ಬೆಂಗಳೂರು: ಹತ್ತು ಅಶ್ವಶಕ್ತಿಗೂ ಅಧಿಕ ಸಾಮರ್ಥ್ಯದ ವಿದ್ಯುತ್ ಮಗ್ಗ ನೇಕಾರರಿಗೆ ಈ ಮೊದಲಿನಂತೆ ಯೂನಿಟ್ ಗೆ ೧.೨೫ ರೂ. ನಿಗದಿಪಡಿಸಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ
ಪ್ರಶ್ನೋತ್ತರ ಅವಧಿಯಲ್ಲಿ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದರಿಂದ ಹತ್ತು ಅಶ್ವಶಕ್ತಿ ಸಾಮರ್ಥ್ಯದ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹತ್ತು ಅಶ್ವಶಕ್ತಿಗೂ ಅಧಿಕ ಸಾಮರ್ಥ್ಯದ ವಿದ್ಯುತ್ ಕೈ ಮಗ್ಗಗಳಿಗೆ ಈ ಮೊದಲು ನಿಗದಿಪಡಿಸಿದ್ದ ದರವನ್ನೇ ಜಾರಿಗೆ ತರುವ ಬಗ್ಗೆ ಇಂಧನ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಪರಿಶೀಲಿಸಲಾಗುವುದು ಎಂದು ಹೇಳಿದರು.
ಶಾಲಾ ಸಮವಸ್ತ್ರ ಪೂರೈಕೆಗೆ ಈ ಮೊದಲು ಆದೇಶ ನೀಡಲಾಗಿತ್ತು. ಆದರೆ ಗುಣಮಟ್ಟ ಕಳಪೆಯಾಗಿದ್ದರಿಂದ ಆದೇಶ ಹಿಂತೆಗೆದುಕೊಳ್ಳಲಾಗಿತ್ತು. ಬಟ್ಟೆ ಸರಬರಾಜಿಗೆ ಪುನಃ ಅವಕಾಶ ನೀಡುವ ಬಗ್ಗೆ ಚಿಂತನೆ ಇದೆ ಎಂದು ತಿಳಿಸಿದರು.
ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ನೇಕಾರರ ಸಂಖ್ಯೆ ಕಡಿಮೆಯಾಗಿದೆ. ನೇಕಾರರ ನಿಖರ ಸಂಖ್ಯೆ ಅರಿಯಲು ಜನಗಣತಿ ಮಾಡಿಸುವ ಬೇಡಿಕೆಯನ್ನು ಪರಿಗಣಿಸಲಾಗುವುದು.
ನೇಕಾರರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಡಿಬಿಟಿ ಮೂಲಕ ವಾರ್ಷೀಕ ಐದು ಸಾವಿರ ರೂಗಳನ್ನು ಪಾವತಿ ಮಾಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕೈಮಗ್ಗ ವಿಕಾಸ ಯೋಜನೆಯಲ್ಲಿ ಕೈಮಗ್ಗ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಘಟಕ ವೆಚ್ಚದ ಪ್ರತಿಶತ ೫೦ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಒಟ್ಟು ೭೦ ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
