ಬಸವನಬಾಗೇವಾಡಿ: ಪಾಲಕರು, ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ಬಸವನಬಾಗೇವಾಡಿ ವಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.
ಪಟ್ಟಣದ ಇಕ್ಬಾಲ್ ನಗರದ ಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘದ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಉತ್ತಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಪಾಲಕರ, ಶಿಕ್ಷಕರ ಮೇಲಿದೆ. ಪಾಲಕರು ತಮ್ಮ ಮಕ್ಕಳಿಗೆ ಬೇಕರಿ ತಿಂಡಿ-ತಿನಿಸುಗಳನ್ನು ಕೊಡದೇ ಪೌಷ್ಠಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನು ತಿನ್ನಿಸುವ ಮೂಲಕ ಆರೋಗ್ಯಯುತ ಮಾಡುವ ಜೊತೆಗೆ ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಗಮನ ಹರಿಸಬೇಕಾದ ಅಗತ್ಯವಿದೆ. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಖಂಡಿತ ಅವರು ಉತ್ತಮ ನಾಗರಿಕರಾಗುತ್ತಾರೆ. ಈ ಶಾಲೆಯ ಸಂಸ್ಥಾಪಕ ಎನ್.ಎನ್.ಅಂಗಡಿ ಅವರಿಗೆ ಕಾಲಿನಲ್ಲಿ ಅಷ್ಟು ಶಕ್ತಿ ಇರದೇ ಇದ್ದರೂ ಅವರು ದಿಟ್ಟತನದಿಂದ ಶಾಲೆಯ ಸರ್ವೋತ್ತಮವಾಗಿ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಈ ಶಾಲೆಯ ಕಟ್ಟಡಕ್ಕೆ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ, ಎಂಎಲ್ಸಿ ಹಣಮಂತ ನಿರಾಣಿ ಅವರಿಂದ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅಶೋಕ ನಂದಿ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಎ.ಎಸ್.ಗುಬ್ಬಾ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ಫಾತಿಮಾ ಮಸೀದಿಯ ಚೇರಮನ್ ಮಹಿಬೂಬ ನಾಯ್ಕೋಡಿ, ಪತ್ರಕರ್ತ ಬಸವರಾಜ ನಂದಿಹಾಳ, ಶಿಕ್ಷಕ ಬಸನಗೌಡ ಪಾಟೀಲ ಇದ್ದರು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎನ್.ಎನ್.ಅಂಗಡಿ ಸ್ವಾಗತಿಸಿ, ವರದಿ ವಾಚಿಸಿದರು. ಲಕ್ಷ್ಮೀ ಕಳ್ಳಿಗುಡ್ಡ ನಿರೂಪಿಸಿದರು.ಕುಸಮಾ ಅಂಗಡಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ,ಮಕ್ಕಳ ತಾಯಂದಿರಿಗೆ ಬಹುಮಾನ ವಿತರಿಸಲಾಯಿತು. ಬಿಎಚ್ಎಂಎಸ್ ವಿದ್ಯಾರ್ಥಿ ಪುಷ್ಪಾ ಆಲಗೂರ, ವೈದ್ಯಕೀಯ ವಿದ್ಯಾರ್ಥಿ ಸೃಜಲ ದುಂಬಾಳಿ ಅವರನ್ನು ಸನ್ಮಾನಿಸಲಾಯಿತು.
ನಂತರ ಮಕ್ಕಳಿಂದ ಜರುಗಿದ ವಿವಿಧ ಮನರಂಜನ ನೃತ್ಯಗಳು ಜನಮನಸೂರೆಗೊಂಡವು.
Subscribe to Updates
Get the latest creative news from FooBar about art, design and business.
Related Posts
Add A Comment

