ಹೆಸ್ಕಾಂ ಕ್ಯಾಶ್ ಕೌಂಟರ್ ಆರಂಭಕ್ಕೆ ಸಾರ್ವಜನಿಕರ ಆಗ್ರಹ | ಮಾಸಿಕ ರೂ.೪೫-೫೦ ಲಕ್ಷ ಬಿಲ್ ಸಂಗ್ರಹ
– ಶಿವಾನಂದ ಮ.ಸಜ್ಜನ
ಕಲಕೇರಿ: ನೂತನ ತಾಳಿಕೋಟಿ ತಾಲೂಕಿನ ಕಲಕೇರಿಯು ಸುಮಾರು ೨೦ ಸಾವಿರ ಜನಸಂಖ್ಯೆ ಹೊಂದಿದೆ, ಸ್ಥಳೀಯ ಹೆಸ್ಕಾಂ ಶಾಖೆಯು ೧೮ ಹಳ್ಳಿಗಳ ಕೇಂದ್ರವಾಗಿದೆ, ಇಲ್ಲಿ ಪ್ರತಿ ತಿಂಗಳು ರೂ.೪೫-೫೦ ಲಕ್ಷಗಳ ಬಿಲ್ ಹಣ ಸಂಗ್ರಹವಾಗುತ್ತಿದ್ದು, ವಿಜಯಪುರ ಜಿಲ್ಲೆಯ ಕೊನೆ ಹಳ್ಳಿಗಳಲ್ಲಿ ಒಂದಾಗಿರುವ ಈ ಗ್ರಾಮದಲ್ಲಿ ಸುಮಾರು ೪ ವರ್ಷಗಳ ಹಿಂದೆ ಕ್ಯಾಶ ಕೌಂಟರ್ ನೂತನ ಕಟ್ಟಡ ಕಟ್ಟಲಾಗಿದ್ದು, ಇಲ್ಲಿಯವರೆಗೂ ಪ್ರಾರಂಭವಾಗದೇ ನೆನೆಗುದಿಗೆ ಬಿದ್ದಿದೆ.
ಈ ಕುರಿತು ಅನೇಕ ಬಾರಿ ಸ್ಥಳೀಯ ಹೋರಾಟಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅದು ಪ್ರಯೋಜನವಾಗಿಲ್ಲ. ಇಲ್ಲಿಯ ರೈತರು ಹಾಗೂ ಗ್ರಾಹಕರಿಗೆ ಯಾವುದೇ ಸಮಸ್ಯೆಯಾದರೆ ದೂರದ ಕೋರವಾರದ ಕಂದಾಯ ಶಾಖೆಗೆ ಹೋಗಿ ದೂರು ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಲಕೇರಿ ಹಾಗೂ ಸುತ್ತಲಿನ ೧೮ ಹಳ್ಳಿಗಳಿಂದ ಸುಮಾರು ೪೦-೫೦ಕಿ.ಮೀ ದೂರದಿಂದ ಕೋರವಾರಕ್ಕೆ ಹೋಗಿ ಬರಲು ಸಮಯಕ್ಕೆ ಸರಿಯಾದ ವಾಹನದ ವ್ಯವಸ್ಥೆ ಇರದೇ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಗ್ರಾಹಕರು ಕಲಕೇರಿಯಲ್ಲಿ ಕ್ಯಾಶ್ ಕೌಂಟರ್ ಪ್ರಾರಂಭವಾದರೆ ಅನುಕೂಲವಾಗುತ್ತದೆ ಎನ್ನುತ್ತಿದ್ದಾರೆ.
ಕಲಕೇರಿ ಶಾಖಾ ವ್ಯಾಪ್ತಿಗೆ ಸಂಬಂಧಪಟ್ಟಂತಹ ಕಲಕೇರಿ, ಆಸ್ಕಿ, ಬೆಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ತಾಳಿಕೋಟಿ ತಾಲೂಕಿನ ಅಧೀನದಲ್ಲಿ ಬರುತ್ತವೆ. ಇಲ್ಲಿಯ ಜನಸಾಮಾನ್ಯರು ಪ್ರತಿನಿತ್ಯ ತಮ್ಮ ವ್ಯಾಪಾರ ವಹಿವಾಟುಗಳಿಗೆ ತಾಳಿಕೋಟಿಗೆ ಹೋಗಿ ಬರುತ್ತಾರೆ ಆದರೆ ವಿದ್ಯುತ್ ಇಲಾಖೆಯ ಸಮಸ್ಯೆ ಉಂಟಾದರೆ ದೇವರಹಿಪ್ಪರಗಿ ಉಪ ವಿಭಾಗಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಆದಕಾರಣ ಕಲಕೇರಿ ಶಾಖೆಯನ್ನು ತಾಳಿಕೋಟಿ ಉಪವಿಭಾಗಕ್ಕೆ ಸೇರಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

