ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ | ಧರ್ಮ ಸಮನ್ವಯ ಸಮಾರಂಭ | ಪುರಾಣ ಮಂಗಲೋತ್ಸವ
ಮುದ್ದೇಬಿಹಾಳ: ಮಂತ್ರಿಗಳೊಂದಿಗೆ, ಪ್ರತಿಷ್ಠಿತ ನಾಯಕರೊಂದಿಗೆ, ಎಲ್ಲ ಜಗದ್ಗುರುಗಳೊಂದಿಗೆ, ಎಲ್ಲ ಮಠಾಧೀಶರೊಂದಿಗೆ, ಸಾಹಿತಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ ಕುಂಟೋಜಿ ಶ್ರೀಗಳಿಗೆ ಇಡೀ ರಾಜ್ಯವನ್ನೇ ತಂದು ಕುಂಟೋಜಿಯಲ್ಲಿ ಕೂರಿಸುವಷ್ಟು ಶಕ್ತಿ ಇದೆ ಎಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮವಾದ ಧರ್ಮ ಸಮನ್ವಯ ಸಮಾರಂಭ ಹಾಗೂ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಮಿಗಳಿಗೆ ಸಹಕಾರ ನೀಡುವುದರಿಂದ ಸ್ವಾಮಿಗಳು ಬೆಳೆಯುವದಿಲ್ಲ ಬದಲಾಗಿ ಸಮಾಜ, ಮಠಗಳು ಬೆಳೆಯುತ್ತವೆ. ಚನ್ನವೀರ ದೇವರು ತಮ್ಮ ಜೀವನದಲ್ಲಿ ಸುಖದ ಬದಲು ದುಃಖವನ್ನೇ ಹೆಚ್ಚು ಕಂಡವರು. ಸಾಕಷ್ಟು ಕ್ರಿಯಾಶೀಲರಾಗಿರುವ ಅವರಿಗೆ ಗ್ರಾಮಸ್ಥರು ಎಷ್ಟು ಸಹಕಾರ ನೀಡುತ್ತೀರೋ ಅಷ್ಟು ದೊಡ್ಡ ಕೀರ್ತಿಗೆ ನಿಮ್ಮೂರು ಪಾತ್ರವಾಗುತ್ತದೆ ಎಂದರು.
ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಗುರು ಅಂದರೆ ಬೆಳಕು, ದಾರಿ. ಗುರುಗಳನ್ನ ನಮ್ಮ ಬಾಳಿನ ಬೆಳಕು ಮತ್ತು ದಾರಿಯನ್ನಾಗಿಸುವ ಅಗತ್ಯ ಇದೆ ಎಂದರು.
ಯರನಾಳದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ನಮಗಾಗಿ ನಮ್ಮ ಕುಟುಂಬಕ್ಕಾಗಿ ಬದುಕುವ ಬದಲು ಸಮಾಜಕ್ಕಾಗಿ ಬದುಕಿದಲ್ಲಿ ಮಾತ್ರ ಇತಿಹಾಸದಲ್ಲಿ ಉಳಿಯಲು ಸಾಧ್ಯ ಎಂದರು.
ಸಾಹಿತಿ ಶಿಕ್ಷಕ ರುದ್ರೇಶ ಕಿತ್ತೂರ ಹಾಗೂ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು.
೨೨ ದಿನಗಳ ಕಾಲ ಲಕಬುರ್ಗಿಯ ಶರಣ ಬಸವೇಶ್ವರರ ಪುರಾಣ ಸೇವೆ ನೀಡಿದ ಗಡಿಗೌಡಗಾಂವದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಸುಗೂರಿನ ರುದ್ರಮುನಿ ಶಿವಾಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಜಯಪುರದ ಸ್ವಯಂಭೂ ಆರ್ಟ್ ಫೌಂಡೇಶನ್ ಇವರಿಂದ ಭರತನಾಟ್ಯ ಪ್ರದರ್ಶಿಸಲಾಯಿತು. ಇದೇ ವೇಳೆ ಕಲಾವಿದ ಬಸವರಾಜ ಹಡಪದ ಅವರು ತಮ್ಮ ಕುಂಚದಿಂದ ಬಿಡಿಸಿದ ಡಾ. ಚನ್ನವೀರ ದೇವರ ವಿವಿಧ ಭಂಗಿಯ ಚಿತ್ರಗಳನ್ನು ಶ್ರೀಗಳಿಗೆ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ, ಮುಖಂಡ ಮಹಾಂತೇಶ ಗಂಗನಗೌಡರ, ಸಮಾಜ ಸೇವಬಕ ಅಯೂಬ ಮನಿಯಾರ ಸೇರಿದಂತೆ ಮತ್ತೀತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾಂತಲಿಂಗ ಶಿವಾಚಾರ್ಯರು, ಶಾಂತಲಿಂಗ ಶಿವಾಚಾರ್ಯರು, ಚನ್ನಬಸವ ಮಹಾಸ್ವಾಮಿಗಳು, ಗುರು ಬಸವ ಮಹಾಸ್ವಾಮಿಗಳು, ಹುಚ್ಚೇಶ್ವರ ಮಹಾಸ್ವಾಮಿಗಳು, ನಾಲತವಾಡದ ಗುರುಮೂರ್ತಿ ದೇವರು, ಕರ್ನಾಟಕ ಕೋ ಅಪ್ ಅಧ್ಯಕ್ಷ ಅತೀಶ ಓಸ್ವಾಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಉದ್ಯಮಿ ಶರಣು ಸಜ್ಜನ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಸೇರಿದಂತೆ ಮತ್ತೀತರರು ಇದ್ದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಕನಕಗಿರಿಯ ವಿರಕ್ತಮಠದ ಚನ್ನಮಲ್ಲ ಮಹಾಸ್ವಾಮಿಗಳು ನಿರೂಪಿಸಿದರು. ಸಮಾಜ ಸೇವಕ ಆನಂದ ದೊಡಮನಿ ದಾಸೋಹ ಸೇವೆ ನೀಡಿದರು.

