ಮುದ್ದೇಬಿಹಾಳ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು ನಮ್ಮ ಕ್ಷೇತ್ರದಲ್ಲಿ ಅತೀ ಹೆಚ್ಚಿದೆ. ನಾನು ಶಾಸಕನಾಗಿದ್ದಾಗ ಎಲ್ಲ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿದ್ದೆ. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲ ಹಳ್ಳಿಗಳ ಕೆರೆಗಳಲ್ಲಿ ಯಾವಾಗಲೂ ನೀರು ತುಂಬಿರುತ್ತಿತ್ತು. ಇದರಿಂದ ಸುತ್ತಮುತ್ತಲಿನ ಅಂತರ್ಜಲ ಜಾಸ್ತಿಯಾಗಿರುತ್ತಿತ್ತು. ಇದರಿಂದ ಸುತ್ತು ಹಳ್ಳಿಗಳಿಗೆ ಅನುಕೂಲವಾಗಿ ರೈತರಲ್ಲಿ ವಿಶ್ವಾಸ ಮೂಡಿತ್ತು. ಆದರೆ ಇವತ್ತು ಚಿಮ್ಮಲಗಿ ಪೂರ್ವ ಕಾಲುವೆಗೆ ನೀರನ್ನೇ ಬಿಟ್ಟಿಲ್ಲ. ಸ್ವಲ್ಪ ಮಾತ್ರ ಬಿಟ್ಟಿದ್ದು ಇದರಿಂದ ಕೆರೆಗಳು ತುಂಬಲು ಸಾಧ್ಯವಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಸರ್ಕಾರಕ್ಕೆ ಅವಕಾಶವಿದೆ. ಈ ಅವಕಾಶ ತಪ್ಪಿದರೆ ೬-೭ ತಿಂಗಳು ನೀರು ತುಂಬಲು ಸಾಧ್ಯವಿಲ್ಲ. ಕಾರಣ ಈ ಕೂಡಲೇ ಪೂರ್ವ ಕಾಲುವೆಗೆ ನೀರು ಬಿಡುವ ಮೂಲಕ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಪಟ್ಟಣದ ತಮ್ಮ ಫಾರ್ಮಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಮಾಧ್ಯಮದ ವರದಿಗಳನ್ನು ಗಮನಿಸಿದ್ದೇನೆ. ಅಭಿವೃದ್ಧಿಯ ಕುರಿತು ಶಾಸಕರ ಹೇಳಿಕೆಗಳು ಬರುತ್ತಿವೆ. ೨೦೦ ಕೋಟಿ ರೂಪಾಯಿಯ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ನನಗೆ ಗೊತ್ತಿರುವ ಹಾಗೆ ಈ ಸರ್ಕಾರ ಬಂದ ಮೇಲೆ ಇನ್ನೂವರೆಗೆ ಒಂದು ರೂ ಅನುದಾನ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿಗೆ ಆದೇಶ ಮಾಡಿಲ್ಲ. ಈ ಸರ್ಕಾರ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ರೆ ಅಥವಾ ಕಾಮಗಾರಿಗಳನ್ನ ಅಪ್ರೂ ಮಾಡಿ ಆದೇಶ ಮಾಡಿದ್ರೆ ಅದರ ಆದೇಶ ಪ್ರತಿಗಳನ್ನು ಮತ್ತು ಯಾವಾಗ ಟೆಂಡರ್ ಕರೆಯಲಾಯಿತು, ಯಾವಾಗ ಗುದ್ದಲಿ ಪೂಜೆ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.
ನಾನು ಅಲ್ಪ ಸಂಖ್ಯಾತ ಬಂಧುಗಳನ್ನು ಯಾವಾಗಲೂ ಪ್ರೀತಿ ಮಾಡಿದ್ದೆ, ಆದರೆ ಅವರು ಕಾಂಗ್ರೇಸ್ ಗೆ ಮತ ನೀಡಿದ್ದಾರೆ. ಆದರೆ ಇವತ್ತು ಅವರ ಏರಿಯಾಗಳಲ್ಲಿ ನಡೆದ ಮುಖ್ಯ ರಸ್ತೆಯ ಅಭಿವೃದ್ಧಿ ಕೆಲಸಕ್ಕೆ ಜೀನಿ ಮುಳ್ಳುಗಳನ್ನು ಹಚ್ಚಲಾಗಿದೆ. ಆ ಕಾಮಗಾರಿಗೆ ಡಿವೈಡರ್‌ವರೆಗೆ ಎಲ್ಲ ಅನುದಾನ ಮಂಜೂರಾಗಿದೆ ಸರ್ಕಾರದ ಮೇಲೆ ಒತ್ತಡ ಹಾಕಿ ಆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಕೆಲ ಹಣವನ್ನು ಬಿಡುಗಡೆ ಮಾಡಿಸಿದರೆ ಉಳಿದ ಕೆಲಸವನ್ನು ಮಾಡುತ್ತಾರೆ. ಮಹೆಬೂಬ ನಗರದ ಉರ್ದು ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಿಸಿದ್ದೇನೆ. ಅಲ್ಲದೇ ಸಾಂಸ್ಕೃತಿಕ ಭವನ ನಿರ್ಮಿಸಲು ಒತ್ತು ಕೊಟ್ಟಿದ್ದೆ. ಆ ಯಾವ ಕೆಲಸಗಳೂ ಸಧ್ಯ ನಡೆಯುತ್ತಿಲ್ಲ. ವಿದ್ಯಾನಗರದ ಕಾಮಗಾರಿಗಳೆಲ್ಲ ಹಾಗೇ ನಿಂತಿವೆ. ಆಲಮಟ್ಟಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಾವು ಮಂಜೂರು ಮಾಡಿದ ಕೆಲಸಗಳನ್ನೂ ಮಾಡುತ್ತಿಲ್ಲ ಎಂಬ ಬಗ್ಗೆ ನನಗೆ ನೋವಿದೆ. ಈಗ ಬೇರೆ ಮುಖ್ಯಮಂತ್ರಿಗಳಿಗೆ ಪೌರ ಸನ್ಮಾನ ಮಾಡುತ್ತಿದ್ದೀರಿ ಎಂದು ಕೇಳ್ಪಟ್ಟೆ. ಅವರ ಮತ್ತು ಅವರ ಸರ್ಕಾರದ ಕೊಡುಗೆ ನಮ್ಮ ತಾಲೂಕಿಗೆ ಏನಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೆ ಗೌರವ ಕೊಡೋದು ತಪ್ಪು ಅಂತ ನಾನು ಹೇಳ್ತಿಲ್ಲ. ಅವರ ಕೊಡುಗೆ ಏನು ಅಂತ ಹೇಳಿ ಸನ್ಮಾನ ಮಾಡಿದರೆ ಜನಕ್ಕೆ ಖುಷಿಯಾಗುತ್ತೆ. ಆದರೆ ನಿಮ್ಮ ರಾಜಕಾರಣಕ್ಕೆ ಈ ರೀತಿ ಮಾಡ್ತಿರೋದಕ್ಕೆ ನಮ್ಮ ವಿರೋಧ ಇದೆ ಎಂದರು.
ಬರ ಪರಿಹಾರದಲ್ಲಿ ರೈತರಿಗೆ ಈ ಸರ್ಕಾರ ಮೋಸ ಮಾಡುತ್ತಿದೆ. ನಮ್ಮ ಸರ್ಕಾರವಿದ್ದಾಗ ನಮ್ಮ ಕ್ಷೇತ್ರಕ್ಕೆ ಯಾವುದೇ ಪಕ್ಷ ನೋಡದೇ ಬಡವರಿಗೆ ೯ಸಾವಿರ ಮನೆಗಳ ಕೊಟ್ಟಿದ್ದೇನೆ. ಅದರಲ್ಲಿ ರಾಜಕಾರಣ ಮಾಡಲಾಗುತ್ತಿದ್ದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಪಿಡಿಓ ಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ಕೂಡಲೇ ಅದನ್ನು ಸರಿಪಡಿಸಬೇಕು ಎಂದರು.
ಈ ವೇಳೆ ಭಾಜಪಾ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಹಿರಿಯ ಮುಖಂಡರಾದ ಬಿ.ಪಿ.ಕುಲಕರ್ಣಿ, ಪ್ರಭು ಕಡಿ, ಪುರಸಭೆ ಸದಸ್ಯರಾದ ಚನ್ನಪ್ಪಣ್ಣ ಕಂಠಿ, ಸದಾಶಿವ ಮಾಗಿ, ರಾಮು ಪೂಜಾರಿ, ಅಶೋಕ ವನಹಳ್ಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರಮುಖರಾದ ಡಾ.ವಿರೇಶ ಪಾಟೀಲ, ರಾಜು ಬಳ್ಳೊಳ್ಳಿ, ಶ್ರೀಶೈಲ ದೊಡಮನಿ, ಸೋಮನಗೌಡ ಬಿರಾದಾರ, ಎಂ.ಆರ್.ಪಾಟೀಲ ವಕೀಲರು, ಗಿರೀಶಗೌಡ ಪಾಟೀಲ, ಗೌರಮ್ಮ ಹುನಗುಂದ, ಅಶೋಕ ರಾಠೋಡ, ಪ್ರಶಾಂತ ಹಿರೇಮಠ, ಪರಶುರಾಮ ನಾಲತವಾಡ, ರಾಜು ಹೊಳಿ, ಗಿರಣಿ ಗೌಡಪ್ಪ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

