈಗಳಿಂಧ ಕಟ್ಟುತ್ತಾನೆ.”
ನೆನಪಿರಲಿ, ಒಳ್ಳೆಯ ಕಾಳುಗಳು ಮಾತ್ರ ಒಳ್ಳೆಯ ಬೆಳೆ ಕೊಡುತ್ತವೆ.


