೬೨೦ ಕಿ.ಮೀ ದೂರದ ಹೊಸ ರೈಲ್ವೆ ಮಾರ್ಗ | ಫಲಿಸದ ನೂತನ ರೈಲ್ವೆ ಮಾರ್ಗ ನಿರ್ಮಾಣ ಹೋರಾಟ ಸಮೀತಿ ಮನವಿ
ಕೊಲ್ಹಾರ: ಎರಡು ದಶಕಗಳ ಕಾಲದಿಂದ ಕೇಂದ್ರ ಸರಕಾರದ ಗಮನ ಸೆಳೆಯುತ್ತಿರುವ ಬಹುನಿರೀಕ್ಷಿತ ಶೇಡಬಾಳ, ಕೂಡಗಿ, ಯಾದಗಿರಿ, ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ತಲುಪುವ ಹೊಸ ರೈಲ್ವೆ ಮಾರ್ಗದ ಸಮೀಕ್ಷೆ ಕಾರ್ಯ (ಸರ್ವೇ) ಕನಸು ನನಸಾಗದೇ ಇರುವದು ಈ ಭಾಗದ ಜನರ ಪಾಲಿನ ದೌರ್ಭಾಗ್ಯವಾಗಿದೆ.
ಕೇಂದ್ರ ಸರಕಾರವು ಉಡಾನ್ ಯೋಜನೆಯ ಮೂಲಕ ಮೂಲೆ ಮೂಲೆಗೆ ವಿಮಾನ ಸೇವೆ ಸಾಗರಮಾಲಾ ಯೋಜನೆಯ ಮೂಲಕ ನೌಕಾ ಸಂಪರ್ಕ (ಹಡಗು), ಪರ್ವತಮಾಲಾ ಯೋಜನೆ ಅಡಿಯಲ್ಲಿ ನಾಲ್ಕು ದಿಕ್ಕಿನಿಂದ ಭೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕ ಕ್ಷೇತ್ರಕ್ಕೆ ಅನುಕೂಲಮಾಡಿರುವದು ಮುಂದೆ ಮಾಡುವುದು ಕೂಡ ಸ್ವಾಗತಾರ್ಹ ವಿಷಯವಾಗಿದೆ.
ಆದರೆ ದಕ್ಷಿಣ ಭಾರತದ ಮಧ್ಯ ಭಾಗದಲ್ಲಿ ರೈಲ್ವೆ ಯೋಜನೆಗಳು ಅಷ್ಟಾಗಿ ಸಂಪರ್ಕದ ಕೊಂಡಿಯಾಗಿ ಜನರಿಗೆ ಹತ್ತಿರವಾಗುವಲ್ಲಿ ಕೇಂದ್ರ ಸರಕಾರದ ಆಡಳಿತ ವ್ಯವಸ್ಥೆಯ ಅಧಿಕಾರಿಗಳ ಜವಾಬ್ದಾರಿ ಕೊರತೆಯೋ, ಅಥವಾ ನಮ್ಮನ್ನಾಳುವ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅಭಿವೃದ್ದಿ ದಿಸೆಯತ್ತ ಸೌಲಭ್ಯ ಕಲ್ಪಿಸಿಕೊಡಬೇಕು ಎನ್ನುವ ತಾತ್ಸಾರ ಮನೋಭಾವವೋ ತಿಳಿಯದಾಗಿದೆ. ಕಾರಣ ರೈಲ್ವೆ ಸಂಪರ್ಕವು ಸಮಾಜದ ಅತ್ಯಂತ ಕಡು ಬಡವರಿಗೂ ಮಧ್ಯಮ ವರ್ಗದವರಿಗೂ, ಶ್ರೀಮಂತರಿಗೂ ಅನುಕೂಲಕರವಾದ ಸಾರ್ವಜನಿಕ ಸೇವೆಯ ಬಹು ಉಪಯೋಗವಾಗುವ ಭೂ ಸಂಪರ್ಕ ಸಾಧನವಾಗಿದೆ.
ಗೋವಾ, ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಪಂಚ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪ್ರದೇಶದ ಮಧ್ಯ ಭಾಗದಲ್ಲಿ ಬರುವ ಮೀರಜ್, ಶೇಡಬಾಳ, ಕೊಲ್ಹಾರ, ಕೂಡಗಿ, ಬಸವನ ಬಾಗೇವಾಡಿ, ಯಾದಗಿರಿ, ಶ್ರೀಶೈಲ ಪೀಠದವರೆಗೆ ಸರಿ ಸುಮಾರು ೬೨೦ ಕಿ.ಮೀ ದೂರದ ಹೊಸ ರೈಲ್ವೆ ಮಾರ್ಗವನ್ನು ಕಾರ್ಯಗತಗೊಳಿಸಬೇಕು ಎಂದು ಶೇಡಬಾಳ-ಯಾದಗಿರಿ ನೂತನ ರೈಲ್ವೆ ಮಾರ್ಗ ನಿರ್ಮಾಣ ಹೋರಾಟ ಸಮೀತಿಯವರು ಮಮತಾ ಬ್ಯಾನರ್ಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮತ್ತು ಇವತ್ತಿನವರೆಗೂ ಕಾರ್ಯನಿರ್ವಹಿಸುವ ರೈಲ್ವೆ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸುತ್ತಾ ಬಂದರೂ ಇದುವರೆಗೂ ಪ್ರಯೋಜನವಾಗುತ್ತಿಲ್ಲ.
ಈ ಮಾರ್ಗದ ಅವಶ್ಯಕತೆ ಇರುವದು ಎನ್ನುವದನ್ನು ಹಾಗೂ ಶ್ರೀಶೈಲ ಪೀಠದ ಜಗದ್ಗುರು ಡಾ|| ಚನ್ನಸಿದ್ದರಾಮ ಶಿವಾಚಾರ್ಯ ಅವರ ಆಸೆಯಂತೆ ಶ್ರೀಶೈಲ ಪುಣ್ಯಕ್ಷೇತ್ರದವರೆಗೆ ಪಶ್ಚಿಮದಿಂದ ಪೂರ್ವ ದಿಕ್ಕಿನಡೆಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಾರ್ವಜನಿಕರಿಗೆ ಉಪಯುಕ್ತವಾಗುವ ಮತ್ತು ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಈ ಭಾಗದ ರೈತರ ವಾಣಿಜ್ಯ ಬೆಳೆಗಳಿಗೆ ಸರಕು ಸಾಮಾನುಗಳನ್ನು ಹೊತ್ತುಕೊಂಡು ಹೋಗಲು ಅತೀ ಸಮೀಪದ ಸಂಪರ್ಕ ಸಾಧನವಾಗುವ ಶೇಡಬಾಳ-ಯಾದಗಿರಿ ರೈಲ್ವೆ ಮಾರ್ಗ ಕನಸಾಗದೇ ಉಳಿಯಬಾರದು. ನನಸಾಗಲು ಜನಪ್ರತಿನಿಧಿಗಳು ಸಂಘಟಣೆಯವರು ಸಮಾಜ ಸೇವಕರು ಕಾರ್ಯೋನ್ಮುಖರಾಗಬೇಕೆಂದು ಹೋರಾಟ ಸಮೀತಿಯವರ ಆಶಯವಾಗಿದೆ.
ಮಾರ್ಗ: ಶೇಡಬಾಳ-ಅಥಣಿ-ಕೊಕಟನೂರ-ಸಾವಳಗಿ-ಮಮದಾಪೂರ ಬಬಲೇಶ್ವರ ಮಧ್ಯಭಾಗ- ಕೊಲ್ಹಾರ- ಕೂಡಗಿ- ಬಸವನ ಬಾಗೇವಾಡಿ- ತಾಳಿಕೋಟಿ- ಹುಣಸಗಿ-ಸುರಪುರ- ಹತ್ತಿಗುಡೂರ- ಯಾದಗಿರಿ ಮಾರ್ಗವಾಗಿ ಶ್ರೀಶೈಲ ಪೀಠದವರಗೆ ನೂತನ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಅದರ ಜೊತೆಯಲ್ಲಿ ಆದಾಯ ತರುವ ಗೂಡ್ಸ್ ರೈಲುಗಳ ಸಂಚಾರವೂ ಇರಬೇಕು.

