“ಜಯ್ ನುಡಿ” ( ವ್ಯಕ್ತಿತ್ವ ವಿಕಸನ ಮಾಲೆ )
– ಜಯಶ್ರಿ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

ಜಗತಿನಲ್ಲಿ ಎಲ್ಲರಿಗೂ ಒಂದೇ ಸಮನಾಗಿ ಸಿಗುವುದು ಸಮಯ ಮಾತ್ರ. ಬಡವನಿಗೂ ಒಂದೇ ಶ್ರೀಮಂತನಿಗೂ ಒಂದೇ. ಮಹಾನ ಸಾಧಕರಿಗೂ ಒಂದೇ ಸಾಮಾನ್ಯನಿಗೂ ಒಂದೇ. ಹೀಗೆ ಸಮನಾಗಿ ಸಿಗುವ ಈ ಸಮಯವನ್ನು ಬಳಸುವ ವಿಧಾನವು ವ್ಯಕ್ತಿಯ ಜೀವನದ ಗೆಲುವನ್ನು ಮೌಲ್ಯವನ್ನು ಹೆಚ್ಚಿಸುತ್ತದೆ. ಇಲ್ಲವೇ ಮೇಲಕ್ಕೆ ಏಳದಂತೆ ಕೆಳಕ್ಕೆ ಬೀಳಿಸುತ್ತದೆ. ಹಾಗೆಯೇ ಬಿಟ್ಟರೆ ಮಣ್ಣು ಮುಕ್ಕಿಸುತ್ತದೆ. ಸರಿಯಾಗಿ ಬಳಸಿದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ. ವ್ಯರ್ಥವಾಗಿ ಕಳೆದ ಸಮಯ ಬದುಕಿನಲ್ಲಿ ಪಾಠವಾಗುತ್ತದೆ. ಅಂದ ಹಾಗೆ ನಾನಿಲ್ಲಿ ಇಷ್ಟೆಲ್ಲ ಪೀಠಿಕೆ ಏಕೆ ಹಾಕುತ್ತಿದ್ದೇನೆ ಅಂದುಕೊಂಡಿರೇನು? ಅಂದುಕೊಂಡಿದ್ದನ್ನು ಅಂದುಕೊಂಡಷ್ಟು ಸುಲಭವಾಗಿ ಮಾಡಬಹುದು ಎಂದು ಸ್ಪಷ್ಟಪಡಿಸಲು. ಸಮಯದಿಂದಲೇ ಕಂಡ ಕನಸುಗಳನ್ನು ನನಸಾಗಿಸಬಲ್ಲೆವು ಎಂದು ಹೇಳಲು.
ಭಿನ್ನ ವಿಭಿನ್ನ ಅಭಿಮತ
ಅಂದುಕೊಂಡಿರುವ ಎಲ್ಲದಕ್ಕೂ ಸಮಯವನ್ನು ಎತ್ತಿಟ್ಟು ಅಂದುಕೊಂಡಿದ್ದನ್ನು ನಿರ್ವಹಿಸುವುದು ನಾವು ಅಂದುಕೊಂಡಷ್ಟು ಸರಳವಲ್ಲ. ಅನ್ನೋದು ಬಹುತೇಕರ ಅಂಬೋಣ. ಅದು ನಿಜವೂ ಕೂಡ ಅನ್ನೋದು ಹಲವರ ಒಪ್ಪಿಗೆಯೂ ಸಹ. ಅಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಅದಕ್ಕಾಗಿ ಸಾಕಷ್ಟು ಚಿಂತಿಸುತ್ತಿದ್ದೇನೆ ಎನ್ನುವುದು ಕೆಲವರ ನೋವು. ಹಾಗೇನಿಲ್ಲ ಕೆಲವೊಂದು ದಿನಗಳಲ್ಲಿ ಅಂದುಕೊಂಡಿದ್ದೆಲ್ಲವನ್ನು ಸಲೀಸಾಗಿ ಮಾಡಿದ್ದುಂಟು ಎಂಬುದು ಹಲವರ ಸ್ವಾನುಭವದ ಮಾತು. ಇಷ್ಟೆಲ್ಲ ಭಿನ್ನ ವಿಭಿನ್ನ ಅಭಿಮತಗಳು ಇರುವಾಗ ಯಾವುದು ಸರಿ ಅನ್ನುವ ಗೊಂದಲಕ್ಕೆ ಬಿದ್ದೇ ಬೀಳುತ್ತದೆ ಮನಸ್ಸು. ಅಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎಂಬ ನೈಜ ಸಂಗತಿಯನ್ನು ಮುಚ್ಚುಮರೆಯಲ್ಲಿಡುವುದು ಮುಂಬರುವ ಕಷ್ಟಗಳಿಗೆ ಆಹ್ವಾನ. ಇದೆಲ್ಲ ಸೇರಿ ಹತಾಶವಾದ ಮನಸ್ಸಿಗೆ ಸಂತೋಷ ಭರವಸೆಗಳೆಲ್ಲವೂ ಸೋರಿ ಹೋದಂತೆ ಅನಿಸತೊಡಗುತ್ತದೆ. ಮುಂದೆಲ್ಲ ಕತ್ತಲೆಯೇ ಕಾದಿದೆಯೇನೋ ಎಂದೆನಿಸಿ ಮನಸ್ಸು ದುಃಖಿಸುತ್ತದೆ. ಹಾಗಾದರೆ ಆ ದುಃಖ ಶಮನಕ್ಕೆ, ಕಂಡ ಕನಸುಗಳನ್ನೆಲ್ಲ ನನಸಾಗಿಸುವ ವಿಧಾನಕ್ಕೆ ಉತ್ತರ ಹುಡುಕಲು ಕೆಲವು ಸಲಹೆ ಸೂಚನೆಗಳನ್ನು ನೋಡೋಣ ಬನ್ನಿ.
ಸ್ವಯಂ ನಂಬಿಕೆ ಸಾಕು
ಪ್ರಪಂಚದ ಅತಿ ದೊಡ್ಡ ಗುರು ಎಂದರೆ ಸಮಯ ಏಕೆಂದರೆ ಅದು ಎಲ್ಲವನ್ನೂ ಕಲಿಸುತ್ತದೆ. ಒಂದು ದೊಡ್ಡ ಸಂಗತಿಯೆಂದರೆ ಒಂದೇ ಸಮಯದಲ್ಲಿ ಎರಡು ವಿಭಿನ್ನ ಆಲೋಚನೆಗಳ ಬಗ್ಗೆ ನಾವು ಚಿಂತಿಸಲು ಎಂದೂ ಸಾಧ್ಯವಿಲ್ಲ. ಒಂದು ಸಮಯಕ್ಕೆ ಒಂದೇ ಕೆಲಸ ಎಂಬ ನಿಯಮ ಪಾಲಿಸಿ.‘ನಿಮ್ಮ ಮೇಲೆ ನೀವು ಅವಲಂಬಿಸಿ ಹಾಗೂ ಧೈರ್ಯ ನಿಮ್ಮೊಳಗೆ ಹುಟ್ಟಬೇಕೆಂಬುದನ್ನು ತಿಳಿಯಿರಿ. ಅದು ಸಮಯ ತೆಗೆದುಕೊಳ್ಳುತ್ತದೆ. ಅದರೆ ನೀವು ಅದಕ್ಕಾಗಿ ಕೆಲಸ ಮಾಡಲೇಬೇಕು.’ ಎನ್ನುತ್ತಾರೆ ಸುಧಾ ಮೂರ್ತಿ. ಇನ್ನೂ ಮುಂದುವರಿದು ಅವರು ಹೇಳಿದ ಮಾತುಗಳು ಇನ್ನಷ್ಟು ಅರ್ಥಪೂರ್ಣ. ‘ಸ್ವತಂತ್ರವಾಗಿರಲು ಪ್ರಯತ್ನಿಸಿ, ನಿಮ್ಮಲ್ಲಿ ಆ ಶಕ್ತಿ ಇದೆ ಎಂಬುದನ್ನು ಅರಿಯಿರಿ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ನೀವು ಪ್ರಯತ್ನಿಸುತ್ತಲೇ ಇದ್ದರೆ ಸಾಧ್ಯ.’ ನೀವು ಕಾಣುತ್ತಿರುವ ಕನಸನ್ನು ನೀವು ನಂಬಿದರೆ ಸಾಕು. ಬೇರೆಯವರ ಒಪ್ಪಿಗೆ ಅವರು ಕೊಡುವ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ.
ಕೊಳ್ಳಲಾಗದ ವಸ್ತು
ಸಮಯವು ಹಣಕ್ಕಿಂತ ಹೆಚ್ಚು ಏಕೆಂದರೆ ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬಹುದು. ಆದರೆ ಒಮ್ಮೆ ಕಳೆದ ಸಮಯವನ್ನು ಎಂದಿಗೂ ಗಳಿಸಲಾಗುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಜಗತ್ತಿನ ನಂಬರ್ ಒನ್ ಶ್ರೀಮಂತ ಕೂಡ ಕಳೆದು ಹೋದ ಸಮಯವನ್ನು ಖರೀದಿಸಲಾರ. ಅಂದರೆ ಪ್ರಪಂಚದಲ್ಲಿ ಹಣದಿಂದ ಕೊಳ್ಳಲಾಗದ ವಸ್ತು ಸಮಯವೊಂದೇ. ಹೀಗಾಗಿ ‘ನನ್ನ ಸಮಯ ಅಮೂಲ್ಯ’ ಎಂಬ ಫಲಕವನ್ನು ತೂಗು ಹಾಕಿಕೊಂಡು ಕೆಲಸ ಮಾಡುವುದು ಒಳ್ಳೆಯದು. ಗೆಳೆಯರಿಗೆ ಆತ್ಮೀಯರಿಗೆ ಕಂಡ ಕಂಡವರಿಗೆ ಮತ್ತೆಂದೂ ಮರಳಿ ಸಿಗದ ಸಮಯವನ್ನು ಸಿಕ್ಕ ಸಿಕ್ಕ ಹಾಗೆ ನೀಡಬಾರದು. ಹಾಗೆ ನೀಡಿದರೆ ನೀವು ಕಂಡ ಕನಸಿಗೆ ನೀವೇ ಕೊಳ್ಳಿ ಇಟ್ಟಂತೆಯೇ ಸರಿ.
ಪ್ರಭಾವಿಸುವ ಶಕ್ತಿ
ನಮ್ಮ ಹಿರಿಯ ತಲೆಮಾರಿನವರು ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಬೇಕಿತ್ತು. ಹಾಗಿದ್ದಾಗ್ಯೂ ಅವರು ತಮ್ಮ ಯಾವುದೇ ಜವಾಬ್ದಾರಿಗೂ ಬೆನ್ನು ತೋರುತ್ತಿರಲಿಲ್ಲ. ಅಂದುಕೊಂಡಂತೆ ಹೊತ್ತ ಎಲ್ಲ ಹೊಣೆಗಳನ್ನು ನಿಗದಿತ ಮತ್ತು ಸೀಮಿತ ಅವಧಿಯಲ್ಲಿ ಮಾಡಿ ಮುಗಿಸುತ್ತಿದ್ದರು.ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದರು. ಏಕೆಂದರೆ ಅವರಿಗೆ ಸಮಯದ ಮಹತ್ವ ಗೊತ್ತಿತ್ತು. ಸಿಕ್ಕಾಪಟ್ಟೆ ವೇಗದ ದುನಿಯಾದಲ್ಲಿ ಬದುಕುತ್ತಿರುವ ನಮಗೆ ಅಂದುಕೊಂಡದ್ದನ್ನು ಹೊತ್ತುಕೊಂಡದ್ದನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹಿರಿಯರಿಗೆ ಹೋಲಿಸಿದರೆ ಪ್ರಸ್ತುತ ನಮ್ಮ ಸವಾಲುಗಳು ಬಹಳ ಚಿಕ್ಕವು. ಹಿಂದೆಲ್ಲ ಯುವಕರು ಎದುರಿಸಿದ ಸಮಸ್ಯೆಗಳನ್ನು ಇಂದಿನ ಯುವಜನಾಂಗ ಎದುರಿಸಿಲ್ಲ. ಅದು ಅಪ್ಪ ಅಮ್ಮನ ಪ್ರೋತ್ಸಾಹದಲ್ಲಿ ಬೆಳೆಯುತ್ತಿರುವ ಮುದ್ದು ಮಕ್ಕಳಾದ್ದರಿಂದ ಇರಬಹುದು. ಶ್ರಮ ಮತ್ತು ಸಮಯ ಕಾಲದ ಚೌಕಟ್ಟಿನಿಂದ ಮರೆಯಾಗುತ್ತಿದ್ದಂತೆ ಭಾಸವಾಗುತ್ತಿದೆ. ಬದುಕನ್ನು ಪ್ರಭಾವಿಸುವ ಶಕ್ತಿ ಸಮಯಕ್ಕಿದೆ. ಅದಕ್ಕೆಂದೇ ಅಲ್ಲವೇ ಸಾದಕರು ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಹೇಳುವುದು. ಆಹಾರ ವಿಹಾರ ವ್ಯಾಯಾಮಕ್ಕೆಂದು ಸಮಯ ಮೀಸಲಿಟ್ಟರೆ ಸಮಯವೆಂಬ ಶಕ್ತಿ ಅಗಾಧವಾಗಿ ಪ್ರಭಾವಿಸಿ ಗೆಲ್ಲಿಸುತ್ತದೆ.
ನಿಗದಿಪಡಿಸಿ
ಬಹಳಷ್ಟು ಸಮಯದಿಂದ ನೀವು ಅಂದುಕೊಂಡಿದ್ದು ಆಗುತ್ತಿಲ್ಲವೆಂದರೆ ನೀವು ಅಂದುಕೊಂಡಿದ್ದಕ್ಕೆ ದೈನಂದಿನ ಕೆಲಸಗಳ ಪಟ್ಟಿಯಲ್ಲಿ ಸಮಯವನ್ನು ನಿಗದಿಪಡಿಸಿಲ್ಲ ಅಂತಲೇ ಅರ್ಥ. ಸಮಯವನ್ನು ನಿಗದಿಪಡಿಸಿದರೆ ಅದು ಹಾಗೆ ಉಳಿಯಲು ಸಾದ್ಯವಿಲ್ಲ. ಸಮಯವೆಂಬುದು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಳೆದುಹೋಗುತ್ತದೆ. ಆಸೆ ಬಯಕೆ ಗುರಿಗಳನ್ನು ಸಾಧಿಸಲು, ಸಮಯ ಪಾಲನೆ ತುಂಬಾ ಮುಖ್ಯ. ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಸಮಯಕ್ಕೆ ಮಾತ್ರ ಇದೆ. ಆದ್ದರಿಂದಲೇ ಅದು ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವ ಆಭರಣವಾಗಿದೆ. ಸಮಯದ ಮೇಲೆ ನಿಯಂತ್ರಣವಿಲ್ಲದಿದ್ದರೆ ಪ್ರತಿಯೊಂದರಲ್ಲೂ ಒತ್ತಡ ಸಹಜವಾಗಿ ಉಂಟಾಗುತ್ತದೆ. ದೈನಂದಿನ ಜೀವನದಲ್ಲಿ ಯಾವುದೇ ಒತ್ತಡಕ್ಕೆ ಕಾರಣಗಳನ್ನು ಹುಡುಕಿದರೂ ಅದು ಸಮಯ ನಿರ್ವಹಣೆಯ ಸಮಸ್ಯೆಯ ಕಾರಣದಿಂದಲೇ ಎನ್ನುವುದು ಸ್ಪಷ್ಟವಾಗುತ್ತದೆ. ಸಮಯ ನಿರ್ವಹಣೆಯ ಕೌಶ್ಯಲ್ಯವಿಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸವಾಲುಗಳು ಉಂಟಾದಲ್ಲಿ ಅಚ್ಚರಿಪಡಬೇಕಾಗಿಲ್ಲ. ಹೀಗಾಗದಂತೆ ಸಂಯಮ ವಿವೇಚನೆಯಿಂದ ಸಮಯ ನಿರ್ವಹಿಸುವುದು ಉತ್ತಮ. ಅದು ಅಪೇಕ್ಷಣೀಯ ಕೂಡ.
ಕೊನೆ ಹನಿ
ಜೀವನ ಎಂದರೇನು ಅಂತ ಹೇಳಲು ಒಂದು ಮಾತಿನಲ್ಲಿ ತೋಚುವುದಿಲ್ಲ. ಆದರೆ ಬಲ್ಲವರು ಮಹಾತ್ಮರು ಜೀವನವೆಂದರೆ ಸಮಯ ಎಂದಿದ್ದಾರೆ. ಸಮಯವೆಂಬ ಹಣವನ್ನುಪಯೋಗಿಸಿ. ಪ್ರಯತ್ನಶೀಲರಾದರೆ ಜೀವನ ಹೂಬನವಾಗುವುದು. ಕಂಡ ಕನಸುಗಳ ಮೊಗ್ಗುಗಳು ನನಸಾಗಿ ಅರಳುವವು. ಸಮಯವು ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವ ಆಭರಣವೂ ಆಗುವುದು.

– ಜಯಶ್ರಿ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨