ವಿಜಯಪುರ: ಕಳೆದ 2024 ರ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಬಡವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರತಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ, ಸ್ವಿಸ್ ಬ್ಯಾಂಕ್ ನ ಕಪ್ಪು ಹಣ ತಂದು ಬಡವರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ನುಡಿದಂತೆ ನಡೆಯದೇ ದೇವರು, ಧರ್ಮದ ಮೊರೆ ಹೋಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗಳಿಂದ ಜನರ ಆದಾಯ ದ್ವಿಗುಣಗೊಂಡಿದೆ ಎಂದರು.
ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರಿಗೂ ಈ ಯೋಜನೆಗಳು ಅನುಕೂಲವಾಗಿವೆ. ರಾಜ್ಯದ ಸುಮಾರು ಏಳೂವರೆ ಕೋಟಿ ಜನಸಂಖ್ಯೆಯ ಪೈಕಿ ಅಂದಾಜು 3.5 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಬಡವರಿಗೆ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಐದು ಕೆಜಿ ಅಕ್ಕಿ ಜೊತೆಗೆ ಇನ್ನೈದು ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತಿದೆ. ಎರಡು ಕೋಟಿಗೂ ಅಧಿಕ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿವೆ. ಇನ್ನು ಯುವನಿಧಿ ಯೋಜನೆಯಡಿ ಸುಮಾರು ಎರಡು ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗೆ ಹತ್ತು ಹಲವು ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ ಎಂದರು.
ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ದೇವಸ್ಥಾನಗಳ ಹಣವನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದರು. ಆದರೆ, ವಾಸ್ತವದಲ್ಲಿ ದೇವಸ್ಥಾನ ಹಣ ಅನ್ಯ ಕಾರ್ಯಕ್ಕೆ ಬಳಸಲಾಗುತ್ತಿಲ್ಲ ಎಂದರು.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಬೆರೆಸಬಾರದು. ಈ ಹಿಂದೆ ಪಾಕಿಸ್ತಾನದ ಜೊತೆಗೆ ಎರಡು ಬಾರಿ ಯುದ್ದ ಮಾಡಿ ಗೆದ್ದಿದ್ದು ಕಾಂಗ್ರೆಸ್ ಅವಧಿಯಲ್ಲಿಯೇ. ಹೀಗಾಗಿ ದೇಶವಿರೋಧಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.
ಲಖ್ನೋ ರ್ಯಾಲಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ ಮಾಡಿದ ರ್ಯಾಲಿಯಲ್ಲಿ ಲಖ್ನೋ ರ್ಯಾಲಿಯ ಅರ್ಧದಷ್ಟು ಜನ ಸಹ ಇರಲಿಲ್ಲ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
ಅಡುಗೆ ಅನಿಲ ದರ ಏರಿಕೆಯಾಗಿದೆ. ಯುಪಿಎ ಅವಧಿಯಲ್ಲಿ ಕೇವಲ ನಾಲ್ಕುನೂರು ರೂಪಾಯಿ ಇದ್ದ ಅಡುಗೆ ಅನಿಲ ದರ ಇದೀಗ 1200 ರೂಪಾಯಿಗೆ ಏರಿಕೆಯಾಗಿದೆ. ಉಚಿತ ಸಿಲಿಂಡರ್ ನೀಡಿದ ಮೋದಿ ಸರ್ಕಾರ ಅದಕ್ಕೆ ಅನಿಲ ತುಂಬಿಸಲು ಹಣವೇ ನೀಡಲಿಲ್ಲ. ಹೀಗಾಗಿ ಜನ ಬೆಲೆ ಏರಿಕೆಯಿಂದ ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದೆ. ಲೋಕಸಭೆಯಲ್ಲೂ ಜನ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸುಭಾಸ ಛಾಯಾಗೋಳ, ಸುರೇಶ ಘೊಣಸಗಿ, ಸಾಹೇಬಗೌಡ ಬಿರಾದಾರ, ಗಂಗಾಧರ ಸಂಬಣ್ಣಿ, ವಸಂತ ಹೊನವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

