ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ತಗ್ಗಿಸಿ ವೈಜ್ಞಾನಿಕ ಕ್ರಮಗಳ ಮೂಲಕ ವಾರ್ಷಿಕ ೬೦೦ ಕೋಟಿ ರೂ. ಲಾಭ ತರುವ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನಷ್ಟ ಭರಿಸಲು ಸಾರ್ವಜನಿಕರ ಮೇಲೆ ಹೊರೆ ಹೇರುವ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಹುನ್ನಾರದಿಂದ ಹಿಂದೆ ಸರಿಯಬೇಕು ಎಂದು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಜಿಲ್ಲಾಡಳಿತ ಮೂಲಕ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇಂಧನ ಸಚಿವರಿಗೆ, ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಹಾಗೂ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ವಿದ್ಯುತ್ ದರ ಏರಿಕೆ ಕುರಿತು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ವಿದ್ಯುತ್ಚಕ್ತಿ ಆಯೋಗ ವಿದ್ಯುತ್ ದರ ಏರಿಕೆ ಪ್ರಸ್ತಾಪದ ಬದಲು, ಕಂಪನಿಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕ್ರಮಗಳು ಹಾಗೂ ಸೋರಿಕೆ ತಡೆಗೆ ಮುಂದಾಗಬೇಕು. ಇದರಿಂದ ವಿದ್ಯುತ್ ಕಂಪನಿಗಳು ನಷ್ಟದ ಬದಲು ವಾರ್ಷಿಕ ೬೦೦ ಕೋಟಿ ರೂ. ಲಾಭ ತರಲು ಸಾಧ್ಯವಿದೆ. ಹೀಗಾಗಿ ದರ ಏರಿಕೆ ಪ್ರಸ್ತಾಪ ಕೈ ಬಿಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಮಲ್ಲಿಕಾರ್ಜುನ, ಕಾಳಪ್ಪಾ ಕಪಾಳಿ, ಯುವರಾಜ ಚೋಳಕೆ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕನ್ನೂರು, ಉಪಾಧ್ಯಕ್ಷ ನಿಹಾದ್ ಅಹಮದ್ ಗೋಡಿಹಾಳ, ಸಹ ಕಾರ್ಯದರ್ಶಿ ರಮಜಾನ್ ರಜಾಕಸಾಬ್ ಶೇಖ್, ಖಜಾಂಚಿ ಅಮರೇಶ ತಿಲಿಯಾಳ, ಶಶಿಕಾಂತ ಹೂರಾಗರ, ಬಾದಶಾ ಪಠಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
