ದಿ.ಎಂ.ಸಿ ಮನಗೂಳಿ ೩ನೆಯ ಪುಣ್ಯ ಸ್ಮರಣೆ | ಆರೋಗ್ಯ ಉಚಿತ ಶಿಬಿರ | ಶಾಸಕ ಅಶೋಕ ಮನಗೂಳಿ ಅಭಿಮತ
ಸಿಂದಗಿ: ದಿ. ಎಂ.ಸಿ.ಮನಗೂಳಿ ಕೇವಲ ನಮ್ಮ ಮನೆತನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಮತಕ್ಷೇತ್ರಕ್ಕೆ ಆದರ್ಶವಾಗಿದ್ದರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರದಂದು ಪಟ್ಟಣದ ಎಚ್.ಜಿ. ಹೈಸ್ಕೂಲ್ ಆವರಣದಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಇವರ ಮೂರನೇ ಪುಣ್ಯ ಸ್ಮರಣಾರ್ಥವಾಗಿ ಸಿಂದಗಿ ಮನಗೂಳಿ ಪ್ರತಿಷ್ಠಾನ ಹಾಗೂ ವಿಜಯಪುರದ ಬಿ.ಎಂ.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ತಂದೆಯವರು ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ವೈದ್ಯಕೀಯವಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ ಅವರು ಮಾಡಿದ ಕಾರ್ಯ ಜನತೆ ಅವರ ಮೇಲಿಟ್ಟ ಪ್ರೀತಿಯಿಂದ ಇಂದು ನಾನು ಶಾಸಕನಾಗಲು ಕಾರಣವಾಗಿದೆ ಎಂದರು.
ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಜಗತ್ತು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಬದ್ದರಾಗಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಈ ವೇಳೆ ಹಿರಿಯ ಜೀವಿ ಶಿವಪ್ಪಗೌಡ ಬಿರಾದಾರ ಮಾತನಾಡಿದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ್, ಡಾ.ಅರವಿಂದ ಮನಗೂಳಿ, ಡಾ. ಚನ್ನವೀರ ಮನಗೂಳಿ (ಮುತ್ತು) ಡಾ.ಶಾಂತವೀರ ಮನಗೂಳಿ, ವಿಜಯಪುರದ ನೇತ್ರ ತಜ್ಞ ಡಾ.ಸುನೀಲ ಬಿರಾದಾರ, ಡಾ. ಸಂಗಮೇಶ ಪಾಟೀಲ, ಆಲಮೇಲ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಾದಿಕ್ ಸುಂಬಡ, ಶಿವಪ್ಪಗೌಡ ಬಿರಾದಾರ್, ಎಂ. ಎಸ್ ಪಾಟೀಲ್ ಕೊರಳ್ಳಿ, ಗೊಲ್ಲಪ್ಪಗೌಡ ಪಾಟೀಲ ಗೋಲಗೇರಿ ಸೇರಿದಂತೆ ದಿ.ಎಂ.ಸಿ.ಮನಗೂಳಿ ಅವರ ಅಭಿಮಾನಿಗಳು, ಮಹಿಳೆಯರು, ರೈತರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ತಾಲೂಕಿನ ವಿವಿಧ ಹಳ್ಳಿಗಳಿಂದ ನೇತ್ರ ತಪಾಸಣೆಗೆ ಜನರು ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.

