ಮುದ್ದೇಬಿಹಾಳ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನ ಅವ್ಯವಹಾರ ತನಿಖೆಗಾಗಿ ಮತ್ತು ಪಟ್ಟಣದ ಅಂಬೇಡ್ಕರ್ ವೃತ್ತದ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಯ ಅಪೂರ್ಣವಾದ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಯಾವುದೇ ಕ್ರಮವಾಗದ ಹಿನ್ನೆಲೆ ಫೆ.೨ ರಂದು ಮುಖ್ಯಮಂತ್ರಿಗಳ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧರಾಗಿದ್ದೇವೆ ಎಂದು ಡಿ.ಎಸ್.ಎಸ್.ಮುಖಂಡ ಹರೀಶ ನಾಟೆಕಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಗಾರ್ಡನ್ ನಲ್ಲಿ ವಿವಿಧ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ಬಂದಾಗಿನಿಂದ ಪ್ರತೀ ಮಾತಿಗೆ ಡಾ.ಬಾಬಾ ಸಾಹೇಬರ, ಬಸವಣ್ಣನವರ ಹೆಸರು ಹೇಳುವ ಇವರು, ಮೂರ್ತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ. ಸಿಎಂ ಬರಲು ಇನ್ನೂ ಎರಡು ದಿನ ಇದೆ. ಕೂಡಲೇ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ದಿದ್ರೆ ನಾವು ಹೋರಾಟ ಮುಂದುವರೆಸುತ್ತೇವೆ. ನಮ್ಮನ್ನು ಬಂಧಿಸಿದರೂ ಜೈಲಿನಲ್ಲಿಯೇ ಧರಣಿ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದೇವೆ ಎಂದರು.
ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರ, ದಬ್ಬಾಳಿಕೆ, ದುರ್ವರ್ತನೆ, ದೌರ್ಜನ್ಯ, ಎಸ್‌ಸಿಎಸ್‌ಟಿ ಅನುದಾನ ದುರ್ಬಳಕೆ, ಬ್ಯಾಂಕಿನ ಅವ್ಯವಹಾರಗಳನ್ನು ಖಂಡಿಸಿ ಈಗಾಗಲೇ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ವಿವಿಧ ಹಂತಗಳ ಹೋರಾಟ ನಡೆಸಿದರೂ ಯಾವುದೇ ಕ್ರಮವಾಗಿಲ್ಲ ಎಂದರು.
ಇದೇ ವೇಳೆ ಕೆರೆಗಳಿಗೆ ನೀರು ತುಂಬುವಂತೆ ರೈತಪರ ಸಂಘಟನೆಗಳ ಮುಖಂಡರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ವೇಳೆ ದೇವಪ್ಪ ಹುನಕುಂಟಿ, ಮಹಾಂತೇಶ ತಮದಡ್ಡಿ, ಪ್ರಕಾಶ ಜಲಪೂರ, ಶರನು ಸರೂರ, ಲವಕುಮಾರ ದೊಡ್ಡಮನಿ, ರಾಹುಲ ಕಟ್ಟಿಮನಿ, ಗುಂಡಪ್ಪ ಚಲವಾದಿ, ಈಶ್ವರ ಗುಡ್ನಾಳ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

