ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ವಿತರಣಾ ತೊಟ್ಟಿ-೧ ಎ ರ ಕಾಜಿಬೀಳಗಿ ಪಶ್ಚಿಮ ಕಾಲುವೆಯ ವಿತರಣಾ ಕಾಲುವೆ-೧೦ ರ ಮೇನ್ ಮತ್ತು ವಿತರಣಾ ಕಾಲುವೆ ೧೧ ರ ನಿರ್ಮಾಣಕ್ಕಾಗಿ ಅನೇಕ ರೈತರ ಜಮೀನುಗಳನ್ನು ೨೦೨೦ ರಲ್ಲಿ ಕೇವಲ ಭೂಸ್ವಾಧಿನ ನೋಟಿಸ್ ಕೊಟ್ಟು ಕೆಲಸ ಮುಗಿಸಿ ಇಲ್ಲಿಯವರೆಗೆ ಬೂಮಿ ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ, ಬೇಗ ಕೊಡಿಸಿ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಕಾಮಗಾರಿ ಪ್ರಾರಂಭಕ್ಕೂ ಮೊದಲೇ ರೈತರಿಗೆ ಹಣ ಬಿಡುಗಡೆ ಮಾಡಿ ನಂತರ ಕಾಮಗಾರಿ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಿ ಗುತ್ತಿಗೆದಾರರು ತಮ್ಮ ಕೆಲಸ ಬೇಗ ಮುಗಿಸಿ ಬಿಲ್ ಪಡೆದುಕೊಳ್ಳುವ ತರಾತುರಿಯಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಭೂಮಿ ಕಳೆದುಕೊಂಡ ರೈತರು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯವರಿಗೂ ಯಾವುದೇ ಪ್ರಯೋಜನ ಆಗಿರುವುದಿಲ್ಲ, ಆದ್ದರಿಂದ ಕೂಡಲೇ ರೈತರಿಗೆ ಭೂ ಪರಿಹಾರ ಒದಗಿಸಿಕೊಡಬೇಕು, ಇಲ್ಲದಿದ್ದಲಿ ಎಲ್ಲಾ ರೈತರು ಸೇರಿಕೊಂಡು ಕಾಲುವೆಗಳನ್ನು ಮುಚ್ಚಿ ಹೋರಾಟ ಮಾಡಬೇಕಾಗುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಮನವಿ ಸ್ವೀಕರಿಸಿ ಮಾತನಾಡುತ್ತಾ, ಇಲ್ಲಿಯವರೆಗೆ ರೈತರಿಗೆ ಭೂ ಸ್ವಾಧಿನದ ಹಣ ಬರದಿರುವುದನ್ನು ಸರಕಾರಕ್ಕೆ ತಿಳಿಸಿ ಹಣ ಮಂಜೂರಾಗುವಂತೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಮಹಿಳಾ ಅಧ್ಯಕ್ಷೆ ರೇಖಾ ಪಾಟೀಲ ಸೇರಿದಂತೆ ತಾಲೂಕುಗಳ ಅಧ್ಯಕ್ಷರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

