ಬಸವಶರಣ ಸಂಗಮ ಸೇವಾ ಸಮೀತಿ & ವಿವಿಧ ಸಂಘ-ಸಂಸ್ಥೆಗಳಿಂದ ಪಪಂ ಮುಖ್ಯಾಧಿಕಾರಿಗೆ ಮನವಿ
ದೇವರಹಿಪ್ಪರಗಿ: ವಿಶ್ವಗುರು ಬಸವಣ್ಣನವರ ಸಾಂಸ್ಕೃತಿಕ ಭವನಕ್ಕೆ ನಿವೇಶನ ಪೂರೈಸುವಂತೆ ಆಗ್ರಹಿಸಿ ಬಸವಶರಣ ಸಂಗಮ ಸೇವಾ ಸಮೀತಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪಂಚಾಯಿತಿ ಕಾರ್ಯಲಯಕ್ಕೆ ಬುಧವಾರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ನಿವೇಶನಕ್ಕಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವಶರಣ ಸಂಗಮ ಸೇವಾ ಸಮೀತಿ ಅಧ್ಯಕ್ಷ ಸಂಗಪ್ಪಣ್ಣ ತಡವಲ ಮಾತನಾಡಿ, ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಇದು ಸಂತೋಷದ ವಿಷಯ. ಈಗ ಪ್ರತಿ ಭಾನುವಾರ ಬಸವಣ್ಣ ಸಹಿತ ಶರಣರ ಕುರಿತಾದ ಕಾರ್ಯಕ್ರಮಗಳನ್ನು ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದು ಕಾರ್ಯಕ್ರಮಗಳಿಗೆ ಚಿಕ್ಕದಾಗುತ್ತಿದೆ.
ಪಟ್ಟಣ ಈಗ ತಾಲ್ಲೂಕು ಕೇಂದ್ರವು ಆಗಿರುವುದರಿಂದ ಸರ್ಕಾರದ ಮೂಲಕ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಬಸವಣ್ಣನವರ ಸಾಂಸ್ಕೃತಿಕ ಭವನ ನಿರ್ಮಿಸಿ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿದರೆ ಒಳ್ಳೆಯದಾಗುತ್ತದೆ. ಅದಕ್ಕಾಗಿ ತಾವು ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಪಟ್ಟಣದಲ್ಲಿ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಕ್ರಮವಹಿಸಬೇಕು ಎಂದರು.
ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ಹಿರೇಮಠ, ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಪಟ್ಟಣ ಪಂಚಾಯಿತಿ ಮಾಜಿಅಧ್ಯಕ್ಷ ಭಾಸ್ಕರ್ ಗುಡಿಮನಿ, ಸದಸ್ಯ ಕಾಶೀನಾಥ ಬಜಂತ್ರಿ, ಸೋಮು ದೇವೂರ, ಸೋಮು ಹಡಪದ ಬಸವರಾಜ ನಾಟೀಕಾರ, ಪ್ರಭು ಅಂಬಲಗಿ, ಪಂಚಾಯಿತಿ ಸಿಬ್ಬಂದಿ ಸೋಮಶೇಖರ ಭೋವಿ ಇದ್ದರು.

