ಜಿಲ್ಲಾ ಕಾರಾಗೃಹದಲ್ಲಿ ಶುದ್ಧ ನೀರಿನ ಘಟಕ ಹಾಗೂ ಜಿಮ್ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಭರವಸೆ
ವಿಜಯಪುರ: ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ ವಿಜಯಪುರ 6ನೇ ಸ್ಥಾನದಲ್ಲಿದೆ ಎನ್ನುವುದು ಹೆಮ್ಮೆಯ ವಿಷಯ. ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಶುಕ್ರವಾರ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಈಗ 10 ಕೋಟಿ ಅನುದಾನದಲ್ಲಿ ದರ್ಗಾ ರಸ್ತೆಯಿಂದ ಇಟ್ಟಂಗಿ ಕ್ರಾಸ್ ವರೆಗೆ ಅಗಲೀಕರಣಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಡಲಾಗುವುದು ಎಂದರು.
ನಗರದಲ್ಲಿರುವ ಪುರಾತನ ಬಾವಿಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಸ್ವಚ್ಛಗೊಳಿಸಲಾಗುವುದು. ಇದರಿಂದ ನಗರಕ್ಕೆ ಉಂಟಾಗುವ ನೀರಿನ ಸಮಸ್ಯೆ ನೀಗಿಸಬಹುದು. ಈಗಾಗಲೇ ನಿರಂತರ ಕುಡಿಯುವ ನೀರಿನ ಯೋಜನೆ ಪೈಪ್ ಅಳವಡಿಕೆ ಮುಗಿದಿದೆ. ಆದರೆ, ಸಮರ್ಪಕ ನೀರಿನ ಕೊರತೆಯಿದ್ದು, ಅದಕ್ಕೆ ಶಾಸ್ವತ ಪರಿಹಾರ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿ ಓಪನ್ ಜಿಮ್ ಮಾಡಿದ್ದರಿಂದ ಕನಿಷ್ಠ 5-10 ವರ್ಷ ಆಯುಷ್ಯ ಹೆಚ್ಚಿಗೆ ಮಾಡಿರುವ ತೃಪ್ತಿಯಿದೆ. ಯುವಕರು, ಮಹಿಳೆಯರು, ವೃದ್ಧರಿಗೆ ಉದ್ಯಾನ್, ಜಿಮ್ ಉಪಯೋಗ ಆಗಿದೆ. ಕಾರಾಗೃಹ ಸಿಬ್ಬಂದಿಗಳಿಗೆ ಶುದ್ಧ ನೀರು, ಜಿಮ್ ವ್ಯವಸ್ಥೆ ಅವಶ್ಯಯಿತ್ತು. ಹೀಗಾಗಿ ನಮ್ಮ ಸಿದ್ಧಸಿರಿಯಿಂದ ಮಾಡಲಾಗಿದೆ ಎಂದು ತಿಳಿಸಿದರು.
ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.

