ದ.ರಾ.ಬೇಂದ್ರೆ ಹಾಗೂ ಡಾ.ಚಂದ್ರಶೇಖರ ಕಂಬಾರ ಜನ್ಮದಿನಾಚರಣೆ | ಬೇಂದ್ರೆ ಹಾಗೂ ಕಂಬಾರರ ಕಾವ್ಯಗಳ ಅನುಸಂಧಾನ
ಸಿಂದಗಿ: ಕಂಬಾರರ ಸಾಹಿತ್ಯ ಜನಪದದ ಮೂಲದಿಂದ ಹುಟ್ಟಿದ್ದು ಅವರ ಇಡಿ ಸಾಹಿತ್ಯ ಜನಪದೀಯ ತಳಹದಿಯ ಮೇಲೆ ನಿಂತಿದೆ ಎಂದು ಶ್ರೀ ಪದ್ಮರಾಜ ಮಹಿಳಾ ಪಪೂ ಕಾಲೇಜಿನ ಉಪನ್ಯಾಸಕಿ ಹೇಮಾ ಹಿರೇಮಠ ಹೇಳಿದರು.
ಪಟ್ಟಣದ ಸಿಎಂ ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ದ.ರಾ.ಬೇಂದ್ರೆ ಹಾಗೂ ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಬೇಂದ್ರೆ ಹಾಗೂ ಕಂಬಾರರ ಕಾವ್ಯಗಳ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದೆ. ಕಂಬಾರರ ಕಾವ್ಯಗಳ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಡಾ.ನಾಗರಾಜ ಮುರುಗೋಡ ಮಾತನಾಡಿ, ದ.ರಾ.ಬೇಂದ್ರೆಯವರ ಬದುಕಿನ ಪಯಣ ಸಾಕಷ್ಟು ನೋವಿನಿಂದ ಕೂಡಿದ್ದು, ಅವರ ನೋವು ನಲಿವಿನ ಜೀವನವನ್ನು ತಾವೆಲ್ಲರೂ ಅವರ ಸಾಹಿತ್ಯದ ಮುಖಾಂತರ ತಿಳಿದುಕೊಳ್ಳಬಹುದು. ಬೇಂದ್ರೆ ಅವರ ಸರಳ ಬದುಕು ಶ್ರೇಷ್ಠ ಜೀವನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಅಧ್ಯಕ್ಷೀಯ ಮಾತುಗಳನ್ನಾಡಿದರು. ಡಾ.ಅರವಿಂದ ಮನಗೂಳಿ, ಐ.ಕ್ಯೂ.ಎ.ಸಿ.ಸಂಯೋಜಕ ಡಾ.ಅಂಬರೀಶ ಬಿರಾದಾರ, ಬಿ.ಡಿ.ಮಾಸ್ತಿ, ಎಸ್.ಕೆ ಹೂಗಾರ, ಸತೀಶ ಬಿರಾದಾರ, ಮಾಂತೇಶ ಸುಂಗಠಾಣ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ರಾಹುಲ ಕಾಂಬಳೆ, ಯಲ್ಲಾಲಿಂಗ ಕಂಬಾರ, ದಾನಮ್ಮ ಕಾರ್ಯಕ್ರಮ ನಿರ್ವಹಿಸಿದರು.

