ಬಸವನಬಾಗೇವಾಡಿ: ಪುರಸಭೆಯಿಂದ ಇಂಗಳೇಶ್ವರ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಜಿ ಪ್ಲಸ್-೧ ಮಾದರಿ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಫಲಾನುಭವಿಗಳಿಗೆ ವಿವಿಧ ಬ್ಯಾಂಕುಗಳು ಗೃಹಸಾಲ ಒದಗಿಸಲು ಮುಂದೆ ಬಂದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಜಿಲ್ಲಾಡಳಿತ, ಪುರಸಭೆ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) ಜಿ ಪ್ಲಸ್-೧ ಹಾಗೂ ರಾಜ್ಯ ಪುರಸ್ಕ್ರತ ವಸತಿ ಯೋಜನೆಗಳ ಸಮನ್ವತೆಯೊಂದಿಗೆ ವಸತಿ ಯೋಜನೆಗಳ ಅನುಷ್ಠಾನದಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಗೃಹಸಾಲ ಒದಗಿಸಲು ಬ್ಯಾಂಕುಗಳೊಂದಿಗೆ ಮೇಳದಲ್ಲಿ ಮಾತನಾಡಿದ ಅವರು, ಈಗಾಗಲೇ ಪುರಸಭೆಯಿಂದ ಜಿ ಪ್ಲಸ್-೧ ಮಾದರಿಯಲ್ಲಿ ೫೦೦ ಮನೆಗಳ ನಿರ್ಮಾಣವಾಗಿವೆ. ಈ ಮನೆಗಳ ಫಲಾನುಭವಿಗಳಿಗೆ ತಾತ್ಕಾಲಿಕ ಹಕ್ಕು ಪತ್ರ ಈಗಾಗಲೇ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಖಾಯಂ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ೫೦೦ ಫಲಾನುಭವಿಗಳಲ್ಲಿ ಈಗಾಗಲೇ ೧೪೭ ಫಲಾನುಭವಿಗಳು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ೧೪೩ ಫಲಾನುಭವಿಗಳು ಸಾಲ ಪಡೆದುಕೊಂಡಿದ್ದಾರೆ. ಉಳಿದ ೩೫೭ ಫಲಾನುಭವಿಗಳು ಸಾಲ ಪಡೆಯಬೇಕಿದೆ. ವಿವಿಧ ಬ್ಯಾಂಕುಗಳು ಸರಳೀಕರಣ ಸುಲಭವಾಗಿ ಸಾಲವನ್ನು ಕೊಡುತ್ತಿವೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ರೂ. ೧.೩೦ ಲಕ್ಷ, ಸಾಮಾನ್ಯ ವರ್ಗದವರಿಗೆ ರೂ. ೧.೯೦ ಲಕ್ಷ ಸಾಲವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕಿದೆ. ಪುರಸಭೆಯು ಮುಂಬರುವ ದಿನಗಳಲ್ಲಿ ಪುರಸಭೆಯ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಸಾಲ ಮರುಪಾವತಿಗೆ ಸಹಾಯ ಮಾಡಲಿದೆ. ಜಿ ಪ್ಲಸ್-೧ ಮಾದರಿ ಮನೆಗಳಲ್ಲಿ ಈಗಾಗಲೇ ೩೫೦ ಮನಗಳು ವಾಸಕ್ಕೆ ಯೋಗ್ಯವಾಗಿವೆ. ಉಳಿದ ೧೫೦ ಮನೆಗಳನ್ನು ಕೆಲ ದಿನಗಳಲ್ಲಿ ವಾಸಕ್ಕೆ ಯೋಗ್ಯವಾಗುವಂತೆ ಮಾಡಲಾಗುವುದು ಎಂದರು.
ಜಿ ಪ್ಲಸ್-೧ ಮನೆಗಳಿಗೆ ಸಂಖ್ಯೆಗಳನ್ನು ಹಾಕಲಾಗುವುದು. ಈ ಮನೆಗಳಿಗೆ ನೀರಿನ ಸೌಲಭ್ಯಕ್ಕಾಗಿ, ವಿದ್ಯುತ್ ಸೌಲಭ್ಯಕ್ಕಾಗಿ ಟೆಂಡರ್ ಮಾಡಲಾಗುವುದು. ಯಾವ ಫಲಾನುಭವಿಗಳು ಗೃಹ ಸಾಲ ಪಡೆದುಕೊಂಡಿಲ್ಲವೋ ಅವರು ಶೀಘ್ರವೇ ಬ್ಯಾಂಕ್ಗಳನ್ನು ಸಂಪರ್ಕಿಸಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಸತಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಮರನಾಥ ಪುಠಾಣಿ, ವಸತಿ ಯೋಜನೆಯ ಸಹಾಯಕ ಸಂಘಟಕ ಬಸವರಾಜ ಗೋಲಾಯಿ, ವಿಷಯ ನಿರ್ವಾಹಕ ಶಿವಕುಮಾರ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ವಿಷಯ ನಿರ್ವಾಹಕ ರಾಜು ರಾಠೋಡ, ವಿವಿಧ ಬ್ಯಾಂಕಿನ ಸಿಬ್ಬಂದಿ, ಪುರಸಭೆ ಉಳಿದ ಸಿಬ್ಬಂದಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

